ಸಾರಾಂಶ
ಸಿದ್ದಾಪುರ: ಭಾರತ ಜಗತ್ತಿನ 3ನೇ ದೊಡ್ಡ ಆರ್ಥಿಕತೆಯ ದೇಶವಾಗಿಸುವ ಕನಸು ನನಸಾಗಿಸಲು ನರೇಂದ್ರ ಮೋದಿಯವರಿಂದ ಮಾತ್ರ ಸಾಧ್ಯ. ಇದು ಅಂಜಲಿ ಹಾಗೂ ಕಾಗೇರಿ ನಡುವಿನ ಚುನಾವಣೆಯಲ್ಲ, ಕಾಂಗ್ರೆಸ್ ಹಾಗೂ ಬಿಜೆಪಿ ನಡುವಿನ ಚುನಾವಣೆ. ದೇಶಕ್ಕೆ ಆಗಲಿರುವ ಒಳಿತು ಕೆಡಕುಗಳ ನಡುವಿನ ಚುನಾವಣೆ ಎಂದು ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರತಿಪಾದಿಸಿದರು.
ತಾಲೂಕಿನ ನಿಡಗೋಡ ಮಾರಿಕಾಂಬಾ ದೇವಿಯ ಜಾತ್ರೆಗೆ ಭೇಟಿ ನೀಡಿ ದೇವಿಯ ದರ್ಶನ ದ ನಂತರ ಚುನಾವಣಾ ಪ್ರಚಾರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವ ವಿಶ್ವವೇ ಮೆಚ್ಚಿಕೊಂಡಿದೆ. ಅವರ ದೂರದೃಷ್ಟಿ ಯೋಜನೆಗಳು ದೇಶವನ್ನು ಬಲಗೊಳಿಸಿವೆ. ಕಾಂಗ್ರೆಸ್ ಸರ್ಕಾರದ ಯೋಜನೆಗಳಂತೆ ದಿವಾಳಿಯಾಗಿಸಿಲ್ಲ. ಕಳೆದ ಹತ್ತು ವರ್ಷದಲ್ಲಿ ಭಾರತಕ್ಕೆ ಪ್ರಪಂಚದ ಮಟ್ಟದಲ್ಲಿ ಒಂದು ವಿಶಿಷ್ಟ ಹೊಳಪು ತಂದುಕೊಟ್ಟವರು ಮೋದಿ ಅವರು. ಕಾಂಗ್ರೆಸ್ ಇನ್ನೆಷ್ಟು ವರ್ಷ ಆಳ್ವಿಕೆ ಮಾಡಿದರೂ ಈ ರೀತಿಯ ಕಲ್ಪನೆ ಬಾರದು. ಮೋದಿ ಅವರ ಕೈ ಬಲಪಡಿಸಲು ಎಲ್ಲರೂ ಒಂದಾಗಿ ಮತದಾನ ಮಾಡಬೇಕು. ಅನೇಕರ ತ್ಯಾಗ, ಬಲಿದಾನದಿಂದ ಬಿಜೆಪಿ ರಾಷ್ಟ್ರದ ಗಮನ ಸೆಳೆಯುತ್ತಿದೆ. ಇದು ಕಾರ್ಯಕರ್ತರ ಪಕ್ಷ ಎಂದರು.
ಮಹಿಳೆಯರು, ಯುವಕರು, ರೈತರು, ಬಡವರು ಇವೇ ನಮ್ಮ ೪ ಜಾತಿ ಇವೆ ಎಂದು ನಮ್ಮ ಪ್ರಧಾನಿ ಹೇಳಿದ್ದಾರೆ.ಅಸಂಖ್ಯ ದೇಶಭಕ್ತ ಕಾರ್ಯಕರ್ತರ ತ್ಯಾಗ, ಬಲಿದಾನ, ನಿಸ್ವಾರ್ಥ ಸೇವೆಯ ಮೂಲಕ ಬೆಳೆದ ಶಿಸ್ತಿನ ಪಕ್ಷ ನಮ್ಮ ಬಿಜೆಪಿ. ಅವೆಲ್ಲಕ್ಕೂ ನಿದರ್ಶನವೆಂಬಂತಿರುವ ಪ್ರಧಾನಿ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯಾಗಿಸಲು ಎಲ್ಲರ ಸಹಕಾರವನ್ನು ಕೋರಿದರು.
ಡಾ ಶ್ರೀಧರ ವೈದ್ಯ, ಜಯಂತ ಶಾನಭಾಗ, ಆರ್.ಎಸ್. ಹೆಗಡೆ ಹರಗಿ, ತಿಮ್ಮಪ್ಪ ಮಡಿವಾಳ, ಪಕ್ಷದ ಪ್ರಮುಖರು ಉಪಸ್ಥಿತರಿದ್ದರು. ಪ್ರಮುಖರಾದ ಪರಮೇಶ್ವರ ಸ್ವಾಮೇರಕಾನಳ್ಳಿ, ಪಿ.ಬಿ. ಹೊಸೂರ, ಎಲ್.ಎಂ. ನಾಯ್ಕ ಹಾಗೂ ಶಶಿಭೂಷಣ ಹೆಗಡೆ ಅವರನ್ನು ಭೇಟಿ ಮಾಡಿ ಎಲ್ಲರ ಸಹಕಾರವನ್ನು ಕೋರಿದರು.