ಸಾರಾಂಶ
-ಸದಸ್ಯರೇ ಇರದ ಸ್ಥಾನಕ್ಕೆ ಮೀಸಲಾತಿ ನಿಗದಿ। ಬಿಸಿಎಂ(ಮಹಿಳೆ)ಗೆ ಅವಕಾಶದ ನಿರೀಕ್ಷೆ । ಕಾಂಗ್ರೆಸ್‌ಗೆ ಸರಳ ಬಹುಮತ । ಜೆಡಿಎಸ್‌ಗೆ ಪ್ರಯತ್ನದ ಮಾರ್ಗ
------ಕನ್ನಡಪ್ರಭವಾರ್ತೆ ದೇವದುರ್ಗ
ಸ್ಥಳೀಯ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಸ್ಥಾನಕ್ಕಾಗಿ ಈಗಾಗಲೇ ಮೀಸಲಾತಿ ನಿಗದಿಗೊಂಡಿದ್ದು, ಬಿಸಿಎ(ಮಹಿಳೆ)ಮೀಸಲಾತಿಯ ಸದಸ್ಯರೇ ಇರದೇ ಇರುವುದರಿಂದ ತ್ರಿಶಂಕು ಸ್ಥಿತಿ ನಿರ್ಮಾಣಗೊಂಡಿದ್ದು, ಚುನಾವಣಾ ಆಯೋಗದ ನಿರ್ಧಾರ ತೀವ್ರ ಕುತೂಹಲ ಮೂಡಿಸಿದೆ.ಪುರಸಭೆಯಲ್ಲಿ 23 ಸದಸ್ಯರಿದ್ದು, ಕಾಂಗ್ರೆಸ್ 12, ಬಿಜೆಪಿ 7, ಜೆಡಿಎಸ್ ಪಕ್ಷದ 3 ಹಾಗೂ ಓರ್ವ ಪಕ್ಷೇತರ ಸದಸ್ಯರಿದ್ದಾರೆ. ಪಕ್ಷೇತರ ಸದಸ್ಯ ಮೇಲ್ನೋಟಕ್ಕೆ ಕಾಂಗ್ರೆಸ್ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದು, ಇವರ ನಡೆ ಕುತೂಹಲ ಮೂಡಿಸಿದೆ.
ಪುರಸಭೆಯ 23 ಸದಸ್ಯರಲ್ಲಿ ಅಧ್ಯಕ್ಷ ಸ್ಥಾನಕ್ಕೆ ನಿಗದಿಯಾಗಿರುವ ಬಿಸಿಬಿ(ಬಿಸಿಎಂ ಮಹಿಳೆ) ಮೀಸಲಾತಿಯ ಸದಸ್ಯರೇ ಇರುವದಿಲ್ಲ. ಹೀಗಾಗಿ, ಸದಸ್ಯರಿಲ್ಲದ ಅಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಘೋಷಣೆಯಾಗಿರುವುದು ಗೊಂದಲ ಮೂಡಿಸಿದೆ.ವಸ್ತುಸ್ಥಿತಿಯ ವಿಷಯವನ್ನು ಈಗಾಗಲೇ ಮುಖ್ಯಧಿಕಾರಿ ಹಾಗೂ ತಹಸೀಲ್ದಾರ ಮುಖಾಂತರ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಿದ್ದು, ನಿರ್ಧಾರ ತೀವ್ರ ಕುತೂಹಲ ಮೂಡಿಸಿದೆ.
ಘೋಷಣೆಯಾಗಿರುವ ಸ್ಥಾನದ ಮೀಸಲಾತಿ ಸದಸ್ಯರು ಇರದ ಸಂದರ್ಭದಲ್ಲಿ ಅದೇ ಮೀಸಲಾತಿಯ ಉಪಪಂಗಡಕ್ಕೆ ಅವಕಾಶ ದೊರಕುವ ನಿರೀಕ್ಷೆ ಹೊಂದಲಾಗಿದೆ. ಪರಿಣಾಮ ಬಿಸಿಎ(ಮಹಿಳೆ)ಸ್ಥಾನಕ್ಕೆ ಮೀಸಲಾತಿ ದೊರಕುವ ಸಾಧ್ಯತೆಗಳು ಹೆಚ್ಚಾಗಿವೆ ಎನ್ನಲಾಗುತ್ತಿದೆ.ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು, ಉಭಯ ಪಕ್ಷಗಳಲ್ಲಿ ಅನೇಕರು ಆಕಾಂಕ್ಷಿಗಳಾಗಿದ್ದಾರೆ ಎನ್ನಲಾಗುತ್ತಿದ್ದು, ಹೊಂದಾಣಿಕೆ ಮೇಲೆ ಸಮಸ್ಯೆ ಬಗೆಹರಿಸುವ ಲಕ್ಷಣಗಳು ಕಂಡು ಬರುತ್ತಿವೆ.
ಬಿಸಿಎ(ಮಹಿಳೆ) ಮೀಸಲಾತಿಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಮಧ್ಯೆ ತೀವ್ರ ಸ್ಪರ್ಧೆಯಾಗುವ ಸಂದರ್ಭಗಳು ಹೆಚ್ಚಾಗಿವೆ.ಕಾಂಗ್ರೆಸ್ ಪ್ರಬಲ ಆಕಾಂಕ್ಷಿ ಮಲ್ಲಮ್ಮ ಸಾಂತಪ್ಪ ಹೆಂಬೆರಾಳರಿಗೆ ಪಕ್ಷದ 12 ಸದಸ್ಯರು, ಓರ್ವ ಪಕ್ಷೇತರ ಸದಸ್ಯ ಜೊತಗೆ ಲೋಕಸಭಾ ಸದಸ್ಯರ ಮತಗಳು ದೊರಕುವ ಅವಕಾಶವಿದೆ. ಬಹುಮತಕ್ಕೆ 13 ಸದಸ್ಯರ ಬೆಂಬಲದ ಅಗತ್ಯವಿದೆ. ಹೀಗಾಗಿ ಸರಳ ಬಹುಮತದಿಂದ ಅಧ್ಯಕ್ಷರಾಗಿ ಆಯ್ಕೆಯಾಗುವ ಅವಕಾಶ ಕಾಂಗ್ರೆಸ್ ಪಕ್ಷಕ್ಕಿದೆ.
ಆದರೆ, ಹೊಸದಾಗಿ ಮೈತ್ರಿ ಧರ್ಮ ಪಾಲಿಸುತ್ತಿರುವ ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳ 10 ಸದಸ್ಯರಿದ್ದು, ಶಾಸಕರ ಮತ ಕೂಡ ಪರಿಗಣನೆಗೆ ತೆಗೆದುಕೊಂಡಿದ್ದು, ಇನ್ನು ಇಬ್ಬರು ಸದಸ್ಯರ ಬೆಂಬಲ ಬೇಕಾಗುತ್ತದೆ. ಪಕ್ಷೇತರ ಸದಸ್ಯರ ಜೊತೆಗೆ ಕಾಂಗ್ರೆಸ್ ಪಕ್ಷದಿಂದ ಓರ್ವ ಸದಸ್ಯರ ಬೆಂಬಲದ ಅವಶ್ಯಕತೆ ಉಂಟಾಗುತ್ತದೆ. ಪುರಸಭೆಗೆ 3 ಬಾರಿ ಸತತ ಸದಸ್ಯರಾಗಿ ಆಯ್ಕೆಯಾಗಿರುವ ಪ್ರಬಲ ಆಕಾಂಕ್ಷಿ ತಬುಸ್ಸುಮ್ ಶಾಲಂ ಉದ್ದಾರ ಪರವಾಗಿ ಶಾಸಕಿ ಕರೆಮ್ಮ ಜಿ.ನಾಯಕ ಜೆಡಿಎಸ್ ಪಕ್ಷಕ್ಕೆ ಪುರಸಭೆಯ ಅಧಿಕಾರದ ಚುಕ್ಕಾಣಿ ಹಿಡಿಯಲು ತೆರೆಮರೆಯ ಪ್ರಯತ್ನಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.ರಾಜ್ಯಮಟ್ಟದಲ್ಲಿ ಬಿಜೆಪಿ-ಜೆಡಿಎಸ್ ದೋಸ್ತಿ ಪರಿಣಾಮ ಸ್ಥಳೀಯ ವಿಧಾನ ಸಭಾ ಕ್ಷೇತ್ರದಲ್ಲಿ ಅಷ್ಟೇನು ಬೀರಿಲ್ಲ. ಉಭಯ ಪಕ್ಷಗಳ ಮುಖಂಡರಲ್ಲಿ ದೋಸ್ತಿ ಲಕ್ಷಣಗಳೇ ಇಲ್ಲ. ಹೀಗಾಗಿ, ಜೆಡಿಎಸ್ ಬೆಂಬಲಿಸುವದೋ, ಬೇಡವೋ ಎಂಬ ಅನುಮಾನ ಬಿಜೆಪಿ ಸದಸ್ಯರಲ್ಲಿ ಕಂಡು ಬರುತ್ತಿದೆ.
ಈ ಹಿಂದೆ ನಿಗದಿಯಾಗಿದ್ದ ಮೀಸಲಾತಿ ಗೊಂದಲ, ನ್ಯಾಯಾಲಯ ಮೆಟ್ಟಿಲೇರಿದ್ದರಿಂದ ಸದಸ್ಯರಿಗೆ ಅಧಿಕಾರವಿಲ್ಲದೇ, ಸಹಾಯಕ ಆಯುಕ್ತರನ್ನು ಆಡಳಿತಾಧಿಕಾರಿಯಾಗಿ ನಿಯೋಜಿಸಲಾಗಿತ್ತು. ಹೀಗಾಗಿ ಕಳೆದ 15 ತಿಂಗಳಿನಿಂದ ಸದಸ್ಯರಲ್ಲಿ ನಿರುತ್ಸಾಹ ಮೂಡಿಸಿತ್ತು.ಇದೀಗ ಘೋಷಣೆಯಾಗಿರುವ ಮೀಸಲಾತಿ ಕೂಡ ಗೊಂದಲಮಯವಾಗಿರುವದರಿಂದ ಅನೇಕರು ಸದಸ್ಯರು ನಿರಾಸಕ್ತಿ ಮೂಡಿಸಿದೆ. ಆದರೂ ಚುನಾವಣಾ ಆಯೋಗ ಸೂಚಿಸುವ ಮೀಸಲಾತಿ ಮೇಲೆ ಪ್ರಕ್ರಿಯೆಗಳು ಚುರುಕುಗೊಳ್ಳಲಿವೆ.
------------------------10ಕೆಪಿಡಿವಿಡಿ01: ದೇವದುರ್ಗ ಪುರಸಭೆ ಕಚೇರಿ