ಹಿರಿಯ ಶಾಸಕರಾಗಿದ್ದ ಶಾಮನೂರು ಶಿವಶಂಕರಪ್ಪ ನಿಧನದ ಹಿನ್ನೆಲೆಯಲ್ಲಿ ತೆರವಾದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಶಾಮನೂರು ದ್ವಿತೀಯ ಪುತ್ರ ಎಸ್.ಎಸ್.ಗಣೇಶ್ ಸ್ಪರ್ಧಿಸಲಿ ಎಂದು ಬಿಜೆಪಿ ಹಿರಿಯ ನಾಯಕ, ಮಾಜಿ ಸಚಿವ ಎಸ್.ಎ.ರವೀಂದ್ರನಾಥ ಸಲಹೆ ನೀಡಿದರು.
ಕನ್ನಡಪ್ರಭ ವಾರ್ತೆ ದಾವಣಗೆರೆ
ಹಿರಿಯ ಶಾಸಕರಾಗಿದ್ದ ಶಾಮನೂರು ಶಿವಶಂಕರಪ್ಪ ನಿಧನದ ಹಿನ್ನೆಲೆಯಲ್ಲಿ ತೆರವಾದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಶಾಮನೂರು ದ್ವಿತೀಯ ಪುತ್ರ ಎಸ್.ಎಸ್.ಗಣೇಶ್ ಸ್ಪರ್ಧಿಸಲಿ ಎಂದು ಬಿಜೆಪಿ ಹಿರಿಯ ನಾಯಕ, ಮಾಜಿ ಸಚಿವ ಎಸ್.ಎ.ರವೀಂದ್ರನಾಥ ಸಲಹೆ ನೀಡಿದರು.ತಾಲೂಕಿನ ನಾಗನೂರು ಗ್ರಾಮದಲ್ಲಿ ಗುರುವಾರ ಗ್ರಾಮಸ್ಥರು ಹಮ್ಮಿಕೊಂಡಿದ್ದ ದಿವಂಗತ ಶಾಮನೂರು ಶಿವಶಂಕರಪ್ಪನವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಹಾಗೂ ನುಡಿ ನಮನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ದಕ್ಷಿಣ ಕ್ಷೇತ್ರಕ್ಕೆ ಶಾಮನೂರು ಮನೆಯವರೇ ಅಭ್ಯರ್ಥಿಯಾಗಿರಬೇಕು ಎಂದರು.
ದಕ್ಷಿಣ ಕ್ಷೇತ್ರಕ್ಕೆ ಶಾಮನೂರು ಗಣೇಶ್ ಮಾತು ಕೇಳಿ ಬರುತ್ತಿದೆ. ಮಾಧ್ಯಮಗಳಲ್ಲೂ ಇದೇ ವಿಚಾರ ಗಮನಿಸುತ್ತಿದ್ದೇವೆ. ನಾನೂ ಸಹ ಎಸ್ಸೆಸ್ ಗಣೇಶ ಸ್ಪರ್ಧಿಸಲೆಂದು ಸಲಹೆ ನೀಡುತ್ತೇನೆ. ಕಾಂಗ್ರೆಸ್ಸಿನ ನಾಯಕರ ಮನಸ್ಸಿನಲ್ಲಿ ಏನಿದೆಯೋ ಗೊತ್ತಿಲ್ಲ. ನಮ್ಮ ಪಕ್ಷದಿಂದಲೂ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗುತ್ತದೆ. ಎಸ್ಸೆಸ್ ಗಣೇಶ ಅಭ್ಯರ್ಥಿಯಾದರೆ ಒಳ್ಳೆಯದು ಎಂದು ಹೇಳಿದರು.ಮಾಯಕೊಂಡ ಕ್ಷೇತ್ರದಿಂದ ತಾವು ಶಾಸಕರಾಗಿ ಆಯ್ಕೆಯಾಗಿದ್ದ ವೇಳೆ ಕಬ್ಬು ಬೆಳೆಗಾರರ ವಿಚಾರದ ಬಗ್ಗೆ ಭೇಟಿ ಮಾಡಿದಾಗ ತಮಗೆ ಸೀಟು ಬಿಟ್ಟು ಕೊಡುವಂತೆ ಎಸ್ಸೆಸ್ ಗಣೇಶ್ ಕೇಳಿದ್ದರು. ಆಗ ನಾನೇನೋ ಕ್ಷೇತ್ರವನ್ನು ಬಿಟ್ಟು ಕೊಡುತ್ತೇನೆ. ಕ್ಷೇತ್ರದ ಜನರು ಬಿಟ್ಟು ಕೊಡಬೇಕಲ್ಲಾ ಅಂತಾ ಹೇಳಿದ್ದೆ. ರುಪಾಯಿ ರುಪಾಯಿ ಅನ್ಕೊಂಡು ಬಂದಿದ್ದ ಗಣೇಶ್‌ಗೆ ಇದೀಗ ದಕ್ಷಿಣಕ್ಕೆ ಸ್ಪರ್ಧಿಸಲು ಅವಕಾಶ ಇದೆ ಎಂದರು.
ಅಡಕೆ ಬೆಳೆಗಾರರ ಹೆಚ್ಚಳಕ್ಕೆ ಗಣೇಶ ಕಾರಣ!:ಸಕ್ಕರೆ ಕಾರ್ಖಾನೆ ನಡೆಸುವ ಎಸ್.ಎಸ್.ಗಣೇಶ ಹಿಂದೆ ನಮಗೆಲ್ಲಾ ಕಬ್ಬಿನ ಪರ್ಮಿಟ್ ಕೊಡಲು ತೊಂದರೆ ಮಾಡಿದ್ದರಿಂದಲೇ ನಾನೂ ಕಬ್ಬನ್ನು ಬಿಟ್ಟು, ಅಡಿಕೆ ತೋಟ ಮಾಡಿದೆ. ಒಂದು ವೇಳೆ ಅವತ್ತೇನಾದರೂ ಕಬ್ಬಿಗೆ ಪರ್ಮಿಟ್ ಕೊಟ್ಟಿದ್ದರೆ ನಾನೂ ಸೇರಿದಂತೆ ಬಹುತೇಕರು ಅಡಿಕೆ ಹಾಕುತ್ತಿರಲಿಲ್ಲ. ಕಬ್ಬನ್ನೇ ಬೆಳೆದುಕೊಂಡಿರುತ್ತಿದ್ದೆವು. ಈಗ ದಾವಣಗೆರೆ ತಾಲೂಕು, ಜಿಲ್ಲೆಯ ಬಹುತೇಕ ಕಡೆ ಅಡಕೆ ಬೆಳೆಯುತ್ತಿದ್ದಾರೆ. ಇದಕ್ಕೆಲ್ಲಾ ಎಸ್ಸೆಸ್ ಗಣೇಶ ಕಾರಣ. ನಾವೆಲ್ಲಾ ಆರ್ಥಿಕವಾಗಿ ಪ್ರಬಲರಾಗಲು ಗಣೇಶ ಮುಖ್ಯ ಕಾರಣ ಎಂದು ಸ್ಮರಿಸಿದರು.
ನಮಗೆ ಬಿಜೆಪಿಯಿಂದ ಟಿಕೆಟ್ ನೀಡುತ್ತಿದ್ದರು. ಆದರೆ, ಶಾಮನೂರು ಶಿವಶಂಕರಪ್ಪನವರಿಗೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಕೊಡುತ್ತಿರಲಿಲ್ಲ. ದುಡ್ಡಿದ್ದವರಿಗೆ ಟಿಕೆಟ್ ನೀಡಿದರೆ ಕಷ್ಟ ಅಂತಾ ಕಾಂಗ್ರೆಸ್ ನಾಯಕರ ಆಲೋಚನೆಯಾಗಿತ್ತು. ನನಗೆ ಇಷ್ಟು ವಯಸ್ಸಿಗೆ ಶುಗರ್ ಬಂದಿದ್ದನ್ನು ಕೇಳಿ, ನನಗೆ ಶುಗರ್, ಬಿಪಿ ಯಾವುದೂ ಇಲ್ಲ. ನಮ್ಮಂಗೆ ನೀನು ತಯಾರಿ ತಗೊಳ್ಳಂಗಿಲ್ಲ. ಸೂಪ್ ಅದು ಇದು, ಬೇರೆ ಬೇರೆ ಏನೂ ತಗೊಳ್ಳಲ್ಲ ಅಂತಾ ಕಾಡುತ್ತಿದ್ದರು ಎಂದು ಮೆಲಕು ಹಾಕಿದರು.ಸಾಣೇಹಳ್ಳಿ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಹಿರಿಯ ಕೈಗಾರಿಕೋದ್ಯಮಿ ಶಾಮನೂರು ಗಣೇಶ್, ಎಪಿಎಂಸಿ ಮಾಜಿ ಅಧ್ಯಕ್ಷ ಎನ್.ಜಿ.ಪುಟ್ಟಸ್ವಾಮಿ, ಭಾರತೀಯ ರೈತ ಒಕ್ಕೂಟದ ಅಧ್ಯಕ್ಷ ಎಚ್.ಆರ್.ಲಿಂಗರಾಜ ಶಾಮನೂರು, ರಾಜಣ್ಣ, ಮಹೇಶ್ವರಪ್ಪ ಇತರರು ಇದ್ದರು.