ಸಾರಾಂಶ
ಕನ್ನಡಪ್ರಭ ವಾರ್ತೆ ಪುತ್ತೂರು
ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣೆಯ ಪ್ರಕ್ರಿಯೆ ಮುಕ್ತಾಯಗೊಂಡಿದ್ದರೂ ಕೆಲವೊಂದು ಕಾರ್ಯಕ್ರಮಗಳಲ್ಲಿ ನೀತಿ ಸಂಹಿತೆ ಮುಂದುವರಿಯಲಿದೆ. ಖಾಸಗಿ ಕಾರ್ಯಕ್ರಮದಲ್ಲಿ ನೀತಿ ಸಂಹಿತೆ ಸಡಿಲಗೊಳಿಸಲಾಗಿದೆ. ರಾಜಕೀಯ ಚಟುವಟಿಕೆ ನಡೆಸಲು ಕಡ್ಡಾಯವಾಗಿ ಅನುಮತಿ ಪಡೆದುಕೊಳ್ಳಬೇಕಾಗಿದೆ ಎಂದು ಸಹಾಯಕ ಚುನಾವಣಾಧಿಕಾರಿಗಳಾದ ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತ ಜುಬಿನ್ ಮೊಹಾಪಾತ್ರ ತಿಳಿಸಿದ್ದಾರೆ.ಅವರು ಮಂಗಳವಾರ ಪುತ್ತೂರು ತಾಲೂಕು ಆಡಳಿತ ಸೌಧದಲ್ಲಿದ ಸಹಾಯಕ ಕಮಿಷನರ್ ಕೋರ್ಟು ಸಭಾಂಗಣದಲ್ಲಿ ಮಧ್ಯಮಗಳಿಗೆ ಮಾಹಿತಿ ನೀಡಿದರು.
ಪುತ್ತೂರು ಉಪವಿಭಾಗದಲ್ಲಿ ಯಾವುದೇ ಸಮಸ್ಯೆಗಳಿಲ್ಲದೆ ಶಿಸ್ತುಬದ್ಧವಾಗಿ ಚುನಾವಣೆ ನಡೆದಿದೆ. ದೇಶದಲ್ಲಿ ಮತ್ತು ರಾಜ್ಯದಲ್ಲಿ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಜು.೬ರ ತನಕ ನೀತಿ ಸಂಹಿತೆ ಎಲ್ಲೆಡೆ ಜಾರಿಯಲ್ಲಿರುತ್ತದೆ. ನಮ್ಮಲ್ಲಿ ಚುನಾವಣೆ ಪ್ರಕ್ರಿಯೆ ಮುಗಿದ ಹಿನ್ನಲೆಯಲ್ಲಿ ಪುತ್ತೂರು ವಿಧಾಸಭಾ ಕ್ಷೇತ್ರದಲ್ಲಿ ಕೆಲವೊಂದು ನೀತಿ ಸಂಹಿತೆ ಸಡಿಲಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ಯಾವುದೇ ಖಾಸಗಿ ಕಾರ್ಯಕ್ರಮಗಳನ್ನು ನಡೆಸಲು ಅವಕಾಶವಿದ್ದು, ಅದಕ್ಕೆ ಅನುಮತಿ ಪಡೆದುಕೊಳ್ಳಬೇಕಾಗಿಲ್ಲ ಎಂದರು.ಧಾರ್ಮಿಕ ಮತ್ತು ರಾಜಕೀಯ ಚಟುವಟಿಕೆ ನಡೆಸುವಲ್ಲಿ ಇಲಾಖೆಗೆ ಮಾಹಿತಿ ನೀಡಿ ಏಕಗವಾಕ್ಷಿ ವ್ಯವಸ್ಥೆಯ ಮೂಲಕ ಅನುಮತಿ ಪಡೆದುಕೊಳ್ಳಬೇಕು. ರಾಜಕೀಯ ಮತ್ತು ಧಾರ್ಮಿಕ ಚಟುವಟಿಕೆಗೆ ಧ್ವನಿವರ್ಧಕ ಅಳವಡಿಸಲು ಪೊಲೀಸರ ಅನುಮತಿ ಕಡ್ಡಾಯವಾಗಿದೆ. ಪಂಚಾಯಿತಿಗಳಲ್ಲಿ ನಡೆಸುವ ಚಟುವಟಿಕೆಗಳಿಗೆ ಪಂಚಾಯಿತಿಯಿಂದ ಅನುಮತಿ ಪಡೆದುಕೊಳ್ಳಬೇಕು ಎಂದು ಮಾಹಿತಿ ನೀಡಿದರು.
ಕೆಲವು ಚೆಕ್‌ಪೋಸ್ಟ್‌ಗಳ ತೆರವು:ಚುನಾವಣೆಯ ಸಂದರ್ಭದಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಈಶ್ವರಮಂಗಲ, ಸಾರಡ್ಕ ಮತ್ತು ಪಾಣಾಜೆಯಲ್ಲಿ ಚಕ್‌ಪೋಸ್ಟ್‌ಗಳನ್ನು ತೆರೆಯಲಾಗಿತ್ತು. ಇದೀಗ ಈ ಪೈಕಿ ಈಶ್ವರಮಂಗಲ ಹೊರತುಪಡಿಸಿ ಇನ್ನುಳಿದ ಸಾರಡ್ಕ ಮತ್ತು ಪಾಣಾಜೆ ಚಕ್‌ಪೋಸ್ಟ್‌ಗಳನ್ನು ತೆರವುಗೊಳಿಸಲಾಗಿದೆ. ಸುಡು ಬಿಸಿಲಿನ ನಡುವೆಯೂ ಎಲ್ಲೆಡೆ ಹೆಚ್ಚಿನ ಪ್ರಮಾಣದಲ್ಲಿ ಮತ ಚಲಾವಣೆಯಾಗಿದೆ. ಬನ್ನೂರು ಮತಗಟ್ಟೆಯಲ್ಲಿ ಗರಿಷ್ಠ ಶೇ.೯೧.೬೦ ಹಾಗೂ ನೆಲ್ಲಿಕಟ್ಟೆ ಮತಗಟ್ಟೆಯಲ್ಲಿ ಕನಿಷ್ಠ ಶೇ. ೬೬.೭೪ ಮತದಾನವಾಗಿದೆ ಎಂದು ಅವರು ಮಾಹಿತಿ ನೀಡಿದರು.
ಚುನಾವಣೆ ಯಶಸ್ವಿಯಾಗಿ ನಡೆಯಲು ಕಾರಣಕರ್ತರಾದ ಸಿಬ್ಬಂದಿ, ಮತದಾರರು ಮತ್ತು ಮಾಧ್ಯಮ ಪ್ರತಿನಿಧಿಗಳಿಗೆ ಕೃತಜ್ಞತೆ ಹೇಳಿದರು.ಪುತ್ತೂರು ತಹಸೀಲ್ದಾರ್ ಕುಂಞ ಅಹಮ್ಮದ್ ಇದ್ದರು.