ಸಾರಾಂಶ
ಧಾರವಾಡ:
ಧಾರವಾಡ, ಗದಗ ಮತ್ತು ಉತ್ತರಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ (ಧಾರವಾಡ ಕೆಎಂಎಫ್) ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆ ಜೂ. 30ರಂದು ನಡೆಯಲಿದ್ದು, ಒಟ್ಟು 9 ಸ್ಥಾನಗಳ ಪೈಕಿ ಒಂದು ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆ ನಡೆದಿದೆ. ಇದೀಗ ಎಂಟು ಸ್ಥಾನಗಳಿಗೆ ಅಂತಿಮವಾಗಿ 17 ಅಭ್ಯರ್ಥಿಗಳು ಕಣದಲ್ಲಿದ್ದಾರೆ.ಒಟ್ಟು 9 ಸ್ಥಾನಗಳಿಗೆ 21 ಮಂದಿ ನಾಮಪತ್ರ ಸಲ್ಲಿಸಿದ್ದರು. ಗದಗ–ನರಗುಂದ ತಾಲೂಕು ನಿರ್ದೇಶಕ ಸ್ಥಾನಕ್ಕೆ ಹನುಮಂತಗೌಡ ಗೋವಿಂದ ಗೌಡ ಹಿರೇಗೌಡರ ಅವರೊಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆ ಘೋಷಿಸಲಾಯಿತು. ಮಂಜುನಾಥಗೌಡ (ಕಲಘಟಗಿ ತಾಲೂಕು), ಮಧುಸೂದನ ಗೋಪಾಲದೇವರ (ಶಿರಸಿ ತಾಲೂಕು) ಹಾಗೂ ಸತ್ಯನಾರಾಯಣ ನರಸಿಂಹ ಹೆಗಡೆ (ಯಲ್ಲಾಪುರ ದಾಂಡೇಲಿ, ಹಳಿಯಾಳ, ಮುಂಡಗೋಡ, ಅಂಕೋಲಾ, ಜೋಯಿಡಾ ಹಾಗೂ ಕಾರವಾರ ತಾಲೂಕು) ಅವರು ನಾಮಪತ್ರ ಹಿಂಪಡೆದರು.
ಎಂಟು ಕ್ಷೇತ್ರಗಳಿಗೆ ಒಟ್ಟು 555 ಮತದಾರರು ಇದ್ದಾರೆ. ಎಂಟು ಸ್ಥಾನಗಳಲ್ಲಿ ಏಳು ಸ್ಥಾನಗಳಿಗೆ ತಲಾ ಇಬ್ಬರು ಹಾಗೂ ಒಂದು ಸ್ಥಾನಕ್ಕೆ ಮೂವರು ಕಣದಲ್ಲಿ ಇದ್ದಾರೆ. ಭಾನುವಾರ ಬೆಳಗ್ಗೆ 9ರಿಂದ ಮಧ್ಯಾಹ್ನ 4ರ ವರೆಗೆ ಮತದಾನವು ಧಾರವಾಡ ಉತ್ಪನ್ನ ಡೇರಿಯ ಮುಖ್ಯ ಕಚೇರಿ ಕಟ್ಟಡದಲ್ಲಿ ನಡೆಯಲಿದೆ ಎಂದು ಚುನಾವಣಾಧಿಕಾರಿಯೂ ಆಗಿರುವ ಹುಬ್ಬಳ್ಳಿ–ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಸಂತೋಷಕುಮಾರ ಬಿರಾದಾರ ತಿಳಿಸಿದರು.ಕಣದಲ್ಲಿರುವ ಅಭ್ಯರ್ಥಿಗಳು:
ಧಾರವಾಡ, ಅಳ್ನಾವರ, ನವಲಗುಂದ, ಅಣ್ಣಿಗೇರಿ ತಾಲೂಕು ವ್ಯಾಪ್ತಿಯಲ್ಲಿ 83 ಮತದಾರರು ಇದ್ದು, ಕಣದಲ್ಲಿ ಮಾಜಿ ಅಧ್ಯಕ್ಷ ಶಂಕರಪ್ಪ ಮುಗದ ಮತ್ತು ಹೇಮರೆಡ್ಡಿ ನಾಗರಡ್ಡಿ ಲಿಂಗರಡ್ಡಿ ಇದ್ದಾರೆ. ಕಲಘಟಗಿ ತಾಲೂಕು ವ್ಯಾಪ್ತಿಯಲ್ಲಿ 38 ಮತದಾರರಿದ್ದು, ಗೀತಾ ಸುರೇಶ ಮರಲಿಂಗಣ್ಣವರ ಮತ್ತು ಹನುಮಂತಪ್ಪ ಫಕೀರಪ್ಪ ಕೊರವರ ಕಣದಲ್ಲಿದ್ದಾರೆ. ಕುಂದಗೋಳ, ಹುಬ್ಬಳ್ಳಿ ಗ್ರಾಮೀಣ ಮತ್ತು ಹುಬ್ಬಳ್ಳಿ ನಗರ ತಾಲ್ಲೂಕು ವ್ಯಾಪ್ತಿಯಲ್ಲಿ 67 ಮತದಾರರಿದ್ದು, ಗಂಗಪ್ಪ ಮೂಕಪ್ಪ ಮೊರಬದ ಮತ್ತು ಸುರೇಶ ಬಣವಿ ಕಣದಲ್ಲಿದ್ದಾರೆ. ರೋಣ, ಗಜೇಂದ್ರಗಡ ತಾಲೂಕು ವ್ಯಾಪ್ತಿಯಲ್ಲಿ 42 ಮತಗಳಿದ್ದು, ಗದಿಗೆಪ್ಪ ಕಿರೇಸೂರ ಮತ್ತು ನೀಲಕಂಪ್ಪ ಶಿವಪ್ಪ ಅಸೂಟಿ ಕಣದಲ್ಲಿದ್ದಾರೆ.ಮುಂಡರಗಿ, ಶಿರಹಟ್ಟಿ, ಲಕ್ಷ್ಮೇಶ್ವರ ತಾಲೂಕು ವ್ಯಾಪ್ತಿಯಲ್ಲಿ 71 ಮತಗಳಿದ್ದು, ಲಿಂಗರಾಜಗೌಡ ಹನುಮಂತಗೌಡ ಪಾಟೀಲ ಮತ್ತು ಶೇಖಣ್ಣ ಮ. ಕಾಳೆ ಕಣದಲ್ಲಿದ್ದಾರೆ. ಹಾಗೆಯೇ, ಶಿರಸಿ ತಾಲೂಕು ವ್ಯಾಪ್ತಿ 86 ಮತದಾರರು ಇದ್ದು, ಉಮಾಮಹೇಶ್ವರ ಕೇಶವ ಹೆಗಡೆ ಮತ್ತು ಸುರೇಶ್ಚಂದ್ರ ಕೃಷ್ಣ ಹೆಗಡೆ ಕಣದಲ್ಲಿದ್ದಾರೆ. ಸಿದ್ದಾಪುರ, ಕುಮಟಾ, ಹೊನ್ನಾವರ, ಭಟ್ಕಳ ತಾಲೂಕು ವ್ಯಾಪ್ತಿಯಲ್ಲಿ 74 ಮತದಾರರಿದ್ದು, ಪರಶುರಾಮ ವೀರಭದ್ರನಾಯ್ಕ, ಮಂಜುನಾಥ ಹೆಗಡೆ ಮತ್ತು ಸಾಧನಾ ರಾಜೇಶ ಭಟ್ಟ ಕಣದಲ್ಲಿದ್ದಾರೆ.
ಯಲ್ಲಾಪುರ ದಾಂಡೇಲಿ, ಹಳಿಯಾಳ, ಮುಂಡಗೋಡ, ಅಂಕೋಲಾ, ಜೋಯಿಡಾ, ಕಾರವಾರ ತಾಲೂಕು ವ್ಯಾಪ್ತಿ 94 ಮತಗಳಿದ್ದು, ಪ್ರಶಾಂತ ಸುಬ್ರಾಯ ಸಭಾಹಿತ ಮತ್ತು ಶಂಕರ ಪರಮೇಶ್ವರ ಹೆಗಡೆ ಕಣದಲ್ಲಿದ್ದಾರೆ.