ಸಾರಾಂಶ
ಧಾರವಾಡ:
ಧಾರವಾಡ, ಗದಗ ಹಾಗೂ ಉತ್ತರ ಕನ್ನಡ ಜಿಲ್ಲೆ ವ್ಯಾಪ್ತಿ ಹೊಂದಿರುವ ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ ಸ್ಥಾನದ ಚುನಾವಣೆ ಮುಗಿಯುತ್ತಿದ್ದಂತೆ ಇದೀಗ ಅಧ್ಯಕ್ಷ ಸ್ಥಾನದ ಚುನಾವಣೆ ರಂಗೇರಿದೆ.ಒಕ್ಕೂಟದ ನಿರ್ದೇಶಕರ ಸ್ಥಾನಕ್ಕೆ ಜೂನ್ 30ರಂದು ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಗರು ಮೇಲುಗೈ ಸಾಧಿಸಿದ್ದು, 5ನೇ ಬಾರಿಗೆ ಆಯ್ಕೆಯಾದ ಹಾಲಿ ಅಧ್ಯಕ್ಷರು, ಮಾಜಿ ಶಾಸಕ ಅಮೃತ ದೇಸಾಯಿ ಆಪ್ತರಾದ ಶಂಕರ ಮುಗದ ಅವರು ಅಧ್ಯಕ್ಷರಾಗುವುದು ಬಹುತೇಕ ಖಚಿತವಾಗಿದೆ. ಆದರೂ ಅಧಿಕಾರದ ಗದ್ದುಗೆ ಹಿಡಿಯಲು ಕಾಂಗ್ರೆಸ್ ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದೆ. ಈ ದಿಸೆಯಲ್ಲಿ ಒಕ್ಕೂಟದ ಮಾಜಿ ಅಧ್ಯಕ್ಷ ನೀಲಕಂಠ ಅಸೂಟಿ ಪ್ರಯತ್ನ ನಡೆಸಿದ್ದಾರೆ ಎಂಬ ಮಾಹಿತಿ ಇದೆ.
ಒಟ್ಟು ಒಂಭತ್ತು ನಿರ್ದೇಶಕರ ಸ್ಥಾನಗಳ ಪೈಕಿ ಏಳು ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿದ್ದರೆ, ನೀಲಕಂಠ ಅಸೂಟಿ, ಹನಮಂತಗೌಡ ಹಿರೇಗೌಡರ ಮಾತ್ರ ಕಾಂಗ್ರೆಸ್ ಬೆಂಬಲಿತರು ಎಂದು ಗುರುತಿಸಿಕೊಂಡಿದ್ದಾರೆ. ಆದರೆ, ಕಳೆದ ಎರಡು ದಿನಗಳ ಹಿಂದೆ ಮಾಜಿ ಸಚಿವ, ಪ್ರಭಾವಿ ಶಾಸಕ ವಿನಯ ಕುಲಕರ್ಣಿ ಅವರ ಪತ್ನಿ ಶಿವಲೀಲಾ ಕುಲಕರ್ಣಿ ಅವರನ್ನು ಸರ್ಕಾರದಿಂದ ನಾಮನಿರ್ದೇಶನಗೊಳಿಸಿದ್ದು ಇದೀಗ ಒಕ್ಕೂಟದ ಚುನಾವಣೆ ವಿಷಯದಲ್ಲಿ ಮತ್ತಷ್ಟು ಕುತೂಹಲ ಕೆರಳಿಸಿದೆ.ಎಷ್ಟು ಬಲಾಬಲ:
ಅಧ್ಯಕ್ಷ ಸ್ಥಾನಕ್ಕೆ ಬರೀ ಒಂಭತ್ತು ಜನ ಮತದಾರರು ಅಲ್ಲದೇ, ನಾಮನಿರ್ದೇಶಿತ ಸದಸ್ಯರೊಬ್ಬರು ಹಾಗೂ ನಾಲ್ವರು ಅಧಿಕಾರಿಗಳು (ಸಹಕಾರ ಸಂಘಗಳ ಸಂಯುಕ್ತ ನಿಬಂಧಕರು, ಕೆಎಂಎಫ್ ಅಧಿಕಾರಿ, ಎನ್‌ಡಿಡಿಬಿ ಅಧಿಕಾರಿ, ಪಶುಸಂಗೋಪನೆ ಇಲಾಖೆಯ ಉಪನಿರ್ದೇಶಕ) ಅಧ್ಯಕ್ಷರ ಆಯ್ಕೆ ಸಂದರ್ಭದಲ್ಲಿ ಮತ ಚಲಾವಣೆಯ ಅಧಿಕಾರ ಹೊಂದಿದ್ದಾರೆ. ಬಿಜೆಪಿಗೆ ಚುನಾಯಿತ ಏಳು ಸದಸ್ಯರು ಮತ್ತು ಎನ್‌ಡಿಡಿಬಿ ಅಧಿಕಾರಿ ಸೇರಿ ಒಟ್ಟು ಎಂಟು ಸದಸ್ಯರ ಸಂಖ್ಯಾಬಲ ಪಡೆಯಲಿದೆ. ಆದರೆ, ಶಿವಲೀಲಾ ಕುಲಕರ್ಣಿ ಸೇರಿ ಕಾಂಗ್ರೆಸ್ ಬೆಂಬಲಿತ ಮೂವರು ಸದಸ್ಯರಿದ್ದಾರೆ. ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿ ಇರುವುದರಿಂದ ಮೂವರು ಅಧಿಕಾರಿಗಳು (ಸಹಕಾರ ಸಂಘಗಳ ಸಂಯುಕ್ತ ನಿಬಂಧಕರು, ಕೆಎಂಎಫ್ ಅಧಿಕಾರಿ, ಪಶುಸಂಗೋಪನೆ ಇಲಾಖೆಯ ಉಪನಿರ್ದೇಶಕ) ಸೇರಿದರೆ ಆರು ಸದಸ್ಯರ ಬಲ ಸಿಗಲಿದೆ.ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಇನ್ನೂ ಎರಡು ಸದಸ್ಯರನ್ನು ಒಲೈಸಬೇಕು. ಇದು ಕಷ್ಟಸಾಧ್ಯವಾದರೂ ಅಸೂಟಿ ಪ್ರಯತ್ನದಲ್ಲಿದ್ದಾರೆ. ಜೊತೆಗೆ ಸಚಿವ ಸಂತೋಷ ಲಾಡ್ ಸಹ ಶುಕ್ರವಾರ ಧಾರವಾಡಕ್ಕೆ ಬರಲಿದ್ದು, ಯಾವ ಯೋಜನೆ ರೂಪಿಸಲಿದ್ದಾರೆ ಕಾದು ನೋಡಬೇಕಿದೆ. ಬಿಜೆಪಿ ಮಾತ್ರ ಅಧ್ಯಕ್ಷ ಸ್ಥಾನಕ್ಕೆ ಶಂಕರ ಮುಗದ ಅವರನ್ನೇ ಈ ಬಾರಿಯೂ ಅಧ್ಯಕ್ಷ ಗಾದಿಗೆ ಕೂರಿಸುವ ತೀರ್ಮಾನ ಮಾಡಿದ್ದು ಅವರೊಬ್ಬರೇ ನಾಮಪತ್ರ ಸಲ್ಲಿಸಲಿದ್ದಾರೆ. ಒಂದೇ ನಾಮಪತ್ರ ಸಲ್ಲಿಕೆಯಾದರೆ ಅವಿರೋಧ ಆಯ್ಕೆಯಾಗಲಿದೆ. ಶುಕ್ರವಾರ ಬೆಳಗ್ಗೆ 11ರಿಂದ ಮಧ್ಯಾಹ್ನ 1ರ ವರೆಗೆ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲು ಸಮಯವಿದೆ ಎಂದು ವ್ಯವಸ್ಥಾಪಕ ನಿರ್ದೇಶಕ ಡಾ. ವೀರೇಶ ತರ್ಲಿ ಕನ್ನಡಪ್ರಭಕ್ಕೆ ಮಾಹಿತಿ ನೀಡಿದರು. ಶಿವಲೀಲಾ ಕುಲಕರ್ಣಿಗೆ ಕಾನೂನು ಸಂಕಷ್ಟ:
ಎರಡು ದಿನಗಳ ಹಿಂದಷ್ಟೇ ಧಾರವಾಡ ಹಾಲು ಒಕ್ಕೂಟಕ್ಕೆ ನಾಮನಿರ್ದೆಶನಗೊಂಡಿದ್ದ ಶಾಸಕ ವಿನಯ ಕುಲಕರ್ಣಿ ಪತ್ನಿ ಶಿವಲೀಲಾಗೆ ಕಾನೂನು ಸಂಕಷ್ಟ ಎದುರಾಗಿದೆ. ಶಿವಲೀಲಾ ಅವರನ್ನು ನಿರ್ದೇಶಕರನ್ನಾಗಿ ನೇಮಕ ಮಾಡಿರುವ ಕ್ರಮ ತಪ್ಪಿದ್ದು, ಅದನ್ನು ಪ್ರಶ್ನಿಸಿ ನಿರ್ದೇಶಕ ಶಂಕರ ಮುಗದ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಗುರುವಾರ ಅರ್ಜಿ ವಿಚಾರಣೆ ನಡೆದು ಮುಂದಿನ ವಾರಕ್ಕೆ ಮುಂದೂಡಲಾಗಿದೆ. ಶಿವಲೀಲಾ ಕುಲಕರ್ಣಿ ಅವರು ಸ್ವತಃ ಡೇರಿ ಹೊಂದಿದ್ದು, ದೊಡ್ಡ ಪ್ರಮಾಣದ ಹೈನುಗಾರಿಕೆ ನಡೆಸುತ್ತಿದ್ದಾರೆ. ಕೆಎಂಎಫ್ ಸಹ ಹೈನುಗಾರಿಕೆ ಉದ್ಯಮವಾಗಿದ್ದು ಇದರ ಹಿಂದೆ ಸ್ವಹಿತಾಸಕ್ತಿ ಅಡಗಿದೆ. ಹೀಗಾಗಿ ನಾಮನಿರ್ದೇಶನದಲ್ಲಿ ಕೆಎಂಎಫ್ ನಿಯಮಾವಳಿಯ ಉಲ್ಲಂಘನೆ ಆಗಲಿದೆ. ಆದ್ದರಿಂದ ಅವರ ನಾಮನಿರ್ದೇಶನ ಸರಿಯಲ್ಲ ಎಂದು ನ್ಯಾಯಾಲಯಕ್ಕೆ ತಕರಾರು ಅರ್ಜಿ ಸಲ್ಲಿಸಿದ್ದರು. ಶುಕ್ರವಾರ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಜರುಗಲಿರುವುದರಿಂದ ಗುರುವಾರ ನ್ಯಾಯಾಲಯದಲ್ಲಿ ಅರ್ಜಿ ವಿಚಾರಣೆ ನಡೆದು ವಿಚಾರಣೆಯನ್ನು ಮುಂದೂಡಲಾಯಿತು. ಶುಕ್ರವಾರದ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಶಿವಲೀಲಾ ಅವರು ಮತ ಚಲಾವಣೆ ಮಾಡಲು ಯಾವ ಅಡ್ಡಿ ಇಲ್ಲ. ಆದರೆ, ಕಾಂಗ್ರೆಸ್‌ಗೆ ಬಹುಮತ ಆಗುವುದು ಕಷ್ಟಕರ ಹಿನ್ನೆಲೆಯಲ್ಲಿ ಶಿವಲೀಲಾ ಕುಲಕರ್ಣಿ ಅವರ ಮುಂದಿನ ಹಾದಿ ಏನು ಎಂಬುದು ಕುತೂಹಲ ಕೆರಳಿಸಿದೆ. ಈ ಮಧ್ಯೆ ಶುಕ್ರವಾರ ಒಕ್ಕೂಟಕ್ಕೆ ಶಿವಲೀಲಾ ಬದಲು ಮತ್ತೋರ್ವ ಗಣ್ಯರನ್ನು ನಾಮ ನಿರ್ದೇಶಿತ ಸದಸ್ಯರನ್ನಾಗಿ ಮಾಡಿದರೂ ಅಚ್ಚರಿ ಏನಿಲ್ಲ ಎಂಬ ಮಾಹಿತಿಯೂ ಇದೆ.