ದೇಶದ ವಿವಿಧ ಚುನಾವಣೆಗಳಲ್ಲಿ ನಡೆದಿರುವ ಅಕ್ರಮ ಹಾಗೂ ಮೋಸದಾಟಗಳಿಂದ ವಿಪಕ್ಷಗಳು ಈಗ ಎಸ್‌ಐಆರ್ (ವಿಶೇಷ ಮತದಾರರ ಪರಿಷ್ಕರಣೆ) ಪ್ರಕ್ರಿಯೆ ಬಗ್ಗೆ ಹೆಚ್ಚಿನ ಜಾಗೃತಿಯನ್ನು ವಹಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ ಹೇಳಿದರು.

ಕುಂದಾಪುರ: ದೇಶದ ವಿವಿಧ ಚುನಾವಣೆಗಳಲ್ಲಿ ನಡೆದಿರುವ ಅಕ್ರಮ ಹಾಗೂ ಮೋಸದಾಟಗಳಿಂದ ವಿಪಕ್ಷಗಳು ಈಗ ಎಸ್‌ಐಆರ್ (ವಿಶೇಷ ಮತದಾರರ ಪರಿಷ್ಕರಣೆ) ಪ್ರಕ್ರಿಯೆ ಬಗ್ಗೆ ಹೆಚ್ಚಿನ ಜಾಗೃತಿಯನ್ನು ವಹಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ ಹೇಳಿದರು.

ಕುಂದಾಪುರ ಸಮೀಪದ ವಂಡ್ಸೆಯ ಶ್ರೇಯಾ ಕನ್ವೆನ್ಷನ್ ಹಾಲ್‌ನಲ್ಲಿ ಭಾನುವಾರ ವಂಡ್ಸೆ ಬ್ಲಾಕ್ ಕಾಂಗ್ರೆಸ್ ಸಮಿತಿ ಆಶ್ರಯದಲ್ಲಿ ಬಿಎಲ್‌ಎ-2 ನಿಯೋಜಿತರಿಗೆ ಆಯೋಜಿಸಿದ್ದ ಎಸ್‌ಐಆರ್ ಮತದಾರ ಪರಿಷ್ಕರಣೆ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಚುನಾವಣೆಯಲ್ಲಿ ಮತಗಳ ಕಳ್ಳತನ ಮಾಡುತ್ತಿದ್ದ ಬಿಜೆಪಿ, ಈಗ ಆಯ್ಕೆಯಾದ ಜನಪ್ರತಿನಿಧಿಗಳನ್ನೇ ತನ್ನತ್ತ ಸೆಳೆಯುವ ರಾಜಕೀಯ ನಡೆಸುತ್ತಿದೆ. ಹಿಂದೆ ಮಹಾರಾಷ್ಟ್ರ ಮತ್ತು ಪಂಜಾಬ್‌ನಲ್ಲಿ ಕಂಡಿದ್ದ ಈ ಬೆಳವಣಿಗೆಗಳು ಈಗ ಇತರ ರಾಜ್ಯಗಳಲ್ಲೂ ಮುಂದುವರಿದಿವೆ. ಸಂವಿಧಾನ ಬದಲಾವಣೆಗೆ ಅಗತ್ಯವಾದ ಸಂಖ್ಯಾಬಲ ಹೆಚ್ಚಿಸಿಕೊಳ್ಳುವ ಪ್ರಯತ್ನಗಳು ನಡೆಯುತ್ತಿವೆ ಎಂದು ಆರೋಪಿಸಿದರು.ಮತದಾರರ ಪಟ್ಟಿಯಲ್ಲಿ ತಮ್ಮ ಹಾಗೂ ಕುಟುಂಬ ಸದಸ್ಯರ ಹೆಸರುಗಳಿರುವುದನ್ನು ಪ್ರತಿಯೊಬ್ಬರೂ ಖಚಿತಪಡಿಸಿಕೊಳ್ಳಬೇಕು. ಬಿಎಲ್‌ಎ ಜವಾಬ್ದಾರಿ ವಹಿಸಿಕೊಂಡವರು ಅದನ್ನು ಪ್ರಾಮಾಣಿಕವಾಗಿ ನಿರ್ವಹಿಸಬೇಕು ಎಂದು ಕರೆ ನೀಡಿದ ಅವರು, ಪಕ್ಷ ಸಂಘಟನೆಯ ಜವಾಬ್ದಾರಿ ತೆಗೆದುಕೊಳ್ಳಲು ಹಿಂಜರಿಕೆ ತೋರುವವರು ಪಕ್ಷ ನೀಡಿರುವ ಅಧಿಕಾರವನ್ನು ತ್ಯಜಿಸಬೇಕು ಎಂದರು.ಕಾರ್ಯಕ್ರಮದಲ್ಲಿ ತರಬೇತಿ ನೀಡಿದ ಬೆಂಗಳೂರಿನ ಜಾಗೃತ ಕರ್ನಾಟಕ ಸಂಘಟನೆಯ ಪ್ರಥ್ವಿರಾಜ್ ಮಂಡ್ಯ ಮಾತನಾಡಿ, ಮತದಾರರ ಪರಿಷ್ಕರಣೆ ಹೆಸರಿನಲ್ಲಿ ಹೊಸ ಮತದಾರರ ಪಟ್ಟಿ ಸಿದ್ಧಪಡಿಸುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು.

ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸೂರಜ್ ಜಿ. ಪೂಜಾರಿ, ಕಾಂಗ್ರೆಸ್ ಸಾಮಾಜಿಕ ಜಾಲತಾಣದ ರಾಜ್ಯ ಉಪಾಧ್ಯಕ್ಷ ಚಂದ್ರಶೇಖರ ಶೆಟ್ಟಿ, ಜಿಲ್ಲಾ ಅಧ್ಯಕ್ಷ ರೋಶನ್ ಕುಮಾರ್ ಶೆಟ್ಟಿ, ಸಂಪಿಗೇಡಿ ಸಂಜೀವ ಶೆಟ್ಟಿ, ಉದಯ್ ಪೂಜಾರಿ ವಂಡ್ಸೆ, ಉದಯ್‌ ಕುಮಾರ ಶೆಟ್ಟಿ ಅಡಿಕೆಕೊಡ್ಲು, ಹರೀಶ್ ತೋಳಾರ್ ಕೊಲ್ಲೂರು, ಪ್ರಸನ್ನಕುಮಾರ ಶೆಟ್ಟಿ ಕೆರಾಡಿ, ಶರತ್‌ಕುಮಾರ ಶೆಟ್ಟಿ ಬಾಳಿಕೆರೆ, ಸದಾಶಿವ ಶೆಟ್ಟಿ ಶಂಕರನಾರಾಯಣ, ಅಕ್ಷಯ್ ಶೆಟ್ಟಿ ಉಳ್ಳೂರು, ಹರ್ಷ ಶೆಟ್ಟಿ ತೊಂಬಟ್ಟು ಹಾಗೂ ಸರ್ವೋತ್ತಮ ಶೆಟ್ಟಿ ಇಡೂರು ಉಪಸ್ಥಿತರಿದ್ದರು. ವಂಡ್ಸೆ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪ್ರದೀಪ್ ಕುಮಾರ್ ಶೆಟ್ಟಿ ಗುಡಿಬೆಟ್ಟು ಸ್ವಾಗತಿಸಿದರು.