ಸುಂಟಿಕೊಪ್ಪದಲ್ಲಿ ಸಡಗರ ಸಂಭ್ರಮದ ಈದ್ ಮಿಲಾದ್

| Published : Sep 17 2024, 12:55 AM IST

ಸುಂಟಿಕೊಪ್ಪದಲ್ಲಿ ಸಡಗರ ಸಂಭ್ರಮದ ಈದ್ ಮಿಲಾದ್
Share this Article
  • FB
  • TW
  • Linkdin
  • Email

ಸಾರಾಂಶ

ಸುಂಟಿಕೊಪ್ಪದಲ್ಲಿ ಮುಸ್ಲಿಂ ಬಾಂಧವರು ದಫ್‌ ಭಾರಿಸುತ್ತಾ ಶಾಂತಿ ಸೌಹಾರ್ದತೆಯ ಸಂಕೇತವಾದ ಈದ್‌ ಮಿಲಾದ್‌ ಹಬ್ಬವನ್ನು ಆಚರಿಸಿದರು.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ಮಹಮ್ಮದ್ ಪೈಗಂಬರರ 1499 ಜನ್ಮದಿನದ ಪ್ರಯುಕ್ತ ಸುಂಟಿಕೊಪ್ಪದಲ್ಲಿ ಮುಸ್ಲಿಂ ಬಾಂಧವರು ದಫ್ ಬಾರಿಸುತ್ತಾ ಶಾಂತಿ ಸೌಹಾರ್ದತೆಯ ಸಂಕೇತದ ಈದ್ ಮಿಲಾದ್ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಿದರು.

ಸುಂಟಿಕೊಪ್ಪ ಪಟ್ಟಣದ ಸುನ್ನಿ ಶಾಫಿ ಜುಮ್ಮ ಮಸ್ಜಿದ್, ಸುನ್ನಿ ಹನಫಿ ಮುಸ್ಲಿಂ ಜಮಾಅತ್, ಮುನ್ವರಲ್ ಇಸ್ಲಾಂ ಮದರಸ, ಸುನ್ನಿ ಶಾಫಿ ಜಮಾಅತ್, ಗದ್ದೆಹಳ್ಳದ ನೂರು ಜುಮ್ಮ ಮಸ್ಜಿದ್ ಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಕಳೆದ 3 ದಿನಗಳಿಂದ ಮಸೀದಿಯ ಮದ್ರಸಗಳಲ್ಲಿ ವಿದ್ಯಾಭ್ಯಾಸ ನಡೆಸುವ ಮಕ್ಕಳಿಗೆ ಧಾರ್ಮಿಕತೆಯ ಬಗ್ಗೆ ವಿವಿಧ ಸ್ಪರ್ಧಾ ಕಾರ್ಯಕ್ರಮಗಳನ್ನು ಧಾರ್ಮಿಕತೆಯ ಬಗ್ಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಮಸೀದಿಗಳ ಮೌಲವಿಗಳಿಂದ ಧಾರ್ಮಿಕ ಪ್ರವಚನವನ್ನು ಮುಸ್ಲಿಂ ಬಾಂಧವರಿಗೆ ನೀಡಿದರು.

ಸೋಮವಾರ ಬೆಳಗ್ಗೆ ಸುಂಟಿಕೊಪ್ಪ ಪಟ್ಟಣದ ವಿವಿಧ ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಿ ನಂತರ ಮುಸ್ಲಿಂ ಬಾಂಧವರು ಮೆರವಣಿಗೆಯಲ್ಲಿ ವಿಶೇಷ ಉಡುಗೆಗಳನ್ನು ತೊಟ್ಟು ಹಾಡಿನೊಂದಿಗೆ ದಫ್ ಬಡಿಯುತ್ತಾ ಶಾಲೆ ಮಕ್ಕಳು ಚಪ್ಪಾಳೆ, ಹೂಗುಚ್ಚ, ಹಸಿರು ಧ್ವಜ ಹಿಡಿದು ಧ್ವನಿ ವರ್ಧಕದಲ್ಲಿ ಮಹಮ್ಮದ್ ಪೈಗಂಬರರ ಶಾಂತಿ ಸೌಹಾರ್ದತೆ ಆದರ್ಶ ಗುಣಗಳನ್ನು ಪ್ರಚುರಪಡಿಸುತ್ತಿದ್ದರೆ, ಈದ್‌ಮಿಲಾದ್ ಆಚರಣೆಗೆ ಮತ್ತಷ್ಟು ಇಂಬು ನೀಡಿತ್ತು. ರಸ್ತೆ ಬದಿಯಲ್ಲಿ ಮುಸ್ಲಿಂ ಮಹಿಳೆಯರು ಗುಂಪು ಗುಂಪಾಗಿ ನಿಂತಿದ್ದು, ಸಾರ್ವಜನಿಕರು ಘೋಷಯಾತ್ರೆಯನ್ನು ಸಂಭ್ರದಿಂದ ವೀಕ್ಷಿಸಿದರು.

ಸುಂಟಿಕೊಪ್ಪ ಶ್ರೀ ಕೋದಂಡ ರಾಮ ದೇವಾಲಯದ ಬಳಿಯಲ್ಲಿ ಹಿಂದೂ ಬಾಂಧವರು ಮುಸ್ಲಿಂ ಬಾಂಧವರಿಗೆ ತಂಪು ಪಾನೀಯವನ್ನು ಪಂಚಾಯಿತಿ ಸದಸ್ಯ ಮಂಜು, ಬಿ.ಎಂ.ಸುರೇಶ್, ಉದ್ಯಮಿ ದೀನು ದೇವಯ್ಯ, ಧನು ಕಾವೇರಪ್ಪ, ಸುರೇಶ್‌ಗೋಪಿ, ಎಂ.ಎಸ್.ಸುನಿಲ್ ಹಾಗೂ ಭುವಿತ್ ವಿತರಿಸುವ ಮೂಲಕ ಸೌಹಾರ್ದತೆಯನ್ನು ಮೆರೆದರು.

ಸುಂಟಿಕೊಪ್ಪ ಪಟ್ಟಣದ ಸುಂಟಿಕೊಪ್ಪ ಮುಸ್ಲಿಂ ಜಮಾಯತ್‌ನ ಇಬ್ರಾಹಿಂ ಹ್ಯಾಸನಿ, ಸುನ್ನಿ ಹನಫಿ ಮುಸ್ಲಿಂ ಜಮೀಯ ಮಸೀದಿ ಮೌಲನಾ ಜುಬ್ಬೇರ್ ಅಜಾರತ್, ಸುನ್ನಿ ಶಾಫಿ ಜುಮಾ ಮಸ್ಜಿದ್ ಧಾರ್ಮಿಕ ಮೌಲವಿ ಮೊಹಮದ್ ಹುಸೈನ್ ಹಾಗೂ ಗದ್ದೆಹಳ್ಳದ ನೂರು ಜುಮ್ಮ ಮಸ್ಜಿದ್‌ನ ಅಬ್ಧುಲ್ ಅಜೀಜ್ ಅವರು ಧಾರ್ಮಿಕ ಪ್ರವಚನ, ಪ್ರಾರ್ಥನೆಯನ್ನು ಮಸೀದಿಯ ಮೌಲ್ವಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡು ನಂತರ ಸಭಾ ಸಮಾರಂಭದ ವೇದಿಕೆಯಲ್ಲಿ ಧಾರ್ಮಿಕ ಪ್ರವಚನಗಳನ್ನು ಆಶೀರ್ವಚನಗಳನ್ನು ನೀಡಿದರು.

ಹಬ್ಬ ಆಚರಣೆ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ಘಟಿಸದಂತೆ ಮುಂಜಾಗ್ರತ ಕ್ರಮವನ್ನು ಕೊಡಗು ಜಿಲ್ಲಾ ವರಿಷ್ಠಾಧಿಕಾರಿ ರಾಮರಾಜನ್, ಜಿಲ್ಲಾ ಹೆಚ್ಚುವರಿ ವರಿಷ್ಠಾಧಿಕಾರಿ ಸುಂದರರಾಜ್, ಕುಶಾಲನಗರ ತಾಲೂಕು ಡಿವೈಎಸ್‌ಪಿ ಆರ್.ವಿ.ಗಂಗಾಧರಪ್ಪ, ಕುಶಾಲನಗರ ವೃತ್ತನಿರೀಕ್ಷಕರಾದ ರಾಜೇಶ್ ಕೋಟ್ಯಾನ್, ಸುಂಟಿಕೊಪ್ಪ ಠಾಣಾಧಿಕಾರಿ ಚಂದ್ರಶೇಖರ್ ಹಾಗೂ ಸಿಬ್ಬಂದಿ ಸಶಸ್ತ್ರ ಪಡೆಯ ಪೊಲೀಸರು ಬಿಗಿ ಬಂದೋಬಸ್ತನ್ನು ಏರ್ಪಡಿಸಿದ್ದರು.