ಮಡಿಕೇರಿ: ಕೇಂದ್ರ ಚುನಾವಣಾ ಆಯೋಗವು ರಾಜ್ಯದಲ್ಲಿ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯ ಕೈಗೊಳ್ಳಲು ಕಾರ್ಯಕ್ರಮ ವೇಳಾಪಟ್ಟಿ ಹೊರಡಿಸಿದ್ದು, ಈ ಕಾರ್ಯಕ್ರಮಕ್ಕೆ ಎಲ್ಲರೂ ಕೈಜೋಡಿಸುವಂತೆ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಕೋರಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತ ಚುನಾವಣಾ ಆಯೋಗ ವಿಶೇಷ ಸಮಗ್ರ ಪರಿಷ್ಕರಣೆಗೆ ಅರ್ಹತಾ ದಿನಾಂಕವಾಗಿ 2026 ಅಕ್ಟೋಬರ್ 1 ನ್ನು ಘೋಷಿಸಿದ್ದು, ಜೂ.20 ರಿಂದ 29ರ ವರೆಗೆ ಪೂರ್ವತಯಾರಿ, ತರಬೇತಿ ಮತ್ತು ಮುದ್ರಣಕ್ಕೆ ಅವಕಾಶ ಕಲ್ಪಿಸಿದೆ. ಜೂ.30 ರಿಂದ 29ರ ವರೆಗೆ ಮತಗಟ್ಟೆ ಅಧಿಕಾರಿಯಿಂದ ಮನೆಮನೆ ಭೇಟಿ ಹಾಗೂ ಮತಗಟ್ಟೆಗಳ ಪುನರ್ ವಿಂಗಡಣೆ ಕಾರ್ಯ, ಆಗಸ್ಟ್, 5 ರಂದು ಕರಡು ಮತದಾರರ ಪಟ್ಟಿ ಪ್ರಕಟಗೊಳ್ಳಲಿದೆ. ಆ.5 ರಿಂದ ಸೆ.4ರ ವರೆಗೆ ಹಕ್ಕು ಮತ್ತು ಆಕ್ಷೇಪಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಿದೆ. ಜೊತೆಗೆ ಆ.5 ರಿಂದ ಅಕ್ಟೋಬರ್ 3 ರವರೆಗೆ ಸೂಚನೆ ಹಂತ/ ಹಕ್ಕು ಮತ್ತು ಆಕ್ಷೇಪಣೆಗಳ ವಿಲೇವಾರಿ ನಡೆಯಲಿದೆ. ಅಕ್ಟೋಬರ್ 7 ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಗೊಳ್ಳಲಿದೆ ಎಂದು ಎಸ್.ಜೆ.ಸೋಮಶೇಖರ್ ಅವರು ಮಾಹಿತಿ ನೀಡಿದರು. ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯವನ್ನು ಕರ್ನಾಟಕ ರಾಜ್ಯದಲ್ಲಿ ಕೊನೆಯದಾಗಿ 2002 ನೇ ಸಾಲಿನಲ್ಲಿ ನಡೆಸಲಾಗಿದೆ. ಭಾರತದ ಸಂವಿಧಾನದ ಅನುಚ್ಛೇದ 324 ರ ಸೆಕ್ಷನ್ 21 ರನ್ವಯ, ಪ್ರಜಾ ಪ್ರತಿನಿಧಿ ಕಾಯ್ದೆ 1950 ರನ್ವಯ ಹಾಗೂ ಮತದಾರರ ನೋಂದಣಿ ನಿಯಮಗಳು, 1960 ಗಳಲ್ಲಿ ಲಭ್ಯವಿರುವ ನಿಬಂಧನೆಗಳ ಆಧಾರದ ಮೇಲೆ ವಿಶೇಷ ಸಮಗ್ರ ಪರಿಷ್ಕರಣೆ ಕೈಗೊಳ್ಳಲಾಗಿದೆ.ಈ ಬಾರಿಯ ವಿಶೇಷ ಸಮಗ್ರ ಪರಿಷ್ಕರಣೆಯ ಅರ್ಹತಾ ದಿನಾಂಕವಾಗಿ ಡಿಸೆಂಬರ್‌ 1 ಅನ್ನು ನಿಗದಿಪಡಿಸಲಾಗಿದೆ ಎಂದು ತಿಳಿಸಿದರು. ವಿಶೇಷ ಸಮಗ್ರ ಪರಿಷ್ಕರಣೆಯ ಕಾರ್ಯದ ಹಿನ್ನಲೆಯಲ್ಲಿ ಎಲ್ಲ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳು ಪ್ರತಿ ಮತಗಟ್ಟೆಗೆ ಒಬ್ಬರಂತೆ ಬೂತ್ ಮಟ್ಟದ ಏಜೆಂಟರನ್ನು ನೇಮಕ ಮಾಡುವುದು ಕಡ್ಡಾಯವಾಗಿದೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ವತಿಯಿಂದ ಬೂತ್ ಮಟ್ಟದ ಏಜೆಂಟರನ್ನು ನೇಮಕ ಮಾಡಿ ಪಟ್ಟಿ ಸಲ್ಲಿಸಲಾಗಿದೆ.

ಉಳಿದ ಮಾನ್ಯತೆ ಪಡೆದಿರುವ ಎಲ್ಲ ರಾಜಕೀಯ ಪಕ್ಷಗಳು ಮತಗಟ್ಟೆ ಹಂತದಲ್ಲಿ ಹೆಚ್ಚಿನ ಮಾಹಿತಿ ನೀಡಲು, ಮತಗಟ್ಟೆ ಅಧಿಕಾರಿಗಳ ಕಾರ್ಯವನ್ನು ಪರಿವೀಕ್ಷಿಸಲು ಹಾಗೂ ನ್ಯೂನತೆ ರಹಿತ ಮತದಾರರ ಪಟ್ಟಿಯನ್ನು ಸಿದ್ಧಪಡಿಸಲು ಅನುಕೂಲವಾಗುವಂತೆ ಪಕ್ಷದ ವತಿಯಿಂದ ಬೂತ್ ಮಟ್ಟದ ಏಜೆಂಟರನ್ನು ನೇಮಕ ಮಾಡಿ ಪಟ್ಟಿ ಸಲ್ಲಿಸಲು ಕೋರಲಾಗಿದೆ ಎಂದು ತಿಳಿಸಿದರು.

ಮ್ಯಾಪಿಂಗ್ ವರದಿ: ಪ್ರಸ್ತುತ ಜಿಲ್ಲೆಯಲ್ಲಿ ವಿಶೇಷ ಸಮಗ್ರ ಪರಿಷ್ಕರಣೆಯ ಪೂರ್ವಭಾವಿ ಕಾರ್ಯವಾಗಿ 2025 ರ ಮತದಾರರ ಪಟ್ಟಿಯಲ್ಲಿರುವ ಮತದಾರರನ್ನು 2002 ರ ಮತದಾರರ ಪಟ್ಟಿಯೊಂದಿಗೆ ಹೊಂದಾಣಿಕೆ ಮಾಡಿ, ಲಭ್ಯವಿರುವ ಮತದಾರರನ್ನು ಹಾಗೂ ಅವರ ಸಂತತಿ ವಿವರವನ್ನು ಜೋಡಣೆ ಮಾಡಲಾಗಿರುತ್ತದೆ. ಈ ಕಾರ್ಯದಲ್ಲಿ ಜಿಲ್ಲೆಯು ಶೇಕಡ 98.30 ಶೇ. ಪ್ರಗತಿ ಸಾಧಿಸಲಾಗಿದೆ. ಉಳಿದ ಮತದಾರರನ್ನು ಜೋಡಣೆ ಮಾಡುವ ಕಾರ್ಯವು ಪ್ರಗತಿಯಲ್ಲಿದೆ. ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಕ್ಕೆ ಮತದಾರರ ನೋಂದಣಾಧಿಕಾರಿಗಳ ಮತ್ತು ಸಹಾಯಕ ಮತದಾರರ ನೋಂದಣಾಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ಮಡಿಕೇರಿ ಕ್ಷೇತ್ರಕ್ಕೆ ಉಪ ವಿಭಾಗಧಿಕಾರಿ ನಿತಿನ್ ಚಕ್ಕಿ, ವಿರಾಜಪೇಟೆ ಕ್ಷೇತ್ರಕ್ಕೆ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಆರ್.ಮಂಜುನಾಥ್ ಅವರನ್ನು ನೇಮಕ ಮಾಡಲಾಗಿದೆ. ಸಹಾಯಕ ಮತದಾರರ ನೋಂದಣಾಧಿಕಾರಿಗಳಾಗಿ ತಾಲ್ಲೂಕು ತಹಸೀಲ್ದಾರ್‌ಗಳನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ವಿವರಿಸಿದ್ದಾರೆ.