ಚುನಾವಣೆಯು ಪ್ರಜಾಪ್ರಭುತ್ವದ ಅತಿದೊಡ್ಡ ಹಬ್ಬ: ಡಿಸಿ ಗಂಗೂಬಾಯಿ

| Published : Mar 29 2024, 12:58 AM IST

ಸಾರಾಂಶ

ಜಿಲ್ಲೆಯಲ್ಲಿ ಮೇ 7ರಂದು ಮತದಾನ ನಡೆಯಲಿದೆ. ಆ ದಿನ ಎಲ್ಲರೂ ತಪ್ಪದೇ ಮತದಾನ ಮಾಡಬೇಕು.

ಹಳಿಯಾಳ: ಚುನಾವಣೆಯು ಪ್ರಜಾಪ್ರಭುತ್ವದ ಅತಿದೊಡ್ಡ ಹಬ್ಬವಾಗಿದ್ದು, ಈ ದೊಡ್ಡ ಹಬ್ಬದಲ್ಲಿ ನಾವೆಲ್ಲರೂ ಪಾಲ್ಗೊಂಡು ದಾಖಲೆ ಸಂಖ್ಯೆಯಲ್ಲಿ ಮತದಾನ ಮಾಡುವ ಮೂಲಕ ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವದ ಅಡಿಪಾಯವನ್ನು ಬಲಪಡಿಸಲು ಮುಂದಾಗೋಣ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಕರೆ ನೀಡಿದರು.

ಬುಧವಾರ ಸಂಜೆ ಪಟ್ಟಣದ ತಾಲೂಕು ಆಡಳಿತ ಸೌಧದ ಆವರಣದಲ್ಲಿ ತಾಲೂಕು ಪಂಚಾಯಿತಿ ಹಾಗೂ ತಾಲೂಕು ಆಡಳಿತದ ಆಶ್ರಯದಲ್ಲಿ ಆಯೋಜಿಸಿದ್ದ ಮತದಾನ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿ,

ಮತದಾರರು ಮತದಾನದಿಂದ ವಂಚಿತರಾಗಬಾರದು ಎಂಬ ಹಿನ್ನೆಲೆ ಈ ಸ್ವೀಪ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ.

ಜಿಲ್ಲೆಯಲ್ಲಿ ಮೇ 7ರಂದು ಮತದಾನ ನಡೆಯಲಿದೆ. ಆ ದಿನ ಎಲ್ಲರೂ ತಪ್ಪದೇ ಮತದಾನ ಮಾಡಬೇಕು. ಮತಗಟ್ಟೆಯಲ್ಲಿ ಮತದಾರರಿಗೆ ಎಲ್ಲ ಸೌಲಭ್ಯಗಳನ್ನು ಮಾಡಿದ್ದೇವೆ. ಇದರ ಜತೆಗೆ 80 ವಯಸ್ಸಿಗಿಂತ ಹೆಚ್ಚಾದ ಹಿರಿಯ ನಾಗರಿಕರಿಗೆ ಅವರು ಮನೆಯಲ್ಲಿಯೇ ಮತದಾನ ಮಾಡುವ ವ್ಯವಸ್ಥೆಯನ್ನು ಈ ಚುನಾವಣೆಯಲ್ಲಿ ಕಲ್ಪಿಸಲಾಗಿದೆ ಎಂದರು.

ನೂರು ವರ್ಷವಾಗಿದೆ, ಆದರೂ ನಾವು ಮತಗಟ್ಟೆಗೆ ಬಂದು ಮತ ಚಲಾಯಿಸುತ್ತೇವೆ ಎಂದು ಹೇಳುವರಿಗೆ ನಾವು ತುಂಬು ಹೃದಯದ ಸ್ವಾಗತ ಕೋರಲಿದ್ದೇವೆ ಎಂದರು.

ಚುನಾವಣೆಯು ಪ್ರಜಾಪ್ರಭುತ್ವದ ದೊಡ್ಡ ಹಬ್ಬವಾಗಿದ್ದು, ಮತದಾನದ ಮೂಲಕ ನಮ್ಮ ನಾಯಕನನ್ನು ಆಯ್ಕೆ ಮಾಡುವ ಹಕ್ಕನ್ನು ಸಂವಿಧಾನವು ನಮಗೆ ಕಲ್ಪಿಸಿದೆ. ಅದಕ್ಕಾಗಿ ಪ್ರತಿಯೊಬ್ಬರೂ ತಪ್ಪದೇ ಮತದಾನದ ಹಕ್ಕನ್ನು ಚಲಾಯಿಸಬೇಕು ಎಂದರು.

ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕೆನರಾ ಕ್ಷೇತ್ರವು ಶೇ. 75ರಷ್ಟು ಮತದಾನ ಪ್ರಮಾಣವನ್ನು ಕಂಡಿತು. ಇದು ರಾಜ್ಯದಲ್ಲಿಯೇ ಅತ್ಯಂತ ಗರಿಷ್ಠ ಮತದಾನ ಪ್ರಮಾಣವಾಗಿತ್ತು. ಕಳೆದ ಬಾರಿಯ ಮತದಾನದ ಪ್ರಮಾಣದ ದಾಖಲೆಯನ್ನು ಮೀರಿಸುವ ಗುರಿಯೊಂದಿಗೆ ನಾವೆಲ್ಲರೂ ಮತದಾನ ಜಾಗೃತಿಯನ್ನು ಈ ಬಾರಿ ಹಮ್ಮಿಕೊಳ್ಳಬೇಕಾಗಿದೆ ಎಂದರು.

ಮಹಿಳೆಯರು, ಯುವಕರು, ಹಿರಿಯ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುವಂತೆ ಪ್ರೇರೇಪಿಸಲು ಯೋಜನೆ, ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾಗಿದೆ. ಕಳೆದ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಯಲ್ಲಿ ಕಡಿಮೆ ಮತದಾನವಾಗಿದ್ದ ಬೂತ್‌ಗಳನ್ನು ಗುರುತಿಸಿ ಆ ಭಾಗದ ಮತದಾರರನ್ನು ಜಾಗೃತಗೊಳಿಸಲು ಆಸಕ್ತಿ ವಹಿಸಬೇಕಾಗಿದೆ ಎಂದರು.

ಹಳಿಯಾಳ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಸ್ಟೇಲ್ಲಾ ವರ್ಗಿಸ್, ತಾಪಂ ಇಒ ಪರಶುರಾಮ ಘಸ್ತೆ, ತಹಸೀಲ್ದಾರ್‌ ಆರ್.ಎಚ್. ಭಾಗವಾನ, ಗ್ರೇಡ್-2 ತಹಸೀಲ್ದಾರ್‌ ಜಿ.ಕೆ. ರತ್ನಾಕರ, ಸಿಡಿಪಿಒ ಡಾ. ವಿಜಯಲಕ್ಷ್ಮೀ, ಮುಖ್ಯಾಧಿಕಾರಿ ಅಶೋಕ ಸಾಳೆಣ್ಣನವರ, ಶಿರಸ್ತೇದಾರ ಅನಂತ ಚಿಪ್ಪಲಗಟ್ಟಿ ಇತರರು ಇದ್ದರು.

ಸಭಾ ಕಾರ್ಯಕ್ರಮದ ನಂತರ ಪಟ್ಟಣದ ಮುಖ್ಯ ಬೀದಿಗಳಲ್ಲಿ ಮೊಂಬತ್ತಿ ಬೆಳಗಿಸಿ ಜಾಗೃತಿ ಜಾಥಾ ಬೈಕ್ ನಡೆಯಿತು. ಜಾಥಾದಲ್ಲಿ ಪಿಡಿಒಗಳು ಹಾಗೂ ಗ್ರಾಪಂ ಸಿಬ್ಬಂದಿ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.

ಜಾಗೃತಿ ಜಾಥಾದ ನಂತರ ತಾಲೂಕು ಆಡಳಿತ ಸೌಧದ ಆವರಣದ ಹೊರಗೆ ಹೊಂಗಿರಣ ಕಲಾ ತಂಡದಿಂದ ಮತದಾನದ ಜಾಗೃತಿ ಕುರಿತು ಗೊಂಬೆಯಾಟದ ಪ್ರದರ್ಶನವು ನಡೆಯಿತು.