ಸಾರಾಂಶ
ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವಕ್ಕೆ ಮುನ್ನುಡಿಯಾದ ದಸರಾ ಗಜಪಯಣಕ್ಕೆ ಮೈಸೂರು ಜಿಲ್ಲೆ ಹುಣಸೂರು ತಾಲೂಕು ವೀರನಹೊಸಹಳ್ಳಿಯಲ್ಲಿ ಬುಧವಾರ ಬೆಳಗ್ಗೆ ಚಾಲನೆ ದೊರೆಯಿತು
ಬಿ. ಶೇಖರ್ ಗೋಪಿನಾಥಂ
ವೀರನಹೊಸಹಳ್ಳಿ (ಹುಣಸೂರು ತಾಲೂಕು) : ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವಕ್ಕೆ ಮುನ್ನುಡಿಯಾದ ದಸರಾ ಗಜಪಯಣಕ್ಕೆ ಮೈಸೂರು ಜಿಲ್ಲೆ ಹುಣಸೂರು ತಾಲೂಕು ವೀರನಹೊಸಹಳ್ಳಿಯಲ್ಲಿ ಬುಧವಾರ ಬೆಳಗ್ಗೆ ಚಾಲನೆ ದೊರೆಯಿತು.2024ರ ದಸರಾ ಮಹೋತ್ಸವದಲ್ಲಿ ಭಾಗವಹಿಸುವ 14 ಆನೆಗಳ ಪೈಕಿ ಮೊದಲ ತಂಡದ 9 ಆನೆಗಳು ಕಾಡಿನಿಂದ ನಾಡಿಗೆ ಪಯಣ ಬೆಳೆಸಿದವು.
ಸುಮಾರು 2 ಕಿ.ಮೀ. ಗಜಪಯಣ ಬಳಿಕ ಲಾರಿಗಳಲ್ಲಿ ಹೊರಟ 9 ಆನೆಗಳು ಸಂಜೆಯ ವೇಳೆಗೆ ಮೈಸೂರಿಗೆ ಬಂದು ತಲುಪಿದವು.ದಸರಾ ಜಂಬೂಸವಾರಿಯಲ್ಲಿ 750 ಕೆ.ಜಿ ತೂಕದ ಚಿನ್ನದ ಅಂಬಾರಿ ಹೊರಲಿರುವ ಅಭಿಮನ್ಯು ಆನೆಯ ನೇತೃತ್ವದಲ್ಲಿ ಧನಂಜಯ, ಗೋಪಿ, ಭೀಮ, ಕಂಜನ್, ರೋಹಿತ್, ಏಕಲವ್ಯ, ವರಲಕ್ಷ್ಮಿ ಮತ್ತು ಲಕ್ಷ್ಮಿ ಆನೆಗಳು ಲಾರಿಯ ಮೂಲಕ ಸಂಜೆ ವೇಳೆಗೆ ಮೈಸೂರಿನ ಅಶೋಕಪುರಂನಲ್ಲಿರುವ ಅರಣ್ಯ ಭವನಕ್ಕೆ ಬಂದು ಸೇರಿದವು.
ಏಕಲವ್ಯ ಆನೆಯು ಇದೇ ಮೊದಲ ಬಾರಿಗೆ ದಸರೆಯಲ್ಲಿ ಭಾಗವಹಿಸುತ್ತಿದೆ. ಉಳಿದ ಪ್ರಶಾಂತ, ಮಹೇಂದ್ರ, ಸುಗ್ರೀವ, ಲಕ್ಷ್ಮಿ ಮತ್ತು ಹಿರಣ್ಯಾ ಆನೆಗಳು ಎರಡನೇ ತಂಡದಲ್ಲಿ ಕಾಡಿನಿಂದ ನಾಡಿಗೆ ಬರಲಿವೆ.ಗಜಪಯಣಕ್ಕೆ ಚಾಲನೆಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆಯು ವೀರನಹೊಸಹಳ್ಳಿ ಬಳಿಯ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಹೆಬ್ಬಾಗಿಲು ಬಳಿ ಸಾಂಪ್ರದಾಯಿಕವಾಗಿ ಆನೆಗಳಿಗೆ ಪುರೋಹಿತರು ಪೂಜೆ ಸಲ್ಲಿಸಿದರು.
ಪುರೋಹಿತರಾದ ಎಸ್.ವಿ. ಪ್ರಹ್ಲಾದ್ ರಾವ್ ನೇತೃತ್ವದಲ್ಲಿ ನಡೆದ ಪೂಜೆ ವೇಳೆ ಅಲಂಕೃತ ಗಜಪಡೆಗಳ ಪಾದ ತೊಳೆದ ಅರ್ಚಕರು, ನಂತರ ಆನೆಗಳಿಗೆ ದೃಷ್ಟಿದೋಷ ತೆಗೆದರು. ಬಳಿಕ ಹಣೆ ಹಾಗೂ ಪಾದಗಳಿಗೆ ಕುಂಕುಮ, ಅರಿಶಿಣ, ಗರಿಕೆ, ಬೆಲ್ಲ, ಕಬ್ಬು, ಕಡುಬು, ಪಂಚ ಕಜ್ಜಾಯ, ಎಲೆ, ಅಡಿಕೆ, ಗಂಧ, ಪಂಚಫಲ, ಚಕ್ಕುಲಿ, ನಿಪ್ಪಟ್ಟು, ಹೋಳಿಗೆ, ದ್ರಾಕ್ಷಿ, ಗೋಡಂಬಿ, ಕಲ್ಲು ಸಕ್ಕರೆ, ಮೋದಕ ನೈವೇದ್ಯ ನೀಡಿ, ಶೋಡಷೋಪಚಾರ ಪೂಜೆ, ಗಣಪತಿ ಅರ್ಚನೆಯೊಂದಿಗೆ ವನದೇವತೆ ಹಾಗೂ ಚಾಮುಂಡೇಶ್ವರಿಗೆ ಪ್ರಾರ್ಥನೆ ಸಲ್ಲಿಸಿದರು.
ತದನಂತರ ಆನೆಗಳಿಗೆ ನವಧಾನ್ಯಗಳ ಪೂಜೆ ನೆರವೇರಿಸಲಾಯಿತು.ಬಳಿಕ ಬೆಲ್ಲ, ಕಬ್ಬು, ತೆಂಗಿನಕಾಯಿ, ಹಣ್ಣುಗಳನ್ನು ಆನೆಗಳಿಗೆ ತಿನ್ನಿಸಿ ಪುಷ್ಪಾರ್ಚನೆ ಮಾಡುವ ಮೂಲಕ ದಸರಾ ಗಜಪಯಣಕ್ಕೆ ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಚಾಲನೆ ನೀಡಿದರು. ಈ ವೇಳೆ ಮಾವುತರ ಸಂಜ್ಞೆಯಂತೆ ಸೊಂಡಿಲೆತ್ತಿ ಸಲ್ಯೂಟ್ ಮಾಡಿದ ಆನೆಗಳು ಕಾಡಿನಿಂದ ನಾಡಿನತ್ತ ಪಯಣ ಆರಂಭಿಸಿದವು.
ಇದೇ ವೇಳೆ ವೀರಗಾಸೆ, ಪೂಜಾ ಕುಣಿತ, ಡೊಳ್ಳು, ನಗಾರಿ ಸೇರಿದಂತೆ ವಿವಿಧ ಜಾನಪದ ಕಲಾಪ್ರಾಕಾರಗಳು ಮೇಳೈಸಿದವು. ಅಲ್ಲದೆ, ಮುತ್ತೈದೆಯರು ಪೂರ್ಣಕುಂಭದೊಂದಿಗೆ ಸಾಗಿದರು. ಕಲಾತಂಡಗಳು, ಮಂಗಳವಾದ್ಯಗಳೊಂದಿಗೆ ಗಜಪಯಣ ಆರಂಭವಾಯಿತು.ನಾಳೆ ಗಜಪಡೆ ಅರಮನೆ ಪ್ರವೇಶಕಾಡಿನಿಂದ ನಾಡಿಗೆ ಆಗಮಿಸಿರುವ ಗಜಪಡೆ ಮೈಸೂರಿನ ಅಶೋಕಪುರಂನಲ್ಲಿರುವ ಅರಣ್ಯ ಭವನದ ಆವರಣದಲ್ಲಿ ವಿಶ್ರಾಂತಿ ಪಡೆಯುತ್ತಿವೆ. ಆ.23 ರಂದು ಮೈಸೂರು ಅರಮನೆಯ ಜಯಮಾರ್ತಾಂಡ ದ್ವಾರದಲ್ಲಿ ಗಜಪಡೆಗೆ ಸಾಂಪ್ರದಾಯಿಕ ಸ್ವಾಗತ ಕೋರಲಾಗುತ್ತದೆ. ನಂತರ ಅರಮನೆ ಆವರಣದಲ್ಲಿ ಗಜಪಡೆಯು ಬಿಡಾರ ಹೂಡಿ, ಪ್ರತಿದಿನ ತಾಲೀಮು ಆರಂಭಿಸಲಿವೆ.