ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ಧರ್ಮ ಮಾರ್ಗದಲ್ಲಿ ಬದುಕು ರೂಪಿಸುಕೊಂಡರೆ ಮಾತ್ರ ನಾವು ಪ್ರಾಣಿಗಳಿಗಿಂತ ಭಿನ್ನವಾಗಿರಲು ಸಾಧ್ಯ. ಧರ್ಮ ಮಾರ್ಗದಲ್ಲಿ ಬದುಕು ಕಲಿಸುವ ದೇಶವೊಂದಿದ್ದರೆ ಅದು ಭಾರತ ಮಾತ್ರ ಎಂದು ಸಿದ್ದಗಂಗಾ ಮಠಾಧಿಪತಿ ಶ್ರೀ ಸಿದ್ದಲಿಂಗ ಸ್ವಾಮೀಜಿ ಹೇಳಿದ್ದಾರೆ.ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುತ್ತಿರುವ ಲಕ್ಷದೀಪೋತ್ಸವದ ಸಂದರ್ಭ ಸೋಮವಾರ ಸಂಜೆ ನಡೆದ 91 ನೇ ವರ್ಷದ ಸರ್ವಧರ್ಮ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಆಶೀರ್ವದಿಸಿದರು.
ಭಾರತ ಎಲ್ಲ ಮತ ಪಂಥಗಳಿಗೆ ಆಶ್ರಯ ನೀಡಿದೆ. ಭಾರತ ಎಂದರೆ ಬೆಳಕು. ಬೆಳಕಿನಲ್ಲಿ ಬದುಕುತ್ತಿರುವವರು ಭಾರತೀಯರು ಎಂದರು.ಧರ್ಮಸ್ಥಳದಲ್ಲಿ ನಡೆಯುವ ಪ್ರತಿ ಕಾರ್ಯಗಳೂ ಧರ್ಮದ ಕಾರ್ಯಗಳೇ ಆಗಿವೆ. ಶಿವನ ಸ್ಥಾನ ಒಂದೆಡೆಯಾದರೆ, ಪ್ರತಿದಿನ ಪ್ರಸಾದ ನೀಡುವ ಅನ್ನಪೂರ್ಣಾದೇವಿಯ ಪವಿತ್ರ ಕ್ಷೇತ್ರ ಇದು. ಇಂತಹ ಕ್ಷೇತ್ರಗಳಿದ್ದರೇನೇ ಶಾಂತಿ, ಸಮಾಧಾನ ಇರುತ್ತದೆ ಎಂದರು.
ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ವಾಗ್ಮಿ ವಿದ್ವಾಂಸ ಗುರುರಾಜ ಕರ್ಜಗಿ ಅವರು, ಶಾಂತಿ, ತೃಪ್ತಿ, ಸಮಾನತೆ ಎಂಬುದು ಎಲ್ಲಾ ಧರ್ಮದ ಮೂಲವಾಗಿರಬೇಕು. ಹಿಂಸೆ ಧರ್ಮಕ್ಕೆ ವಿರುದ್ಧ. ಅದನ್ನು ಅನುಸರಿಸುವುದು, ಹೇಳುವುದು ಧರ್ಮವಾಗಿರಲು ಸಾಧ್ಯವಿಲ್ಲ. ಧರ್ಮ ಅರ್ಥವಾಗದಿರುವವರು ಟೆರರಿಸಂ ಅನುಸರಿಸುತ್ತಾರೆ. ಶಾಂತಿ ಎಂಬುದೇ ಪರಮ ಸತ್ಯ ಎಂದರು.ಭಾರತೀಯ ವಿದ್ಯೆಗಳಲ್ಲಿ ಪರಿಣತರಾದ ಡಾ. ವಿ.ಬಿ.ಆರತಿ ಅವರು ‘ಪ್ರಾಚೀನ ಭಾರತ- ಧರ್ಮ ಸಮನ್ವಯತೆ’ ವಿಚಾರವಾಗಿ, ಅಂಕಣ ಬರಹಗಾರ ಮಹಮದ್‌ಗೌಸ ಹವಾಲ್ದಾರ ಅವರು ‘ಮಧ್ಯಕಾಲೀನಭಾರತ- ಧರ್ಮ ಸಮನ್ವಯತೆ’ ಎಂಬ ಬಗ್ಗೆ ಹಾಗೂ ಹಿರಿಯ ನ್ಯಾಯವಾದಿ ಡಾ.ಎಂ.ಆರ್.ವೆಂಕಟೇಶ ಅವರು ‘ಆಧುನಿಕ ಭಾರತ-ಧರ್ಮ ಸಮನ್ವಯತೆ’ ಕುರಿತು ಉಪನ್ಯಾಸ ನೀಡಿದರು.
ಪ್ರಾಸ್ತಾವಿಕ ಮಾತನಾಡಿದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ, ದೇಶದಲ್ಲಿ ಕಾಲಕಾಲಕ್ಕೆ ಧಾರ್ಮಿಕ, ಆರ್ಥಿಕ ಹಾಗೂ ಸಾಮಾಜಿಕ ಪರಿಸ್ಥಿತಿಗಳಲ್ಲಿ ಏರುಪೇರುಗಳಾಗುತ್ತವೆ. ಆದರೆ ಇಂತಹ ಪರಿಸ್ಥಿತಿಗಳಲ್ಲಿಯೂ ಧರ್ಮವು ನಿರಂತರತೆಯನ್ನು ಕಾಯ್ದುಕೊಳ್ಳುವುದೇ ಸವಾಲಾಗಿದೆ. ಆದರೆ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಾವು ಬದ್ಧತೆಯಿಂದ, ಪ್ರಾಮಾಣಿಕವಾಗಿ ಕೊರೋನ ಸಂದರ್ಭಗಳಲ್ಲಿಯೂ ಕೂಡ ಈ ನಿರಂತರತೆಯನ್ನು ಕಾಯ್ದುಕೊಂಡು ಯಶಸ್ವಿಯಾಗಿದ್ದೇವೆ ಎಂದರು.ಭಿನ್ನಾಭಿಪ್ರಾಯಗಳು ಬಂದಾಗ ಧರ್ಮಿಷ್ಠರು, ಜ್ಞಾನಿಗಳು ಅವುಗಳನ್ನು ಬಿಟ್ಟುಬಿಡದೆ ಜೊತೆಗೂಡಿಸಿಕೊಂಡೇ ಹೋಗಬೇಕಾಗುತ್ತದೆ. ಧರ್ಮಸ್ಥಳದಲ್ಲಿ ನಡೆಯುವ ಅನೇಕ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಗಳು ದರ್ಮದ ಮೂಲದ ನಿಲುವಿನೊಂದಿಗೆ, ಮಾನವ ಕಲ್ಯಾಣದೊಂದಿಗೆ ರೂಪಿತಗೊಂಡು ಯಶಸ್ವಿಯಾಗಿ ಮಾದರಿಯಾಗಿ ಮನ್ನಣೆಗಳಿಸಿವೆ ಎಂದರು.
ಹೇಮಾವತಿ ವೀ.ಹೆಗ್ಗಡೆ, ಹರ್ಷೇಂದ್ರ ಕುಮಾರ್, ಸುರೇಂದ್ರ ಕುಮಾರ್ ಇದ್ದರು.ಶ್ರೀ ಮಂಜುನಾಥೇಶ್ವರ ಸಂಸ್ಕೃತಿ ಪ್ರತಿಷ್ಠಾನದ ಡಾ.ಎಸ್. ಅರ್.ವಿಘ್ನೇಶ್ವರ ಅವರು ಸಂಪಾದಿಸಿದ ‘ಭೈರವೇಶ್ವರ ಪುರಾಣ’ (ಶೈವ ಸಿದ್ಧಾಂತ ಸುಧಾ ಸಿಂಧು) ಕೃತಿಯನ್ನು ಶ್ರೀಗಳು ಲೋಕಾರ್ಪಣೆಗೊಳಿಸಿದರು.
ಉದ್ಘಾಟಕರ ಸನ್ಮಾನ ಪತ್ರವನ್ನು ಉಪನ್ಯಾಸಕ ಸುನಿಲ್ ಪಂಡಿತ್, ಅಧ್ಯಕ್ಷರ ಸನ್ಮಾನ ಪತ್ರವನ್ನು ಶ್ರದ್ಧಾ ಅಮಿತ್ ವಾಚಿಸಿದರು. ಧರ್ಮಸ್ಥಳ ಗ್ರಾ.ಪಂ.ಉಪಾಧ್ಯಕ್ಷ ಶ್ರೀನಿವಾಸ ರಾವ್ ವಂದಿಸಿದರು. ಉಪನ್ಯಾಸಕ ಡಾ.ಶ್ರೀಧರ ಭಟ್ ನಿರ್ವಹಿಸಿದರು.-----------
ಭಿನ್ನಾಭಿಪ್ರಾಯಗಳು ಬಂದಾಗ ಕೆಲವೊಮ್ಮೆ ಸಹಿಸಿಕೊಂಡು ಸುಮ್ಮನಿರಬೇಕಾಗುತ್ತದೆ. ತಿಳಿದವರಿಗೆ ಹೆಚ್ಚು ತಿಳಿಸಿಹೇಳಬಹುದು, ಏನೂ ತಿಳಿಯದವರಿಗೆ ತಿಳಿ ಹೇಳಬಹುದು. ಆದರೆ ಅಲ್ಪಸ್ವಲ್ಪ ತಿಳಿದವರಿಗೆ, ತಿಳಿದುಕೊಳ್ಳಬೇಕೆಂಬ ಹಂಬಲ ಇಲ್ಲದವರಿಗೆ, ಜ್ಞಾನಿಗಳಾಗುವ ತವಕವಿಲ್ಲದವರಿಗೆ ತಿಳಿಯಪಡಿಸುವ ಬದಲು ಸಹಿಸಿಕೊಂಡು ಸುಮ್ಮನಿರಬೇಕಾಗುತ್ತದೆ.ಡಾ.ವೀರೇಂದ್ರ ಹೆಗ್ಗಡೆ, ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ.