ಜಿದ್ದಾಜಿದ್ದಿನ ಕಣವಾದ ಸಹಕಾರ ಸಂಘದ ಚುನಾವಣೆ

| Published : Dec 30 2024, 01:01 AM IST

ಸಾರಾಂಶ

ಕೋರ್ಟ್‌ ಆದೇಶದ ಪ್ರಕಾರ ಪ್ರತ್ಯೇಕ ಎರಡು ಬೂತ್‌ನಲ್ಲಿ ಮತದಾನ ಜರುಗಿತು.

ಕೋರ್ಟ್‌ ಮೋರೆ ಹೋದ ಮತದಾರರು । ಪ್ರತ್ಯೇಕ ಎರಡು ಬೂತ್‌ನಲ್ಲಿ ಮತದಾನ

ಮತ ಎಣಿಕೆ ಮಾಡದಿದ್ದಕ್ಕೆ ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆಕನ್ನಡಪ್ರಭ ವಾರ್ತೆ ಕುಕನೂರು

ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ ಭಾನುವಾರ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ಜಿದ್ದಾಜಿದ್ದಿನ ಕಣವಾಗಿ ಮಾರ್ಪಟಿತ್ತು. ಮತದಾರರ ಪಟ್ಟಿಯಲ್ಲಿ ನಮ್ಮಗಳ ಹೆಸರಿಲ್ಲವೆಂದು ಕೆಲವರು ಕೋರ್ಟ್‌ ಮೊರೆ ಹೋಗಿ ಮತದಾನದ ಹಕ್ಕು ಪಡೆದರು. ಕೋರ್ಟ್‌ ಆದೇಶದ ಪ್ರಕಾರ ಪ್ರತ್ಯೇಕ ಎರಡು ಬೂತ್‌ನಲ್ಲಿ ಮತದಾನ ಜರುಗಿತು.

ಸ್ಥಳೀಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ೧೨ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತವಾಗಿ ೧೨ ಜನ ಅಭ್ಯರ್ಥಿಗಳು ಮತ್ತು ಬಿಜೆಪಿ ಬೆಂಬಲಿತವಾಗಿ ೧೨ ಜನ ಅಭ್ಯರ್ಥಿಗಳು ಸ್ಪರ್ಧಿಸಿದ್ದರು.

ಸಂಘ ಮೊದಲು ಪ್ರಕಟಿಸಿದ ಅರ್ಹತಾ ಪಟ್ಟಿಯಲ್ಲಿ 338 ಜನರು ಮಾತ್ರ ಅರ್ಹ ಮತದಾರರಿದ್ದರು. ಉಳಿದವರು ಅನರ್ಹ ಮತದಾರರ ಪಟ್ಟಿಗೆ ಸೇರಿದ್ದರು. ಇದನ್ನು ಮನಗಂಡು ಕೆಲವರು ಕೋರ್ಟ್‌ ಮೊರೆ ಹೋಗಿ ಇನ್ನೂ 336 ಜನರನ್ನು ಮತದಾನ ಮಾಡುವಂತೆ ಕೋರ್ಟಿನಿಂದ ಆದೇಶ ತಂದರು. ಮೊದಲ ಮತದಾರರ ಪಟ್ಟಿಗೆ ಪ್ರತ್ಯೇಕ ಬೂತ್ ಹಾಗೂ ಕೋರ್ಟ್‌ ಆದೇಶದ ಮತದಾರರಿಗೆ ಪ್ರತ್ಯೇಕ ಬೂತ್ ನಲ್ಲಿ ಚುನಾವಣೆ ಜರುಗಿತು. ಸಂಘದ ಚುನಾವಣೆಯಲ್ಲಿ ಒಟ್ಟು ೩೩೮ ಅರ್ಹಮತಗಳಲ್ಲಿ ೩೨೦ ಮತಗಳು ಚಲಾವಣೆಗೊಂಡಿವೆ. ಸಾಲಗಾರರಲ್ಲದ ಕ್ಷೇತ್ರಕ್ಕೆ ೭೯ ಮತಗಳಲ್ಲಿ ೭೨ ಮತಗಳು ಚಲಾವಣೆಗೊಂಡಿವೆ. ಕೋರ್ಟ್‌ ಆದೇಶದಂತೆ ೩೩೬ ಮತದಾರರು ಸೇರ್ಪಡೆಯಾಗಿದ್ದು, ಅದರಲ್ಲಿ ೨೪೮ ಮತಗಳು ಚಲಾವಣೆಯಾಗಿವೆ. ಒಟ್ಟು ೬೭೪ ಮತಗಳಲ್ಲಿ ೫೬೮ ಮತಗಳು ಚಲಾವಣೆಯಾಗಿವೆ ಎಂದು ರಿಟರ್ನಿಂಗ್ ಅಧಿಕಾರಿ ಹನುಮಂತಪ್ಪ ನಾಮದಾರ ತಿಳಿದ್ದಾರೆ.

ಮತ ಎಣಿಕೆ ಮಾಡಿದ್ದಕ್ಕೆ ಬಿಜೆಪಿಯಿಂದ ಪ್ರತಿಭಟನೆ:

ಸಹಕಾರ ಸಂಘದ ಚುನಾವಣೆ ಮುಗಿದ ಬಳಿಕ ಅರ್ಹ ಮತದಾರರ ಪಟ್ಟಿ ಇರುವ ಬೂತ್‌ನ ಮತಗಳನ್ನು ಎಣಿಕೆ ಮಾಡಬೇಕು ಎಂದು ಬಿಜೆಪಿ ಕಾರ್ಯಕರ್ತರು ಒತ್ತಾಯಿಸಿದರು. ಚುನಾವಣಾ ಅಧಿಕಾರಿಗಳು ಒಂದು ಬೂತ್‌ನದು ಮತ ಎಣಿಕೆ ಮಾಡೋದಕ್ಕೆ ಬರೋದಿಲ್ಲ ಎರಡು ಬೂತ್‌ಗಳ ಮತ ಎಣಿಕೆ ಮಾಡಬೇಕು ಎಂದು ಹೇಳಿದಾಗ ಕೆರಳಿದ ಬಿಜೆಪಿ ಕಾರ್ಯಕರ್ತರು ಅಧಿಕಾರಿಗಳನ್ನು ದುರಪಯೋಗ ಮಾಡಿಕೊಂಡು ಚುನಾವಣೆ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿ ಮತಗಟ್ಟೆಯ ಮುಂದೆ ನೂರಾರು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಸಿಪಿಐ ಮೌನೇಶ್ವರ ಪಾಟೀಲ್ ಗಲಾಟೆಯನ್ನು ನಿಯಂತ್ರಿಸಲು ಮತಪಟ್ಟಿಗಳನ್ನು ಪೋಲಿಸ್ ಬಂದೋಬಸ್ತ್‌ನಲ್ಲಿ ತೆಗೆದುಕೊಂಡು ಹೋದರು. ಇದನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ಕುಕನೂರಿನ ಎಪಿಎಂಸಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

ಬಿಜೆಪಿ ಮಂಡಲದ ಅಧ್ಯಕ್ಷ ಮಾರುತಿ ಗಾವರಾಳ, ಮುಖಂಡ ಅನಿಲ್ ಆಚಾರ್, ಬಸವನಗೌಡ ತೊಂಡಿಹಾಳ, ಶಿವಕುಮಾರ ನಾಗಲಾಪೂರಮಠ, ಶಂಭು ಜೋಳದ್, ಕರಬಸಯ್ಯ ಬಿನ್ನಾಳ, ಸಿದ್ದಲಿಂಗಯ್ಯ ಬಂಡಿಮಠ, ನಾಗಪ್ಪ ಕಲ್ಮನಿ, ಜಗದೀಶ ತೊಂಡಿಹಾಳ ಸೇರಿದಂತೆ ಅನೇಕರು ಪ್ರತಿಭಟನೆ ನಡೆಸಿದರು.