ವಾರದಲ್ಲಿ ಬಿಜೆಪಿ ನೂತನ ರಾಜ್ಯಾಧ್ಯಕ್ಷರ ಆಯ್ಕೆಗೆ ಚುನಾವಣೆ : ಹರಿಪ್ರಕಾಶ ಕೋಣೆಮನೆ

| N/A | Published : Feb 04 2025, 12:31 AM IST / Updated: Feb 04 2025, 12:27 PM IST

ವಾರದಲ್ಲಿ ಬಿಜೆಪಿ ನೂತನ ರಾಜ್ಯಾಧ್ಯಕ್ಷರ ಆಯ್ಕೆಗೆ ಚುನಾವಣೆ : ಹರಿಪ್ರಕಾಶ ಕೋಣೆಮನೆ
Share this Article
  • FB
  • TW
  • Linkdin
  • Email

ಸಾರಾಂಶ

ಬೂತ್ ಮಟ್ಟದ ಅಧ್ಯಕ್ಷರಿಂದ ಹಿಡಿದು ರಾಜ್ಯದ 23 ಜಿಲ್ಲೆಯ ಜಿಲ್ಲಾಧ್ಯಕ್ಷರ ಚುನಾವಣೆಯೂ ಪ್ರಜಾತಂತ್ರದ ಅಡಿಯಲ್ಲಿ ಪಾರದರ್ಶಕವಾಗಿ ನಡೆಸಲಾಗಿದೆ ಎಂದು ಬಿಜೆಪಿ ವಕ್ತಾರ ಹರಿಪ್ರಕಾಶ ಕೋಣೆಮನೆ ತಿಳಿಸಿದರು.

ಶಿರಸಿ: ರಾಜಕೀಯ ಪಕ್ಷದಲ್ಲಿ ಭಿನ್ನಾಭಿಪ್ರಾಯಗಳಿರುವುದು ಸಹಜ. ಒಂದು ವಾರದಲ್ಲಿ ನೂತನ ರಾಜ್ಯಾಧ್ಯಕ್ಷರ ಆಯ್ಕೆ ಪ್ರಕ್ರಿಯೆಗೆ ಚುನಾವಣೆ ನಡೆಯುತ್ತದೆ ಎಂದು ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ ತಿಳಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬೂತ್ ಮಟ್ಟದ ಅಧ್ಯಕ್ಷರಿಂದ ಹಿಡಿದು ರಾಜ್ಯದ ೨೩ ಜಿಲ್ಲೆಯ ಜಿಲ್ಲಾಧ್ಯಕ್ಷರ ಚುನಾವಣೆಯೂ ಪ್ರಜಾತಂತ್ರದ ಅಡಿಯಲ್ಲಿ ಪಾರದರ್ಶಕವಾಗಿ ನಡೆಸಲಾಗಿದೆ ಎಂದರು.ಕೇಂದ್ರದ ಬಜೆಟ್ ಅಧಿವೇಶನದಲ್ಲಿ ವಿರೋಧ ಪಕ್ಷ ಭಾಗವಹಿಸದೇ ಬೇಜವಾಬ್ದಾರಿಯಾಗಿ ನಡೆದುಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವುದು ಸರ್ವಸ್ಪರ್ಶಿ ಬಜೆಟ್ ಎಂದು ಆರ್ಥಕ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 60 ವರ್ಷದಲ್ಲಿ ಮಾಡಲಾಗದಿರುವುದನ್ನು 10 ವರ್ಷದಲ್ಲಿ ಕೇಂದ್ರದ ಬಿಜೆಪಿ ಸರ್ಕಾರ ಮಾಡಿ ತೋರಿಸಿದೆ.

₹೧೨ ಲಕ್ಷದವರೆಗೆ ಆದಾಯ ತೆರಿಗೆ ವಿನಾಯಿತಿ ನೀಡಿದೆ. ಮೀನುಗಾರಿಕಗೆ ₹೬೦ ಸಾವಿರ ಕೋಟಿ ನೀಡಿರುವುದು ಕರ್ನಾಕಟದ ಮೀನುಗಾರರಿಗೆ ದೊಡ್ಡ ಲಾಭವಾಗಲಿದೆ. ಚಾಯ್ತಿಯಲ್ಲಿರುವ ರೈಲ್ವೆ, ರಸ್ತೆ ಯೋಜನೆಗೆ ಮೀಸಲಿಡುವ ಮೂಲಕ ಕರ್ನಾಟಕಕ್ಕೆ ವಿಶೇಷ ಒತ್ತು ನೀಡಲಾಗಿದೆ. ೭.೫ ಕೋಟಿ ಉದ್ಯೋಗ ಸೃಷ್ಟಿ ಮಾಡಲು ಸ್ಟಾರ್ಟ್ಅಪ್‌ಗೆ ಆದ್ಯತೆ ನೀಡಲಾಗಿದೆ. ಬೀದಿಬದಿ ವ್ಯಾಪಾರಿಗಳಿಗೆ ಆರ್ಥಕ ಭದ್ರತೆ ನೀಡಲು ಕ್ರೆಡಿಟ್ ಕಾರ್ಡ್ ನೀಡುವ ಮೂಲಕ ನೇರವಾಗಿ ಸಾಲ ಹಾಗೂ ಸಹಾಯಧನ ಸಿಗಲಿದೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ ಕರ್ಕಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ೨೦೨೫- ೨೬ನೇ ಸಾಲಿನಲ್ಲಿ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ ವಿಕಾಸ ಮತ್ತು ಭಾರತವನ್ನು ಅವೃದ್ಧಿಯತ್ತ ಕೊಂಡೊಯ್ಯುವ ಬಜೆಟ್ ಆಗಿದೆ ಎಂದರು.

ಸುದ್ದಿಗೊಷ್ಠಿಯಲ್ಲಿ ಜಿಲ್ಲಾ ವಕ್ತಾರ ಸದಾನಂದ ಭಟ್ಟ ನಡಗೋಡ, ನಗರಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ, ಉಪಾಧ್ಯಕ್ಷ ರಮಾಕಾಂತ ಭಟ್, ಶ್ರೀರಾಮ ನಾಯ್ಕ, ರವಿಚಂದ್ರ ಶೆಟ್ಟಿ ಇದ್ದರು.

ಅತಿಕ್ರಮಣದಾರರು ಭಯ ಪಡುವ ಅಗತ್ಯವಿಲ್ಲ: ಶಾಸಕ ಆರ್‌.ವಿ. ದೇಶಪಾಂಡೆ ಭರವಸೆ

ಹಳಿಯಾಳ: ಕರ್ನಾಟಕ ಅರಣ್ಯ ಅಧಿನಿಯಮ ಕಲಂ 64- ಎ ರಂತೆ ಅರಣ್ಯ ಇಲಾಖೆಯು ಅತಿಕ್ರಮಣದಾರರಿಗೆ ನೋಟಿಸ್ ನೀಡುತ್ತಿದ್ದು, ಅದಕ್ಕಾಗಿ 1978ರ ಏ. 27ಕ್ಕಿಂತ ಪೂರ್ವ ಅರಣ್ಯವನ್ನು ಸಾಗುವಳಿ ಮಾಡಿ ಬದುಕು ನಿರ್ವಹಿಸುತ್ತಿರುವ ಅತಿಕ್ರಮಣದಾರರು ಭಯಪಡುವ ಅವಶ್ಯಕತೆಯಿಲ್ಲ ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ, ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ತಿಳಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಾಲೂಕಿನ ಗ್ರಾಮಾಂತರ ಭಾಗದ ಅರಣ್ಯ ಅತಿಕ್ರಮಣದಾರರ ನಿಯೋಗವೊಂದು ಸೋಮವಾರ ನನ್ನ ನಿವಾಸಕ್ಕೆ ಬಂದು ಅರಣ್ಯ ಇಲಾಖೆಯವರು ನೋಟಿಸ್ ನೀಡಿ ಒಕ್ಕಲೆಬ್ಬಿಸುವ ಪ್ರಯತ್ನದಲ್ಲಿದ್ದಾರೆ. ಅದಕ್ಕಾಗಿ ನಮ್ಮನ್ನು ರಕ್ಷಿಸಿ ಎಂದು ಮನವಿಯನ್ನು ಮಾಡಿದ್ದಾರೆ. ನಾನು ಅವರಿಗೆ ರಕ್ಷಣೆಯ ವಾಗ್ದಾನ ನೀಡಿದ್ದೇನೆ. ಅದಕ್ಕೆ ನಾನು ಬದ್ಧನಾಗಿದ್ದೇನೆ ಎಂದರು.

ನಾನು ಸಚಿವನಾಗಿದ್ದ ಅವಧಿಯಲ್ಲಿ ಬುಡಕಟ್ಟು ಅರಣ್ಯವಾಸಿಗಳಿಗೆ ಜಮೀನು ಹಕ್ಕು ಪತ್ರವನ್ನು ಬಹುದೊಡ್ಡ ಪ್ರಮಾಣದಲ್ಲಿ ನೀಡಲಾಯಿತು. ಇದರಿಂದ ಅರಣ್ಯವನ್ನು ಅವಲಂಬಿತ ಬಡ ಬುಡಕಟ್ಟು ಅರಣ್ಯವಾಸಿಗಳಿಗೆ ಅನುಕೂಲವಾಯಿತು. ಆದರೆ ಇತರ ಸಾಂಪ್ರದಾಯಿಕ ಅರಣ್ಯವಾಸಿಗಳಿಗೆ ಜಮೀನು ಹಕ್ಕುಪತ್ರ ನೀಡುವ ಕಾರ್ಯವು ಹಾಗೆಯೇ ಉಳಿಯಿತು. ಈ ಸಾಂಪ್ರದಾಯಿಕ ಅರಣ್ಯವಾಸಿಗಳಿಗೆ ಹಕ್ಕುಪತ್ರ ನೀಡಲು ಸೂಚಿತ ನಿಬಂಧನೆಯಂತೆ ಅರ್ಜಿಯನ್ನು ಆಹ್ವಾನಿಸಲಾಗಿತ್ತು. ಆದರೆ ಅರಣ್ಯ ಸಮಿತಿಗಳು ಸಾಕಷ್ಟು ಅರ್ಜಿಗಳನ್ನು ತಿರಸ್ಕರಿಸಿದವು. 

ಸರ್ವೋಚ್ಛ ನ್ಯಾಯಾಲಯವು ತಿರಸ್ಕೃತಗೊಂಡ ಅರ್ಜಿಗಳನ್ನು ಮತ್ತೆ ಪುನರ್ ಪರಿಶೀಲಿಸಲು ಅವಕಾಶ ಕಲ್ಪಿಸಿತು. ಈ ಅರಣ್ಯ ಸಮಿತಿಯಲ್ಲಿ ತಾಲೂಕು ಮಟ್ಟದಲ್ಲಿ ತಾಪಂ ಹಾಗೂ ಜಿಲ್ಲಾ ಮಟ್ಟದ ಸಮಿತಿಯಲ್ಲಿ ಜಿಪಂ ಜನಪ್ರತಿನಿಧಿಗಳ ಸದಸ್ಯರಾಗಿ ಇರಬೇಕಿತ್ತು. ಜಿಪಂ ಮತ್ತು ತಾಪಂ ಚುನಾವಣೆಗಳು ನಡೆಯದೇ ಇರುವುದರಿಂದ ಜನಪ್ರತಿನಿಧಿಗಳು ಇಲ್ಲ. ಕೇವಲ ಈ ಸಮಿತಿಯಲ್ಲಿ ಅಧಿಕಾರಿಗಳೇ ಇದ್ದಾರೆ. ಜನಪ್ರತಿನಿಧಿಗಳಿಲ್ಲದ ಸಮಿತಿ ನೀಡುವ ನಿರ್ಧಾರ ಸರ್ಕಾರ ಮಾನ್ಯ ಮಾಡಬಾರದು ಎಂದರು.

ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಪಾಟೀಲ, ಯುವ ಕಾಂಗ್ರೆಸ್ ಅಧ್ಯಕ್ಷ ರವಿ ತೋರಣಗಟ್ಟಿ, ನಗರ ಘಟಕ ಅಧ್ಯಕ್ಷ ಶಂಕರ ಬೆಳಗಾಂವಕರ ಇದ್ದರು.