ಸಾರಾಂಶ
ನರಸಿಂಹರಾಜಪುರ ತಾಲೂಕು ಸ್ಲೀಪ್ ಸಮತಿ ಏರ್ಪಡಿಸಿದ್ದ ಮತದಾರರ ಜಾಗೃತಿ ಜಾಥಾ ಕಾರ್ಯಕ್ರಮ ಉದ್ಘಾಟಿಸಿ ಜಿಲ್ಲಾ ಸ್ಲೀಪ್ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಮಾತನಾಡಿದರು.
ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ
ಭಾರತ ದೇಶದಲ್ಲಿ ಪ್ರಜಾಪ್ರಭುತ್ವ ಉಳಿದಿದ್ದರೆ ಅದಕ್ಕೆ ಕಾಲ, ಕಾಲಕ್ಕೆ ಪಾರದರ್ಶಕವಾಗಿ ಚುನಾವಣೆ ನಡೆಸುತ್ತಿರುವ ಚುನಾವಣಾ ಆಯೋಗವು ಸಹ ಕಾರಣ ವಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಜಿಲ್ಲಾ ಸ್ಲೀಪ್ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಅಭಿಪ್ರಾಯಪಟ್ಟರು.ಅವರು ತಾಲೂಕು ಸ್ಲೀಪ್ ಸಮತಿ ಏರ್ಪಡಿಸಿದ್ದ ಮತದಾರರ ಜಾಗೃತಿ ಜಾಥಾ ಕಾರ್ಯಕ್ರಮದಡಿ ಬಿ.ಎಚ್.ಕೈಮರದಲ್ಲಿ ಬ್ಯಾನರ್‌ಗೆ ಸಹಿ ನೀಡಿ, ಬೈಕ್ ಜಾಥಾಗೆ ಚಾಲನೆ ನೀಡಿ ಮಾತನಾಡಿದರು.
ನೆರೆ ರಾಷ್ಟಗಳಾದ ಪಾಕಿಸ್ತಾನ, ಬಾಂಗ್ಲಾ, ನೇಪಾಳ ಮುಂತಾದ ರಾಷ್ಟಗಳಿಗೆ ಹೋಲಿಕೆ ಮಾಡಿದರೆ ಭಾರತ ದೇಶವು ವೇಗವಾಗಿ ಪ್ರಗತಿ ಸಾಧಿಸುತ್ತಿದೆ. ಪ್ರಜಾ ಪ್ರಭುತ್ವ ಮಾದರಿಯಲ್ಲೇ ಚುನಾವಣೆಯಲ್ಲಿ ಆಯ್ಕೆಯಾದ ಸರ್ಕಾರಗಳೇ ಆಡಳಿತ ನಡೆಸುತ್ತಿದೆ. ಚುನಾವಣಾ ಆಯೋಗವು ಪ್ರತಿಯೊಬ್ಬರಿಗೂ ಮತ ನೀಡುವ ಹಕ್ಕನ್ನು ನೀಡಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಶೃಂಗೇರಿ ಕ್ಷೇತ್ರದಲ್ಲಿ ಶೇ.78 ರಷ್ಟು ಮತದಾನ ನಡೆದು ಚಿಕ್ಕಮಗಳೂರು ಜಿಲ್ಲೆಯಲ್ಲೇ ಅತಿ ಹೆಚ್ಚು ಮತದಾನ ನಡೆದ ಕ್ಷೇತ್ರ ಎಂದು ಹೆಸರು ಪಡೆದಿತ್ತು. ಈ ಬಾರಿ ಇನ್ನಷ್ಟು ಮತದಾನ ಹೆಚ್ಚಿಸಬೇಕು. ಪ್ರಜಾಪ್ರಭುತ್ವದ ಹಬ್ಬವಾದ ಚುನಾವಣೆಯನ್ನು ಎಲ್ಲರೂ ಸಂಭ್ರಮಿಸೋಣ ಎಂದರು.ಕೆಲವು ಮತದಾರರು ಮತದಾನದ ದಿನ ಊರಲ್ಲೇ ಇರದೆ ಬೇರೆ ಕಡೆ ಇರುತ್ತಾರೆ. ಕೆಲವರಿಗೆ ಮತದಾನ ಮಾಡಲು ಮನಸ್ಸೇ ಇರುವುದಿಲ್ಲ. ಈ ಕಾರಣದಿಂದ ಮತದಾನ ಕಡಿಮೆಯಾಗುತ್ತದೆ. ಪ್ರತಿಯೊಬ್ಬ ಅಧಿಕಾರಿಯೂ ಸಹ ಮತದಾನ ಜಾಸ್ತಿಯಾಗುವಂತೆ ನೋಡಿಕೊಳ್ಳಬೇಕು. ಶೇ.100 ರಷ್ಟು ಮತದಾನ ಆಗುವಂತೆ ಎಲ್ಲರೂ ಶ್ರಮಿಸೋಣ ಎಂದರು. ಈ ಸಂದರ್ಭದಲ್ಲಿ ತಾಲೂಕು ಸ್ಲೀಪ್ ಸಮಿತಿ ಅಧ್ಯಕ್ಷ ಎಚ್.ಡಿ.ನವೀನ್ ಕುಮಾರ್, ತಹಶೀಲ್ದಾರ್ ರಮೇಶ್,ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಆರ್.ಪುಷ್ಪ, ಪಟ್ಟಣ ಪಂಚಾ ಯಿತಿ ಮುಖ್ಯಾಧಿಕಾರಿ ಆರ್.ವಿ.ಮಂಜುನಾಥ್, ತಾಲೂಕು ಪಂಚಾಯಿತಿ ಉದ್ಯೋಗ ಖಾತ್ರಿ ಯೋಜನೆಯ ಕಾರ್ಯ ನಿರ್ವಹಣಾಧಿಕಾರಿ ಮನೀಶ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪೂರ್ಣೇಶ್, ಜ್ವಾಲಾಮಾಲಿನಿ ಜೇಸಿ ಸಂಸ್ಥೆ ಅಧ್ಯಕ್ಷ ಎಂ.ಪಿ.ಮನು, ತಾಲೂಕು ಪ್ರಾಥಮಿಕ ಶಾಲಾ ಶಾ.ಶಿ.ಸಂಘದ ಅಧ್ಯಕ್ಷ ನಂಜುಂಡಪ್ಪ, ಸಿ.ಡಿ.ಪಿ.ಒ. ವೀರಭದ್ರಯ್ಯ ಮಾಜಿ ಗೌಡರ್, ವಿವಿಧ ಇಲಾಖೆಯ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಇಲಾಖೆಯವರು, ಶಾಲಾ ಶಿಕ್ಷಕ, ಶಿಕ್ಷಕಿಯರು ಇದ್ದರು.ನಂತರ ಬೈಕ್ ಜಾಥಾದ ಮೂಲಕ ಪಟ್ಟಣಧ ವಾಟರ್ ಟ್ಯಾಂಕ್ ಸರ್ಕಲ್‌ಗೆ ತಲುಪಿ ಅಲ್ಲಿ ಮಾನವ ಸರಪಳಿ ರಚಿಸಲಾಯಿತು. ಜಿಲ್ಲಾ ಸ್ಲೀಪ್ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಪ್ರಮಾಣ ವಚನ ಬೋಧಿಸಿದರು.ನಂತರ ಗುರುಭವನದಲ್ಲಿ ಏರ್ಪಡಿಸಿದ್ದ ರಂಗೋಲಿ ಸ್ಪರ್ಧೆಯನ್ನು ವೀಕ್ಷಣೆ ಮಾಡಿ ನಂತರ ತಾಲೂಕು ಪಂಚಾಯಿತಿಯಲ್ಲಿ ಜಿ.ಪಂ. ಮುಖ್ಯ ಕಾರ್ಯ ನಿರ್ಹಣಾಧಿ ಕಾರಿ ಗೋಪಾಲಕೃಷ್ಣ ಅವರು ಸ್ವೀಪ್ ಸಮಿತಿಯ ವಾಟ್ಸಾಪ್ ಗ್ರೂಪ್ ಉದ್ಘಾಟಿಸಿದರು. ನಂತರ ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು. ರಂಗೋಲಿ ಸ್ಪರ್ಧೆಯಲ್ಲಿ ಬಂಡಿಹೊಳೆ ಸೌಮ್ಯ ಪ್ರಥಮ, ರಮ್ಯ ದ್ವಿತೀಯ,ಪವಿತ್ರ ತೃತೀಯ ಬಹುಮಾನ ಪಡೆದರು.ಚಿತ್ರ: ನರಸಿಂಹರಾಜಪುರ ತಾಲೂಕು ಸ್ಲೀಪ್ ಸಮತಿ ಏರ್ಪಡಿಸಿದ್ದ ಮತದಾರರ ಜಾಗೃತಿ ಜಾಥಾ ಕಾರ್ಯಕ್ರಮ ಉದ್ಘಾಟಿಸಿ ಜಿಲ್ಲಾ ಸ್ಲೀಪ್ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಮಾತನಾಡಿದರು.