ಜಿಲ್ಲಾದ್ಯಂತ ಗಣೇಶ ಚತುರ್ಥಿ ಸಿದ್ಧತೆ ಸಂಭ್ರಮದಿಂದ ನಡೆದಿದ್ದು, ಸೆ.14ರಂದು ಮನೆ, ಮನಗಳಲ್ಲಿ ಗಣೇಶ ಪ್ರತಿಷ್ಠಾಪನೆಗೆ ಜನತೆ ಸಡಗರ ಸಂಭ್ರಮದಿಂದ ಸಕಲ ಸಿದ್ಧತೆ ನಡೆಸಿದ್ದಾರೆ.
ಗಣೇಶ ಪ್ರತಿಷ್ಠಾಪನೆಗೆ ಸಕಲ ಸಿದ್ಧತೆ, ಹಬ್ಬದ ಖರೀದಿಯಲ್ಲಿ ಜನತೆ ಮಗ್ನ
ಮಹೇಶ ಛಬ್ಬಿ
ಕನ್ನಡಪ್ರಭ ವಾರ್ತೆ ಗದಗಜಿಲ್ಲಾದ್ಯಂತ ಗಣೇಶ ಚತುರ್ಥಿ ಸಿದ್ಧತೆ ಸಂಭ್ರಮದಿಂದ ನಡೆದಿದ್ದು, ಸೆ.14ರಂದು ಮನೆ, ಮನಗಳಲ್ಲಿ ಗಣೇಶ ಪ್ರತಿಷ್ಠಾಪನೆಗೆ ಜನತೆ ಸಡಗರ ಸಂಭ್ರಮದಿಂದ ಸಕಲ ಸಿದ್ಧತೆ ನಡೆಸಿದ್ದಾರೆ.
ಇನ್ನು ನಗರ, ಓಣಿಗಳಲ್ಲಿ ವಿವಿಧ ಸಂಘ-ಸಂಸ್ಥೆಗಳಿಂದ ಪ್ರತಿಷ್ಠಾಪಿಸುವ ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆಗೆ ತಿಂಗಳುಗಳ ಕಾಲ ಸಿದ್ಧತೆ ನಡೆಸಿದ್ದು, ವರ್ಷದಿಂದ, ವರ್ಷಕ್ಕೆ ಹಬ್ಬ ವಿಜೃಂಭಣೆಯಿಂದ ಆಚರಿಸಲು ಸಂಘದ ಪದಾಧಿಕಾರಿಗಳು ಅವಿರತ ಶ್ರಮ ವಹಿಸಿ, ನಾಡಿನ ಸಂಪ್ರದಾಯ, ಸಂಸ್ಕೃತಿ ಯುವಪೀಳಿಗೆಯಲ್ಲಿ ಬೆಳೆಸಲು, ಹಲವಾರು ವಿನೂತನ ಸಾಂಸ್ಕೃತಿಕ, ಹಿಂದೂ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಹಬ್ಬದ ಹಿರಿಮೆ ಹೆಚ್ಚಿಸುತ್ತಿವೆ.ವಿಶೇಷವಾಗಿ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ ಸೇರಿದಂತೆ ವಿವಿಧ ಸ್ಪರ್ಧೆಗಳ ಆಯೋಜಿಸುವುದರ ಜತೆಗೆ ಹಲವಾರು ಸಮಾಜಮುಖಿ ಕಾರ್ಯಗಳ ಕೈಗೊಳ್ಳಲು ನಗರದ ವಿವಿಧ ಗಜಾನನೋತ್ಸವ ಮಂಡಳಿಗಳು ಸಕಲ ಸಿದ್ಧತೆ ಕೈಗೊಂಡಿವೆ.
ಹಬ್ಬದ ಖರೀದಿ ಬಲು ಜೋರು:ಅವಳಿ ನಗರದ ಮಾರುಕಟ್ಟೆಯಲ್ಲಿ ಗಣೇಶ ಚತುರ್ಥಿ ಹಬ್ಬದ ಅಂಗವಾಗಿ ಪೂಜೆಗೆ ಹಣ್ಣು, ಹೂ, ಬಾಳೆ ಕಂಬ, ವಿದ್ಯುತ್ ಅಲಂಕಾರಿಕ ವಸ್ತು ಹಾಗೂ ಗಣೇಶನ ಮಂಟಪಗಳ ಖರೀದಿಸುವಲ್ಲಿ ಸಾರ್ವಜನಿಕರು ನಿರತರಾಗಿದ್ದು ಅಲ್ಲಲ್ಲಿ ಕಂಡು ಬಂದಿತು.
ಹಬ್ಬ ಬಲು ದುಬಾರಿ:ಪ್ರಸಕ್ತ ವರ್ಷ ಮಳೆ ಕೊರತೆಯಿಂದ ಜಿಲ್ಲಾದ್ಯಂತ ಬರಗಾಲ ಛಾಯೆ ಆವರಿಸಿದ್ದು, ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರಿದೆ. ಜನತೆ ಆರ್ಥಿಕವಾಗಿ ಸಂಕಷ್ಟದಲ್ಲಿದ್ದರೂ ಸಂಪ್ರದಾಯದಂತೆ ಹಬ್ಬ ಆಚರಣೆಗೆ ಮಾತ್ರ ಎಲ್ಲೂ ಕೊರತೆ ಬಾರದಂತೆ ಹಬ್ಬದ ಸಿದ್ಧತೆ ನಡೆಸಿದ್ದಾರೆ. ವಿಘ್ನ ವಿನಾಶಕನ ಪೂಜೆಗೆ ವಿಶೇಷವಾಗಿ 5 ಬಗೆಯ ಹಣ್ಣಿನ ಒಂದು ಸೆಟ್ ಗೆ ₹150-200, ಒಂದು ಕೆಜಿ ಸೇಬು ₹200, ಬಾಳೆ ಹಣ್ಣು ಡಜನ್ ಗೆ ₹ 50-60, ಕಿತ್ತಳೆ, ಆರೇಂಜ್ ಕೆಜಿಗೆ ₹250-300 ಎಲ್ಲ ಹಣ್ಣುಗಳ ಬೆಲೆಯಲ್ಲಿ ಏರಿಕೆಯಾಗಿದೆ ಎನ್ನುತ್ತಾರೆ ವ್ಯಾಪಾರಸ್ಥ ಉಮರ್ ಫಾರೂಕ್ ಹುಬ್ಬಳ್ಳಿ.
ಒಂದೇ ಸೂರಿನಡಿ ಮಾರಾಟ:ಗಣೇಶ ಮೂರ್ತಿ ಖರೀದಿಸಲು ಸಾರ್ವಜನಿಕರು ನಾನಾ ಕಡೆ ಅಲೆಯುವುದನ್ನು ತಪ್ಪಿಸಿ, ಒಂದೇ ಕಡೆ ಗಣೇಶನ ಮೂರ್ತಿಗಳು ಗ್ರಾಹಕರಿಗೆ ಲಭ್ಯವಾಗಲಿ ಹಾಗೂ ಗ್ರಾಹಕರಿಗೆ, ವ್ಯಾಪಾರಸ್ಥರಿಗೆ ಅನುಕೂಲಕರ ದೃಷ್ಟಿಯಿಂದ ಜಿಲ್ಲಾಡಳಿತ ನಗರದ ಎಪಿಎಂಸಿ ಆವರಣದಲ್ಲಿರುವ ಸ್ವಾಮಿ ವಿವೇಕಾನಂದ ಸಭಾ ಭವನದಲ್ಲಿ ಗಣೇಶ ಮೂರ್ತಿಗಳ ಮಾರಾಟ ಮಳಿಗೆಗಳ ವ್ಯವಸ್ಥೆ ಕಲ್ಪಿಸಿದೆ.
ಪರಿಸರಕ್ಕೆ ಹಾನಿಯಾಗುವ ಪಿಒಪಿ ಗಣಪತಿ ಮೂರ್ತಿಗಳ ತಯಾರಿಕೆ ಹಾಗೂ ಮಾರಾಟ ಜಿಲ್ಲಾಡಳಿತ ಸಂಪೂರ್ಣವಾಗಿ ನಿಷೇಧಿಸಿ, ಪರಿಸರ ಸ್ನೇಹಿ ಗಣೇಶ ಮೂರ್ತಿ ಮಾರಾಟಕ್ಕೆ ಉತ್ತೇಜನ ನೀಡಿದ್ದು, ಮಣ್ಣಿನ ಗಣೇಶನ ಮೂರ್ತಿಗಳು ಒಂದೇ ಸೂರಿನಡಿ ಜನತೆಗೆ ಸುಲಭವಾಗಿ ದೊರೆಯಲಿ ಎಂಬ ಉದ್ದೇಶದಿಂದ ಮೂರ್ತಿಗಳ ಮಾರಾಟಕ್ಕೆ ಅವಕಾಶ ಮಾಡಿಕೊಟ್ಟಿದೆ.25-30ಕ್ಕೂ ಹೆಚ್ಚು ಮಳಿಗೆಗಳು:
ಮೊದಲು ಗಣಪತಿ ಮೂರ್ತಿಗಳನ್ನು ಖರೀದಿಸಲು ಸಾರ್ವಜನಿಕರು ಅಲ್ಲಿ-ಇಲ್ಲಿ ಅಲೆದಾಡುತ್ತಿದ್ದರು. ಆದರೆ ಗದಗ ಎಪಿಎಂಸಿ ಆವರಣದ ಸ್ವಾಮಿ ವಿವೇಕಾನಂದ ಸಭಾ ಭವನದಲ್ಲಿ ಗದಗ ಜಿಲ್ಲೆ ಸೇರಿದಂತೆ ಅಕ್ಕ-ಪಕ್ಕದ ಜಿಲ್ಲೆಯೇ ಕಲಾವಿದರು ಒಂದೇ ಕಡೆ 25-30ಕ್ಕೂ ಹೆಚ್ಚು ಗಣೇಶ ಮೂರ್ತಿಗಳ ಮಾರಾಟ ಮಳಿಗೆ ತೆರೆದಿದ್ದು ಗ್ರಾಹಕರಿಗೆ ಅನುಕೂಲವಾಗಿದೆ. ನಮಗೆ ಯಾವ ಗಣೇಶ ಮೂರ್ತಿಬೇಕು ಆಯ್ಕೆ ಮಾಡಿ ಖರೀದಿಸಲು ಅವಕಾಶವಿದ್ದು, ಇದರಿಂದ ಗ್ರಾಹಕರಿಗೆ ಸಮಯದ ಉಳಿತಾಯ ಜತೆಗೆ ಆಯ್ಕೆ ಮಾಡಿ ಖರೀದಿಸಲು ಅನುಕೂಲಕರವಾಗಿದೆ.ಬಹುರೂಪದ ಮೂರ್ತಿಗಳು:
ಬಲಮುರಿ ಗಣಪತಿ, ಬಾಲ ಗಣಪತಿ, ಡೊಳ್ಳುಹೊಟ್ಟೆ, ಕಮಲ, ಚಕ್ರ, ತ್ರಿಶೂಲ, ಶಿವನ ವೇಷ, ಛತ್ರಪತಿ ಶಿವಾಜಿ, ಆಕಳು ಗಣಪತಿ, ತಲೆಯ ಮೇಲೆ ಐದು ಹೆಡಿಯೇ ನಾಗರ ಗಣಪತಿ, ಕಮಲದ ಗಣಪತಿ, ದಗಡು ಸೇಠ್ ಗಣಪತಿ, ನವಿಲು ಗಣಪತಿ, ಮಹಾರಾಜ ಗಣಪತಿ, ಕೃಷ್ಣ ಗಣಪತಿ, ಚಂದ್ರ, ಸಾಯಿಬಾಬಾ, ಆಂಜನೇಯ, ವೀಣೆ ಹಿಡಿದ ಗಣಪತಿ ಹೀಗೆ ನಾನಾ ರೂಪದ ಗಣಪತಿಗಳು ಒಂದೇ ಸೂರಿನಡಿಯಲ್ಲಿ ಗ್ರಾಹಕರಿಗೆ ಲಭ್ಯ ಇವೆ.ಒಂದೇ ಸೂರಿನಡಿ ಗಣೇಶ ಮೂರ್ತಿ ಮಾರಾಟ ಮಳಿಗೆ ತೆರೆಯಲು ಅವಕಾಶ ಕೊಟ್ಟಿದ್ದರಿಂದ ಗ್ರಾಹಕರಿಗೆ ಹಾಗೂ ಮಾರಾಟಗಾರರಿಗೆ ಅನುಕೂಲಕರವಾಗಿದೆ. ₹250, ₹800, ₹2500 ದಿಂದ ₹ 7000ದವರೆಗೂ ಮೂರ್ತಿಗಳ ಗಾತ್ರಕ್ಕೆ ತಕ್ಕಂತೆ ದರವಿದ್ದು, ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿಗಳ ಬೇಡಿಕೆ ಹೆಚ್ಚಾಗಿದ್ದು, ಮೂರ್ತಿಗಳ ಮಾರಾಟ ಉತ್ತಮವಾಗಿದೆ ಎನ್ನುತ್ತಾರೆ ಗದಗಿನ ಗಣೇಶ ಮೂರ್ತಿ ತಯಾರಕ ಎಸ್.ಬಿ. ಕಿತ್ತೂರ.