ಹಗಲಿನಲ್ಲಿ ರೈತರ ಪಂಪ್‌ಸೆಟ್‌ಗೆ ನಿರಂತರ ವಿದ್ಯುತ್ ಪೂರೈಕೆ ಮಾಡಿ ಎಂದು ತಾಲೂಕಿನ ಬೇವೂರು ಗ್ರಾಮದ ಜೆಸ್ಕಾಂ ಕಚೇರಿ ಎದುರು ರೈತರು ಪ್ರತಿಭಟನೆ ನಡೆಸಿದರು. ಬೇವೂರು ಹಾಗೂ ಸುತ್ತಮುತ್ತಲಿನ ಗ್ರಾಮದ ರೈತರು ಬೇವೂರು 110 ಕೆವಿ ಸ್ಟೇಷನ್ ವಿದ್ಯುತ್ ವಿತರಣಾ ಕೇಂದ್ರ ಹಾಗೂ ಜೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು.

ಯಲಬುರ್ಗಾ: ಹಗಲಿನಲ್ಲಿ ರೈತರ ಪಂಪ್‌ಸೆಟ್‌ಗೆ ನಿರಂತರ ವಿದ್ಯುತ್ ಪೂರೈಕೆ ಮಾಡಿ ಎಂದು ತಾಲೂಕಿನ ಬೇವೂರು ಗ್ರಾಮದ ಜೆಸ್ಕಾಂ ಕಚೇರಿ ಎದುರು ರೈತರು ಪ್ರತಿಭಟನೆ ನಡೆಸಿದರು.

ಬೇವೂರು ಹಾಗೂ ಸುತ್ತಮುತ್ತಲಿನ ಗ್ರಾಮದ ರೈತರು ಬೇವೂರು 110 ಕೆವಿ ಸ್ಟೇಷನ್ ವಿದ್ಯುತ್ ವಿತರಣಾ ಕೇಂದ್ರ ಹಾಗೂ ಜೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು.

ಜೆಡಿಎಸ್ ಜಿಲ್ಲಾ ವಕ್ತಾರ ಮಲ್ಲನಗೌಡ ಎಸ್. ಕೋನನಗೌಡ್ರು ಮಾತನಾಡಿ, ಈ ಹಿಂದೆ ಹಗಲಿನಲ್ಲಿ ನಿರಂತರವಾಗಿ ಏಳು ತಾಸು ವಿದ್ಯುತ್ ಪೂರೈಸಲಾಗುತ್ತಿತ್ತು. ಆದರೆ ಸರ್ಕಾರ ಏಕಾಏಕಿ ತೀವ್ರ ಬರಗಾಲದ ನಡುವೆಯೂ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟುಮಾಡಿ ರೈತರೊಂದಿಗೆ ಕಣ್ಣುಮುಚ್ಚಾಲೆ ಆಡುತ್ತಿದೆ. ಈ ಭಾಗದಲ್ಲಿ ಕರಡಿಗಳ ಹಾವಳಿ ಹೆಚ್ಚಾಗಿದ್ದು, ರಾತ್ರಿ ವೇಳೆಯಲ್ಲಿ ವಿದ್ಯುತ್ ಪೂರೈಸುವುದರಿಂದ ರೈತರ ಜೀವಕ್ಕೆ ಅಪಾಯವಿದೆ. ಶೀಘ್ರವೇ ಹಗಲಿನಲ್ಲಿ ವಿದ್ಯುತ್ ಪೂರೈಸಿ ಇಲ್ಲವೇ ರೈತರಿಗೆ ವಿಷ ಕೊಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಭಾಗದಲ್ಲಿ ಅತಿ ಹೆಚ್ಚು ಪವನ ವಿದ್ಯುತ್ ಸ್ಥಾವರಗಳಿದ್ದು, ನಮಗೆ ಸರಿಯಾಗಿ ವಿದ್ಯುತ್ ಪೂರೈಸದಿದ್ದರೆ ಹೇಗೆ ಎಂದು ಸರ್ಕಾರವನ್ನು ಪ್ರಶ್ನಿಸಿದರು.

ಮುಖಂಡ ಅಯ್ಯನಗೌಡ ಕೆಂಚಮ್ಮನವರ್ ಮಾತನಾಡಿ, ರೈತ ವರ್ಗಕ್ಕೆ ಮೋಸ ಮಾಡುವ ಕಾರ್ಯ ಸಲ್ಲದು. ರೈತರಿಗೆ ಹಗಲಿನಲ್ಲಿ ವಿದ್ಯುತ್ ನೀಡಬೇಕು. ಇದರಿಂದ ಅವರಿಗೆ ಅನುಕೂಲ ಆಗುತ್ತದೆ. ರಾತ್ರಿ ವೇಳೆ ಎಷ್ಟೋ ರೈತರು ವಿಷಜಂತುಗಳ ಕಡಿತಕ್ಕೆ ಹಾಗೂ ವಿದ್ಯುತ್ ಶಾರ್ಟ್‌ ಸರ್ಕೀಟ್‌ಗೆ ತೀರಿಕೊಂಡಿದ್ದನ್ನು ಅರ್ಥ ಮಾಡಿಕೊಳ್ಳಬೇಕು. ಹಗಲಿನಲ್ಲಿ ವಿದ್ಯುತ್ ನೀಡುವುದರಿಂದ ರೈತರಿಗೆ ಅನುಕೂಲ ಆಗುತ್ತದೆ ಎಂದರು.

ಧರಣಿ ಸ್ಥಳಕ್ಕೆ ಕೊಪ್ಪಳದ ಜೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರ ಮೊಟ್ಲಾ ನಾಯಕ್ ಆಗಮಿಸಿ, ಎರಡು ದಿವಸ ಸಮಯಾವಕಾಶ ಕೇಳಿದರು. ಆನಂತರ ಮಾತನಾಡಿದ ಅವರು, ಅತಿ ಶೀಘ್ರದಲ್ಲೇ ಸರ್ಕಾರ ವಿದ್ಯುತ್ ಖರೀದಿ ಒಡಂಬಡಿಕೆ ಮಾಡಿಕೊಳ್ಳಲಿದ್ದು, ಹಗಲಿನಲ್ಲಿ ವಿದ್ಯುತ್ ಪೂರೈಕೆ ಮಾಡಲಾಗುವುದು ಎಂದರು. ಎರಡು ಮೂರು ದಿನದಲ್ಲಿ ಹಗಲಿನಲ್ಲಿ ನಿರಂತರ ವಿದ್ಯುತ್ ಪೂರೈಸಲು ವಿಫಲವಾದರೆ ಶನಿವಾರ ಇದೇ ಬೇವೂರು ಗ್ರಾಮದ 110 ಕೆ ವಿ ಸ್ಟೇಷನ್ ಮುಂದೆ ಅನಿರ್ದಿಷ್ಟಾವಧಿ ಆಹೋರಾತ್ರಿ ಧರಣಿ ಹಮ್ಮಿಕೊಳ್ಳಲಾಗುವುದು ಎಂದು ರೈತರು ಎಚ್ಚರಿಸಿದರು.

ಡಿವೈಎಸ್ಪಿ ಸಿದ್ದಲಿಂಗನಗೌಡ ಪಾಟೀಲ್, ಜೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತ ಕಲಿಂ ಅಹಮದ್, ಕೆಪಿಟಿಸಿಎಲ್ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಮಹಾಂತೇಶ, ಬೇವೂರು ಠಾಣೆಯ ಪಿಎಸ್ಐ ಕಾಳಿಂಗ ಎ., ಪ್ರೊಬೆಷನರಿ ಪಿಎಸ್ಐ ಸಂಗನಗೌಡ ಪಾಟೀಲ್, ಎಇ ನೂರ್ ಫಾತಿಮಾ, ಮುಖಂಡರಾದ ಮಾನಪ್ಪ ವಾಲ್ಮೀಕಿ, ಸೋಮಲಿಂಗಪ್ಪ ಕೊಳಜಿ, ಬಸವರಾಜ ಜೆಲ್ಲಿ, ಸಿದ್ದಪ್ಪ ಮಣ್ಣಿನವರ್, ಕನಕಪ್ಪ ತಳವಾರ್, ಯಮನಪ್ಪ ವಾಲ್ಮೀಕಿ, ಬಸವಣ್ಣಪ್ಪ ಕೊಳಜಿ, ನಾಗರಾಜ ಹಾಲಳ್ಳಿ, ಯಂಕಪ್ಪ ಅಳ್ಳಳ್ಳಿ, ಯಮನಪ್ಪ ಕಂಬಳಿ, ಹನುಮೇಶ ಕೋನನಗೌಡ್ರು, ಯಮನೂರಪ್ಪ ಕಾರೇಹನಮಗೌಡ್ರು, ಶರಣಪ್ಪ ಮಕ್ಕಳ್ಳಿ, ಮುರುಡಿ, ವಣಗೇರಿ, ಹುಣಸಿಹಾಳ, ಕೋಳಿಹಾಳ್, ಬೇವೂರು ಹಾಗೂ ಸುತ್ತಮುತ್ತಲಿನ ಗ್ರಾಮದ ರೈತರಿದ್ದರು.