ಸಾರಾಂಶ
ಬ್ಯಾಡಗಿ ತಾಲೂಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಶಿಕ್ಷಕ ಹಾಗೂ ಸಾಹಿತಿ ಜೀವರಾಜ ಛತ್ರದ ಅವರ ಹೆಸರನ್ನು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಲಿಂಗಯ್ಯ ಹಿರೇಮಠ ಘೋಷಿಸಿದರು.
ಬ್ಯಾಡಗಿ: ತಾಲೂಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಶಿಕ್ಷಕ ಹಾಗೂ ಸಾಹಿತಿ ಜೀವರಾಜ ಛತ್ರದ ಅವರ ಹೆಸರನ್ನು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಲಿಂಗಯ್ಯ ಹಿರೇಮಠ ಘೋಷಿಸಿದರು.
ಪಟ್ಟಣದ ಸಿದ್ದೇಶ್ವರ ಕಲ್ಯಾಣ ಮಂಟಪದಲ್ಲಿ ಜ. 24ರಂದು ಜರುಗಲಿರುವ 7ನೇ ತಾಲೂಕು ಸಾಹಿತ್ಯ ಸಮ್ಮೇಳನದ ಹಿನ್ನೆಲೆಯಲ್ಲಿ ಸಮ್ಮೇಳನಾಧ್ಯಕ್ಷರ ಆಯ್ಕೆ ಕುರಿತು ಸಾಹಿತ್ಯ ಭವನದಲ್ಲಿ ಒಂದು ಸಾಲಿನ ನಿರ್ಣಯವನ್ನು ಕೈಗೊಳ್ಳಲಾಯಿತು.ಇದಕ್ಕೂ ಮುನ್ನ ಮೂರ್ನಾಲ್ಕು ಹೆಸರುಗಳು ಮುನ್ನಲೆಗೆ ಬಂದವಾದರೂ ಸಮ್ಮೇಳನ ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ಎಲ್ಲ ಆಯಾಮಗಳಿಂದ ಮಾಹಿತಿ ಸಂಗ್ರಹಿಸಿ ಅವರ ವೈಯಕ್ತಿಕ ಸಾಧನೆ ಹಾಗೂ ಸಾಮಾಜಿಕ ನ್ಯಾಯದಡಿ ಸಮ್ಮೇಳನಾಧ್ಯಕ್ಷರ ಹೆಸರು ಅಂತಿಗೊಳಿಸುವ ಪರಿಪಾಠವಿದೆ. ಹೀಗಾಗಿ ಅತ್ಯುತ್ತಮ ಲೇಖಕರಲ್ಲಿ ಒಬ್ಬರಾಗಿರುವ ಜೀವರಾಜ ಹತ್ತು ಹಲವು ಪುಸ್ತಕ ಹಾಗೂ ಕವನ ಸಂಕಲನಗಳನ್ನು ಸ್ವತಃ ರಚಿಸಿ ಬಿಡುಗಡೆಗೊಳಿಸಿದ್ದಾರೆ. ಯುವ ಹಾಗೂ ಉತ್ಸಾಹಿ ಸಾಹಿತಿ ಜೀವರಾಜ ಛತ್ರದ ಅವರನ್ನು ಆಯ್ಕೆ ಮಾಡುವುದರಿಂದ ಬರುವ ದಿನಗಳಲ್ಲಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತಾಗಲಿದೆ ಎಂಬ ನಿರ್ಣಯಕ್ಕೆ ಬರಲಾಯಿತು. ಇದಕ್ಕೆ ಸರ್ವ ಸದಸ್ಯರು ಸರ್ವಾನುಮತದಿಂದ ಒಪ್ಪಿಗೆ ನೀಡಿದರು.
ಎಲ್ಲರೂ ಸೇರಿ ಕನ್ನಡದ ತೇರನ್ನು ಎಳೆಯೋಣ:ಬಳಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ಲಿಂಗಯ್ಯ ಹಿರೇಮಠ, ಸರ್ಕಾರದ ಧನ ಸಹಾಯವಿಲ್ಲದೇ ತಾಲೂಕು ಸಾಹಿತ್ಯ ಸಮ್ಮೇಳನ ನಡೆಸುವುದು ಸುಲಭದ ಮಾತಲ್ಲ, ಆದರೆ ಮೆಣಸಿನಕಾಯಿ ಮಾರುಕಟ್ಟೆ ವರ್ತಕರ ಸಹಕಾರ ಸೇರಿದಂತೆ ತಾಲೂಕಿನಲ್ಲಿರುವ ಎಲ್ಲ ಕನ್ನಡದ ಮನಸ್ಸುಗಳು ಒಂದಾಗಿ ಬಹಳಷ್ಟು ಅದ್ಧೂರಿಯಾಗಿ ಸಮ್ಮೇಳನದ ಯಶಸ್ಸಿಗೆ ಸಹಕರಿಸುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ತಾಲೂಕು ಕಸಾಪ ಅಧ್ಯಕ್ಷ ಬಿ.ಎಂ. ಜಗಾಪುರ, ನಿಕಟಪೂರ್ವ ಅಧ್ಯಕ್ಷ ಮಾಲತೇಶ ಅರಳೀಮಟ್ಟಿ, ರಾಜಶೇಖರ ಹೊಸಳ್ಳಿ, ಆನಂದ ಮುದುಕಮ್ಮನವರ, ಜಮೀರ ರಿತ್ತಿ, ವೈ.ಬಿ. ಹೊಸಳ್ಳಿ, ಮಹದೇವ ಕರಿಯಣ್ಣನವರ, ಆರ್. .ಆಯ್. ತಳಗೇರಿ, ಎಂ.ಎ. ಪಠಾಣ, ಮಹೇಶ ಉಜನಿ, ಮಲ್ಲಪ್ಪ ಕರೇಣ್ಣನವರ, ಶಕುಂತಲಾ ದಾಳೇರ, ಶ್ವೇತಾ ಲಿಂಬಿಕಾಯಿ, ಬಿ.ಬಿ. ಹಂಸಭಾವಿ ಹಾಗೂ ಇನ್ನಿತರರು ಸಭೆಯಲ್ಲಿ ಉಪಸ್ಥಿತರಿದ್ದರು.