ಚುನಾವಣಾ ಅಕ್ರಮ: ನಾಳೆ ಬೆಂಗ್ಳೂರಲ್ಲಿ ರ್‍ಯಾಲಿ

| Published : Aug 04 2025, 12:15 AM IST

ಸಾರಾಂಶ

ಲೋಕಸಭೆ ಚುನಾವಣೆಯಲ್ಲಿ ನಡೆದಿರುವ ಅಕ್ರಮ ವಿರುದ್ದ ಹೋರಾಟ ಮಾಡಲು ಬೆಂಗಳೂರಿನಲ್ಲಿ ಸಂಸದ ರಾಹುಲ್ ಗಾಂಧಿ ಹಾಗೂ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಆ. ೫ ರಂದು ನಡೆಯುವ ಪ್ರತಿಭಟನೆಗೆ ಜಿಲ್ಲೆಯ ಎಂಟು ಬ್ಲಾಕ್‌ನಿಂದ ಒಂದು ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಹಾಗೂ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ. ಮರಿಸ್ವಾಮಿ ತಿಳಿಸಿದರು.

ಕನ್ನಡಪ್ರಭ ವಾರ್ತೆ, ಚಾಮರಾಜನಗರ

ಲೋಕಸಭೆ ಚುನಾವಣೆಯಲ್ಲಿ ನಡೆದಿರುವ ಅಕ್ರಮ ವಿರುದ್ದ ಹೋರಾಟ ಮಾಡಲು ಬೆಂಗಳೂರಿನಲ್ಲಿ ಸಂಸದ ರಾಹುಲ್ ಗಾಂಧಿ ಹಾಗೂ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಆ. ೫ ರಂದು ನಡೆಯುವ ಪ್ರತಿಭಟನೆಗೆ ಜಿಲ್ಲೆಯ ಎಂಟು ಬ್ಲಾಕ್‌ನಿಂದ ಒಂದು ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಹಾಗೂ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ. ಮರಿಸ್ವಾಮಿ ತಿಳಿಸಿದರು.

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಚುನಾವಣಾ ಆಯೋಗ ಲೋಕಸಭಾ ಚುನಾವಣೆಯಲ್ಲಿ ಅಕ್ರಮ ಮಾಡಿದೆ ಎಂಬ ಆರೋಪವನ್ನು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮಾಡಿದ್ದು, ಅಧಿವೇಶನದಲ್ಲಿ ಈ ಬಗ್ಗೆ ಚರ್ಚೆ ಮಾಡಿದ್ದಾರೆ. ಸಂಸತ್‌ನ ಹೊರಗೂ ಕೇಂದ್ರದ ಬಿಜೆಪಿ ಸರ್ಕಾರ ಮತ್ತು ಚುನಾವಣೆ ಆಯೋಗಕ್ಕೆ ಸವಾಲು ಹಾಕಿದ್ದು, ಕರ್ನಾಟಕದಲ್ಲಿ ಚುನಾವಣೆ ಅಕ್ರಮ ನಡೆದಿರುವ ಬಗ್ಗೆ ದಾಖಲೆಗಳ ಸಮೇತ ಪ್ರತಿಭಟನೆ ಮಾಡಲು ರಾಹುಲ್‌ಗಾಂಧಿ ಹಾಗೂ ಮಲ್ಲಿಕಾರ್ಜನ ಖರ್ಗೆ ಆ. ೫ ರಂದು ಬೆಂಗಳೂರಿನ ಪ್ರಿಡಂ ಪಾರ್ಕ್‌ನಲ್ಲಿ ಪ್ರತಿಭಟನೆ ಮಾಡಲಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸೇರಿದಂತೆ ಸಚಿವರು, ಶಾಸಕರು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ರಾಜ್ಯ ಹಾಗೂ ಜಿಲ್ಲಾ ಘಟಕದ ಎಲ್ಲಾ ಪದಾಧಿಕಾರಿಗಳು ಜಿಲ್ಲಾ ಘಟಕದ ಅಧ್ಯಕ್ಷರು, ಬ್ಲಾಕ್ ಅಧ್ಯಕ್ಷರು ಹಾಗೂ ಪದಾದಿಕಾರಿಗಳು ಭಾಗವಹಿಸಬೇಕು ಎಂದರು.

ಜಿಲ್ಲೆಯ ವೀಕ್ಷಕರು, ಕೆಪಿಸಿಸಿ ಕಾರ್ಯದರ್ಶಿ ಎಚ್.ಸಿ. ಬಸವರಾಜು, ಮಿಲಿಂದರ್ ಮಾತನಾಡಿ, ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ಚುನಾವಣಾ ಆಯೋಗವನ್ನು ದುರ್ಬಳಕೆ ಮಾಡಿಕೊಂಡು ಚುನಾವಣೆ ಮಾಡಿದೆ ಎಂಬುದು ಸ್ಪಷ್ಟವಾಗಿದೆ. ಈಗಾಗಲೇ ನಮ್ಮ ನಾಯಕ ರಾಹುಲ್ ಗಾಂಧಿ ಇದರ ವಿರುದ್ಧ ದೊಡ್ಡ ಮಟ್ಟದ ಹೋರಾಟ ಮಾಡಲು ಮುಂದಾಗಿದ್ದಾರೆ. ಕರ್ನಾಟಕದ ಲೋಕಸಭಾ ಕ್ಷೇತ್ರಗಳಲ್ಲಿ ಅಕ್ರಮವಾಗಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿಯೇ ಪ್ರತಿಭಟನೆ ಆರಂಭಿಸಬೇಕೆಂದು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ ಎಂದರು.

ಸಭೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಆರ್. ಮಹದೇವ್, ಚಿಕ್ಕಮಹದೇವ್, ಬ್ಲಾಕ್ ಅಧ್ಯಕ್ಷರಾದ ಅರಕಲವಾಡಿ ಗುರುಸ್ವಾಮಿ, ತೋಟೇಶ್, ಹೊಂಗನೂರು ಚಂದ್ರು, ಮಹಮದ್ ಅಸ್ಗರ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಎಸ್. ನಾಗರತ್ನ ಕೆಂಗಾಕಿ, ಮಾಜಿ ಕಾಡಾ ಅಧ್ಯಕ್ಷ ಎಸ್. ನಂಜಪ್ಪ, ಜಿ.ಪಂ. ಮಾಜಿ ಸದಸ್ಯ ಎಸ್. ಸೋಮನಾಯಕ, ಗ್ಯಾರಂಟಿ ಸಮಿತಿಯ ಅಧ್ಯಕ್ಷ ಸೋಮೇಶ್ವರ, ಶಿವಮೂರ್ತಿ, ಸುಹೇಲ್ ಆಲಿ ಖಾನ್, ಯುವ ಕಾಂಗ್ರೆಸ್ ಅಧ್ಯಕ್ಷ ಯೋಗೇಂದ್ರ, ಅಯ್ಯನಪುರ ಶಿವಕುಮಾರ್, ಸಿ.ಎ. ಮಹದೇವಶೆಟ್ಟಿ, ಜಿಲ್ಲಾ ವಕ್ತಾರ ಕೆರೆಹಳ್ಳಿ ನವೀನ್ ಮೊದಲಾದವರು ಇದ್ದರು.