ಪರಿಶಿಷ್ಟ ಪಂಗಡಕ್ಕೆ ಕುಣಬಿ ಸೇರಿಸದಿದ್ದರೆ ಚುನಾವಣೆ ಬಹಿಷ್ಕಾರ

| Published : Feb 20 2024, 01:46 AM IST

ಪರಿಶಿಷ್ಟ ಪಂಗಡಕ್ಕೆ ಕುಣಬಿ ಸೇರಿಸದಿದ್ದರೆ ಚುನಾವಣೆ ಬಹಿಷ್ಕಾರ
Share this Article
  • FB
  • TW
  • Linkdin
  • Email

ಸಾರಾಂಶ

ಕುಣಬಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸದೇ ಕಳೆದ 30 ವರ್ಷಗಳಿಂದ ಅನ್ಯಾಯ ಮಾಡಲಾಗಿದೆ.

ಜೋಯಿಡಾ: ಕರ್ನಾಟಕ ರಾಜ್ಯದ ಕುಣಬಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಆಗ್ರಹಿಸಿ ಜಿಲ್ಲಾ ಕುಣಬಿ ಸಮಾಜದಿಂದ ಇಲ್ಲಿಯ ದುರ್ಗಾದೇವಿ ಮೈದಾನದಲ್ಲಿ ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಯಿತು. ತಹಸೀಲ್ದಾರ್ ಮೂಲಕ ಪ್ರಧಾನಮಂತ್ರಿಯವರಿಗೆ ಮನವಿ ನೀಡಲಾಗಿದೆ. ಪರಿಶಿಷ್ಟ ಪಂಗಡದ ಸ್ಥಾನಮಾನ ನೀಡದಿದ್ದರೆ ಉಗ್ರ ಪ್ರತಿಭಟನೆ ನಡೆಸಲಾಗುವುದು ಮತ್ತು ಚುನಾವಣೆ ಬಹಿಷ್ಕಾರ ಅನಿವಾರ್ಯ ಎಂದು ಎಚ್ಚರಿಕೆ ನೀಡಿದರು.

ಜಿಲ್ಲಾ ಕುಣಬಿ ಸಮಾಜ ಅಧ್ಯಕ್ಷ ಸುಭಾಷ್ ಗಾವಡಾ ಮಾತನಾಡಿ, ಕುಣಬಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸದೇ ಕಳೆದ 30 ವರ್ಷಗಳಿಂದ ಅನ್ಯಾಯ ಮಾಡಲಾಗಿದೆ. ಬೃಹತ್ ಪಾದಯಾತ್ರೆ ಉಪವಾಸ ಸತ್ಯಾಗ್ರಹ ಮಾಡಿದರೂ ಉಪಯೋಗಕ್ಕೆ ಬಂದಿಲ್ಲ. ನಿಯೋಗಗಳು ಮನವಿ ನೀಡಿದರೂ ಕಾಟಾಚಾರಕ್ಕೆ ಸೀಮಿತ ಆಗಿದೆ. ಮುಂದಿನ ದಿನಗಳಲ್ಲಿ ಹೋರಾಟ ನಿಲ್ಲುವುದಿಲ್ಲ. ಲೋಕಸಭೆ ಚುನಾವಣೆ ಬಹಿಷ್ಕಾರ ನಿರ್ಣಯ ಅನಿವಾರ್ಯ ಆಗಲಿದೆ ಎಂದರು.

ತಾಲೂಕು ಅಧ್ಯಕ್ಷ ಅಜಿತ್ ಮಿರಾಶಿ ಮಾತನಾಡಿ, ನ್ಯಾಯಕ್ಕಾಗಿ ಹೋರಾಟ ನಿರಂತರ ಮುಂದುವರಿಯುತ್ತದೆ. ಯಾವುದೇ ಸರ್ಕಾರ ನಮ್ಮ ಹೋರಾಟ ಹಗುರವೆಂದು ಪರಿಗಣಿಸಬಾರದು ಎಂದರು.

ಗೋವಾ ಮಾದರಿಯಲ್ಲಿ ಇಲ್ಲಿಯ ಕುಣಬಿಗಳಿಗೆ ಎಸ್‌ಟಿ ಸೌಲಭ್ಯ ಸಿಗಬೇಕು ಎಂದು ಗ್ರಾಪಂ ಸದಸ್ಯ ಅರುಣ್ ಕಾಮರೆಕರ ಹೇಳಿದರು.

ಚುನಾವಣೆಗೆ ಸೀಮಿತ: ರಾಜಕೀಯ ಪಕ್ಷಗಳಿಗೆ ಚುನಾವಣೆ ಬಂದಾಗ ಮಾತ್ರ ಕುಣಬಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವುದು ನೆನಪಾಗುತ್ತದೆ. ನಾವು ಚುನಾವಣೆಗೆ ಮಾತ್ರ ಸೀಮಿತವಾಗಿದ್ದೇವೆ ಎಂದು ಯಲ್ಲಾಪುರ ಘಟಕದ ಅಧ್ಯಕ್ಷ ನಾರಾಯಣ ಕುಣಬಿ ಹೇಳಿದರು.

ಸಂಸದರು ಗಮನ ಹರಿಸಲಿ: ಕುಣಬಿಗಳು 30 ವರ್ಷಗಳಿಂದ ಹೋರಾಟ ಮಾಡುತ್ತಿದ್ದಾರೆ. ಆದರೆ ಸಂಸದ ಅನಂತಕುಮಾರ್ ಹೆಗಡೆ ಲೋಕಸಭೆಯಲ್ಲಿ ಧ್ವನಿ ಎತ್ತಬೇಕು. ಈಗ ಹೋರಾಟ ಅನಿವಾರ್ಯ ಆಗಿದೆ ಎಂದು ಸುಭಾಷ್ ಗಾವಡಾ ಹೇಳಿದರು.

ಹಲವರಿಂದ ಬೆಂಬಲ: ಮರಾಠಾ ಸಮಾಜದ ಅಧ್ಯಕ್ಷ ಚಂದ್ರಕಾಂತ ದೇಸಾಯಿ, ದೇವಿದಾಸ ದೇಸಾಯಿ, ಅರುಣ್ ಕಾಮರೇಕರ, ಸುಭಾಷ್ ಮಾಂಜ್ರೇಕರ, ಸಂತೋಷ ಸಾವಂತ್ ಮಾತನಾಡಿದರು. ತಹಸೀಲ್ದಾರ್ ಮಂಜುನಾಥ ಮುನ್ನಳ್ಳಿ ಮನವಿ ಸ್ವೀಕರಿಸಿದರು.

ಇದಕ್ಕೂ ಮೊದಲು ಕುಣಬಿ ಭವನದಲ್ಲಿ ಸಭೆ ನಡೆಯಿತು. ವಿವಿಧ ಘೋಷಣೆಗಳನ್ನು ಕೂಗುತ್ತ ತಾಲೂಕು ಕ್ರೀಡಾಂಗಣಕ್ಕೆ ಆಗಮಿಸಿ ಉಪವಾಸ ಸತ್ಯಾಗ್ರಹ ಆರಂಭಿಸಲಾಯಿತು.

ಕುಣಬಿ ಪ್ರಮುಖರಾದ ಲಕ್ಷ್ಮಣ ಗಾಂವಕರ, ಚಂದ್ರಿಮಾ ಮಿರಾಶಿ, ಮಾಬಳು ಕುಕಡಲಕರ, ಚಂದ್ರಶೇಖರ ಸಾವರ್ಕರ್, ಬೆಳಗಾವಿ ಜಿಲ್ಲೆ ಘಟಕದ ಅಧ್ಯಕ್ಷ ರವಿ ಮಿರಾಶಿ, ಬುಧೊ ಕಾಲೇಕರ, ಪ್ರೇಮಾನಂದ ವೆಳಿಪ, ಸೋಮಣ್ಣ ಹನ್ನೋಲಕರ, ಸುಭಾಷ್ ವೆಳಿಪ್, ಪ್ರಸನ್ನ ಗಾವಡಾ, ಶುಭಾಂಗಿ ಗಾವಡಾ, ಸುಷ್ಮಾ ಮಿರಾಶಿ, ಪ್ರಕಾಶ್ ವೆಳಿಪ್, ನಾರಾಯಣ ಕುಣಬಿ, ಪುಟ್ಟಾ ಕುಣಬಿ, ಮಾಬಳೇಶ್ವರ ಕುಣಬಿ, ವಿಷ್ಣು ಭಿರಂಗತ್ ಮುಂತಾದವರು ಇದ್ದರು.‌ಪಿಎಸ್‌ಐ ಮಾಳಿ ಪೊಲೀಸ್ ಬಂದೋಬಸ್ತ್ ಕಲ್ಪಿಸಿದರು.