ಚುನಾವಣೆ ಅಧಿಕಾರಿಗಳೇ ಆಯೋಗದ ಕಣ್ಣು, ಕಿವಿಗಳು

| Published : Mar 28 2024, 12:45 AM IST

ಸಾರಾಂಶ

ಲೋಕಸಭಾ ಚುನಾವಣೆ ನ್ಯಾಯ ಸಮ್ಮತ, ಪಾರದರ್ಶಕ ಹಾಗೂ ಮುಕ್ತವಾಗಿ ನಡೆಸಲು ಚುನಾವಣಾ ಅಧಿಕಾರಿಗಳು ಆಯೋಗದ ಕಣ್ಣು, ಕಿವಿಯಾಗಿದ್ದು ಪ್ರಾಮಾಣಿಕ ಕೆಲಸ ಮಾಡಬೇಕು. ಎಲ್ಲ ಚುನಾವಣಾ ತಂಡಗಳು ನಿಯಮ ಮತ್ತು ಸಂದರ್ಭೋಚಿತ ವಿವೇಚನೆಯಿಂದ ಕೆಲಸ ಮಾಡಬೇಕೆಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ದಾವಣಗೆರೆಯಲ್ಲಿ ಹೇಳಿದ್ದಾರೆ.

- ಮಾದರಿ ನೀತಿ ಸಂಹಿತೆ ಅನುಷ್ಠಾನ ತರಬೇತಿ ಕಾರ್ಯಾಗಾರದಲ್ಲಿ ಡಿಸಿ ವೆಂಕಟೇಶ್

- - -

ಕನ್ನಡಪ್ರಭ ವಾರ್ತೆ, ದಾವಣಗೆರೆ

ಲೋಕಸಭಾ ಚುನಾವಣೆ ನ್ಯಾಯ ಸಮ್ಮತ, ಪಾರದರ್ಶಕ ಹಾಗೂ ಮುಕ್ತವಾಗಿ ನಡೆಸಲು ಚುನಾವಣಾ ಅಧಿಕಾರಿಗಳು ಆಯೋಗದ ಕಣ್ಣು, ಕಿವಿಯಾಗಿದ್ದು ಪ್ರಾಮಾಣಿಕ ಕೆಲಸ ಮಾಡಬೇಕು. ಎಲ್ಲ ಚುನಾವಣಾ ತಂಡಗಳು ನಿಯಮ ಮತ್ತು ಸಂದರ್ಭೋಚಿತ ವಿವೇಚನೆಯಿಂದ ಕೆಲಸ ಮಾಡಬೇಕೆಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಹೇಳಿದರು.

ನಗರದ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಬುಧವಾರ ಸಹಾಯಕ ಚುನಾವಣಾಧಿಕಾರಿಗಳು, ಫ್ಲೈಯಿಂಗ್‌ ಸ್ಕ್ವಾಡ್‌ , ಸ್ಟ್ಯಾಟಿಕ್‌ ಸರ್ವಲೆನ್ಸ್ ಟೀಮ್ ಮುಖ್ಯಸ್ಥರಿಗೆ ಏರ್ಪಡಿಸಲಾದ ಚುನಾವಣಾ ಕರ್ತವ್ಯಗಳು ಮತ್ತು ಕರ್ತವ್ಯದಲ್ಲಿದ್ದಾಗ ಅನುಸರಿಸಬೇಕಾದ ಕ್ರಮ, ನಿಯಮಗಳು, ಮಾದರಿ ನೀತಿ ಸಂಹಿತೆ ಅನುಷ್ಠಾನ ಕುರಿತ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಫ್ಲೈಯಿಂಗ್‌ ಸ್ಕ್ವಾಡ್‌ಗೆ ಕಾರ್ಯನಿರ್ವಾಹಕ ದಂಡಾಧಿಕಾರಿಯ ಅಧಿಕಾರ ನೀಡಲಾಗಿದೆ. ಯಾವುದೇ ಸಂದರ್ಭ ಚುನಾವಣಾ ಅಕ್ರಮಗಳ ಬಗ್ಗೆ ತನಿಖೆ ಮಾಡುವ ಅಧಿಕಾರ ನೀಡಲಾಗಿದೆ. ಚುನಾವಣಾ ಉದ್ದೇಶಕ್ಕೆ ಹಣ, ಮದ್ಯ, ಯಾವುದೇ ಉಚಿತ ಕೊಡುಗೆ ವಸ್ತುಗಳು ಕಂಡುಬಂದಲ್ಲಿ ವಶಕ್ಕೆ ಪಡೆದು ತನಿಖೆ ನಡೆಸಬೇಕು. ಜನರಿಗೆ ಬೆದರಿಕೆ ಹಾಕುವವರ ವಿರುದ್ಧವೂ ತನಿಖೆ ಅಧಿಕಾರ ಇರುತ್ತದೆ. ಇವರು ಪ್ರತಿನಿತ್ಯದ ವರದಿ ಸಹಾಯಕ ಚುನಾವಣಾಧಿಕಾರಿಗಳಿಗೆ ನೀಡಬೇಕು ಎಂದರು.

ಚೆಕ್‌ಪೋಸ್ಟ್‌ನಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು ಆಯಾ ಮಾರ್ಗದಲ್ಲಿ ಸಾಗುವ ವಾಹನಗಳನ್ನು ತಪಾಸಣೆ ಮಾಡಿ, ಕಳಿಸಬೇಕು. ಯಾವುದೇ ವಾಹನದಲ್ಲಿ ಒಬ್ಬರು ₹50 ಸಾವಿರಕ್ಕಿಂತ ಹೆಚ್ಚು ನಗದು ಕೊಂಡೊಯ್ಯುವಂತಿಲ್ಲ. ಹೆದ್ದಾರಿಯಲ್ಲಿ ಚೆಕ್‌ ಪೋಸ್ಟ್‌ಗಳಲ್ಲಿ ಬಸ್, ಲಾರಿ, ಬೈಕ್, ಕಾರ್‌ಗಳ ಪರಿಶೀಲನೆ ನಡೆಸಬೇಕು. ನೈಜ ಜಿಎಸ್‌ಟಿ ಬಿಲ್ ಪರಿಶೀಲನೆ ಮಾಡಿ, ಮಾಲು ವ್ಯಕ್ತಿಗೆ ಹೋಗುತ್ತಿದೆಯೇ, ಹೋಲ್‌ಸೇಲ್ ವ್ಯಾಪಾರಿಗೆ ಹೋಗುತ್ತಿದೆಯೇ ಎಂದು ಖಚಿತಪಡಿಸಿಕೊಂಡು, ಸಂಪೂರ್ಣ ವಿವರ ಪಡೆಯಬೇಕು. ಅಕ್ರಮವಾಗಿದ್ದಲ್ಲಿ ವಶಕ್ಕೆ ಪಡೆದು, ಪ್ರಕರಣ ದಾಖಲಿಸುವಾಗ ಇಎಸ್‌ಎಂಎಸ್‌ನಲ್ಲಿ ದಾಖಲು ಮಾಡಬೇಕೆಂದು ತಿಳಿಸಿದರು.

ಜಿಪಂ ಸಿಇಒ- ಎಂಸಿಸಿ ನೋಡಲ್ ಅಧಿಕಾರಿ ಸುರೇಶ್ ಬಿ. ಇಟ್ನಾಳ್ ಮಾತನಾಡಿ, ಮತದಾರರಿಗೆ ಆಮಿಷವೊಡ್ಡಲು ಚೆಕ್‌ ಪೋಸ್ಟ್ ಬದಲಾಗಿ, ಸ್ವಸಹಾಯ ಗುಂಪುಗಳಿಗೆ ನೇರವಾಗಿ ಹಣ ನೀಡುವುದು, ಲೇವಾದೇವಿ ವ್ಯವಹಾರ, ಮತದಾರರಿಗೆ ಯಾವುದೋ ಖಾತೆಯಿಂದ ನೆಫ್ಟ್, ಆರ್.ಟಿ.ಜಿ.ಎಸ್.ನಲ್ಲಿ ಹಣ, ಮತಗಟ್ಟೆ ಬಳಿಯೇ ಹಣ ಹಂಚಿಕೆ, ರ‍್ಯಾಲಿಗೆ ಬಂದವರಿಗೆ ಹಣ ನೀಡಿಕೆ, ಸರಕು ಸಾಗಣೆ ವಾಹನಗಳಲ್ಲಿ ಹಣ ಸಾಗಿಸುವಂಥ ವಿಚಾರಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. ವಾಹನ ಅನುಮತಿ, ಡಮ್ಮಿ ಅಭ್ಯರ್ಥಿಗಳ ಕುರಿತೂ ಸೂಕ್ತ ಪರಿಶೀಲನೆಗೆ ಆದ್ಯತೆ ನೀಡಲು ಹೇಳಿದರು.

ಚುನಾವಣಾ ವೆಚ್ಚ ಮೇಲ್ಚಿಚಾರಣಾ ಸಮಿತಿ ನೋಡಲ್ ಅಧಿಕಾರಿ ಗಿರೀಶ್ ಅವರು ಪ್ರಜಾಪ್ರತಿನಿಧಿ ಕಾಯಿದೆ ನಿಯಮಗಳು ಮತ್ತು ವೆಚ್ಚಕ್ಕೆ ಸಂಬಂಧಿಸಿದಂತೆ ಪ್ರತಿನಿತ್ಯ ಕಳುಹಿಸಬೇಕಾದ ವರದಿಗಳ ಬಗ್ಗೆ ತಿಳಿಸಿದರು. ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯುಕ್ತ ಮಂಜುನಾಥ್ ಸರಕು ಸಾಗಣೆ, ಜಿ.ಎಸ್.ಟಿ. ನಿಯಮಗಳ ಬಗ್ಗೆ ಮಾಹಿತಿ ನೀಡಿದರು. ಅಬಕಾರಿ ಉಪ ಆಯುಕ್ತರಾದ ಟಿ.ವಿ.ಶೈಲಜ ಮದ್ಯ ಸಾಗಣೆ, ಅಂಗಡಿಗಳ ಕಾರ್ಯನಿರ್ವಹಣೆ ಸಮಯ- ನಿಯಮಗಳ ಬಗ್ಗೆ ತಿಳಿಸಿದರು.

- - -

ಕೋಟ್‌

ಸಾಮಾಜಿಕ ಜಾಲತಾಣದಲ್ಲಿ ಜಾತಿ, ಧರ್ಮದ ಆಧಾರದಲ್ಲಿ ಪೋಸ್ಟ್ ಮಾಡುವವರ ಮೇಲೆ ನಿಗಾ ವಹಿಸಬೇಕು. ಎಫ್‌ಎಸ್‌ಟಿ, ಎಸ್‌ಎಸ್‌ಟಿ ತಂಡಗಳಿಗೆ ಬೇಕಾದ ಎಲ್ಲ ಬಂದೋಬಸ್ತ್ ಮತ್ತು ಇಲಾಖೆ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ

- ಉಮಾ ಪ್ರಶಾಂತ್‌, ಜಿಲ್ಲಾ ರಕ್ಷಣಾಧಿಕಾರಿ

- - - -27ಕೆಡಿವಿಜಿ41ಃ:

ದಾವಣಗೆರೆಯಲ್ಲಿ ಚುನಾವಣಾ ಕರ್ತವ್ಯಗಳ ತರಬೇತಿ ಕಾರ್ಯಾಗಾರದಲ್ಲಿ ಚುನಾವಣಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಮಾತನಾಡಿದರು.