ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಚುನಾವಣಾ ಆಯೋಗದ ಮಾರ್ಗಸೂಚಿ ಪ್ರಕಾರ ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ಸಂಕ್ಷಿಪ್ತ ಪರಿಷ್ಕರಣೆ ಕಾರ್ಯ ಸಮರ್ಪಕವಾಗಿ ನಡೆದಿದ್ದು, ರಾಜ್ಯದಲ್ಲಿಯೇ ಅತೀ ಹೆಚ್ಚು ಅಂದರೆ ಒಂದು ಲಕ್ಷಕ್ಕೂ ಅಧಿಕ ಹೊಸ ಮತದಾರರು ನೋಂದಣಿ ಮಾಡಿಕೊಂಡಿರುತ್ತಾರೆ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯೂ ಆಗಿರುವ ಜಿಲ್ಲಾ ಮತದಾರರ ಪಟ್ಟಿಯ ವೀಕ್ಷಕ ಅಂಜುಂ ಪರ್ವೇಜ್ ಹೇಳಿದರು.ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2024ಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಬುಧವಾರ ನಡೆದ ನೋಂದಾಯಿತ ರಾಜಕೀಯ ಪಕ್ಷಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಕ್ಷಿಪ್ತ ಪರಿಷ್ಕರಣೆ ಬಳಿಕ ಮತದಾರರ ಪಟ್ಟಿ ಈಗಾಗಲೇ ಜ.22 ರಂದು ಪ್ರಕಟಿಸಲಾಗಿದ್ದು, ಎಲ್ಲ ಏಳು ರಾಜಕೀಯ ಪಕ್ಷಗಳಿಗೆ ಸಾಫ್ಟ್ ಕಾಪಿ ನೀಡಲಾಗಿದೆ. ಮುದ್ರಿತ ಪಟ್ಟಿ ಕೂಡ ಆಯಾ ಪಕ್ಷಗಳ ಕಚೇರಿಗೆ ಕಳಿಸಲಾಗುತ್ತಿದೆ. ಬೆಳಗಾವಿಯಲ್ಲಿ ಅತೀ ಅಂದರೆ ಒಂದು ಲಕ್ಷಕ್ಕೂ ಅಧಿಕ ಹೆಚ್ಚು ಹೊಸ ಮತದಾರರ ಸೇರ್ಪಡೆಯಾಗಿದ್ದಾರೆ. 45 ಸಾವಿರಕ್ಕೂ ಅಧಿಕ ಮೃತರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗಿದ್ದು, ಒಟ್ಟಾರೆ ಮತದಾರರ ಪಟ್ಟಿಯ ಸಂಕ್ಷಿಪ್ತ ಪರಿಷ್ಕರಣೆ ಸಮರ್ಪಕವಾಗಿ ಮಾಡಲಾಗಿರುತ್ತದೆ ಎಂದರು.
ಕಳೆದ ವರ್ಷಕ್ಕಿಂತ ಶೇ.1.46 ರಷ್ಟು ಮತದಾರರ ಸಂಖ್ಯೆ ಹೆಚ್ಚಳವಾಗಿದೆ. ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ಪ್ರತಿ ಸಂದರ್ಭದಲ್ಲೂ ರಾಜಕೀಯ ಪಕ್ಷಗಳ ಪ್ರತಿನಿಧಿಗಳನ್ನು ವಿಶ್ವಾಸಕ್ಕೆ ಪಡೆದು ಕೆಲಸ ಮಾಡಲಾಗಿದೆ. ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಏನಾದರೂ ಲೋಪದೋಷ ಅಥವಾ ಕೊರತೆಗಳು ಕಂಡುಬಂದರೆ ಮಾಹಿತಿ ನೀಡಬೇಕು ಎಂದರು.ಪ್ರತಿ ಬಿಎಲ್ಒಗಳ ಮಾಹಿತಿ ರಾಜಕೀಯ ಪಕ್ಷಗಳಿಗೆ ನೀಡಬೇಕು. ಇದರಿಂದ ಸಮನ್ವಯ ಸಾಧ್ಯವಾಗಲಿದೆ. ಪ್ರತಿ ಮತಕ್ಷೇತ್ರವಾರು ರಾಜಕೀಯ ಪಕ್ಷಗಳ ಬೂತ್ ಮಟ್ಟದ ಏಜೆಂಟರ ಕ್ರೂಢೀಕೃತ ಮಾಹಿತಿ ಬಿಎಲ್ಒ ಗಳಿಗೂ ಒದಗಿಸುವಂತೆ ತಿಳಿಸಿದರು.
ರಾಜಕೀಯ ಪಕ್ಷಗಳ ಸಹಕಾರ ಮತ್ತು ಅಧಿಕಾರಿಗಳ ಶ್ರಮದಿಂದ ಪರಿಷ್ಕರಣೆ ಸಮರ್ಪಕವಾಗಿ ನಡೆದಿದೆ. ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇರುವುದನ್ನು ಮತದಾರರು ಸ್ವತಃ ತಾವೇ ಆನ್ ಲೈನ್ ಮೂಲಕ ಪರಿಶೀಲನೆ ಮಾಡಬಹುದು. ನಾಗರಿಕರು ತಮ್ಮ ಹೆಸರುಗಳನ್ನು ಮುಂಚಿತವಾಗಿಯೇ ಪರಿಶೀಲಿಸಬೇಕು ಎಂದು ತಿಳಿಸಿದರು.ಮತದಾರರ ನೋಂದಣಿಗೆ ಅವಕಾಶ; 90 ಹೊಸ ಮತಗಟ್ಟೆ ಸ್ಥಾಪನೆ: ಜಿಲ್ಲೆಯಾದ್ಯಂತ ಹೊಸದಾಗಿ ಯುವ ಮತದಾರರ ಸೇರ್ಪಡೆಗೆ ಸಂಬಂಧಿಸಿದಂತೆ ಕಾಲೇಜುಗಳಲ್ಲಿ ವಿಶೇಷ ಅಭಿಯಾನ ನಡೆಸಲಾಗಿತ್ತು. ಆಯಾ ಕಾಲೇಜುಗಳಲ್ಲಿ ಶಿಬಿರ ಆಯೋಜಿಸಿ 17 ವರ್ಷ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಂದಲೇ ಆನ್ ಲೈನ್ ಅರ್ಜಿಗಳನ್ನು ಭರ್ತಿ ಮಾಡುವ ಮೂಲಕ ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.
ಇದಲ್ಲದೇ ಮಹಿಳಾ ಮತದಾರರ ಹೆಸರು ಸೇರ್ಪಡೆಗೂ ಕೂಡ ವಿಶೇಷ ಅಭಿಯಾನ ಕೈಗೊಂಡ ಪರಿಣಾಮ ಲಿಂಗಾನುಪಾತ ಪ್ರಮಾಣದಲ್ಲಿ ಮಹಿಳಾ ಮತದಾರರ ಸೇರ್ಪಡೆ ಕೂಡ ಹೆಚ್ಚಳವಾಗಿದೆ. ಜಿಲ್ಲೆಯಲ್ಲಿ ಮತದಾನಕ್ಕೆ ಅರ್ಹರಾಗಿರುವ ನೂರು ಜನರಲ್ಲಿ ಶೇ.71 ರಷ್ಟು ಮತದಾರರಿದ್ದಾರೆ. ಮತದಾರರು ಎರಡು ಕಿ.ಮೀ. ಗಿಂತ ಅಧಿಕ ಹೋಗಬಾರದು ಎಂಬ ಆಶಯದೊಂದಿಗೆ ಜಿಲ್ಲೆಯಲ್ಲಿ 90 ಹೊಸ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಇದಕ್ಕೆ ಚುನಾವಣಾ ಆಯೋಗ ಕೂಡ ಅನುಮೋದನೆ ನೀಡಿದೆ ಎಂದು ತಿಳಿಸಿದರು.ಹಳೆ ಮತಗಟ್ಟೆ ಇರುವ ಕಾಂಪೌಂಡ್‌ನಲ್ಲಿಯೇ ಹೊಸ ಕಟ್ಟಡ ನಿರ್ಮಾಣವಾಗಿರುವ ಕಡೆಗಳಲ್ಲಿ ಹೊಸ ಕಟ್ಟಡಕ್ಕೆ ಮತಗಟ್ಟೆ ಸ್ಥಳಾಂತರ ಮಾಡಲು ಕ್ರಮ ಕೈಗೊಳ್ಳಲಾಗಿದೆ. ನಾಮಪತ್ರ ಸಲ್ಲಿಕೆಗೆ ನಿಗದಿಪಡಿಸಲಾಗಿರುವ ಕಡೆಯ ದಿನದವರೆಗೆ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿ, ಬದಲಾವಣೆ, ಹೆಸರು ಕೈಬಿಡುವುದಕ್ಕೆ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ. ಏನಾದರೂ ಗೊಂದಲ ಕಂಡುಬಂದರೆ ಈಗಲೂ ಸರಿಪಡಿಸಲು ಅವಕಾಶಗಳಿವೆ ಎಂದು ಅವರು ಹೇಳಿದರು.
ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ, ಪ್ರೊಬೇಷನರಿ ಐ.ಎ.ಎ. ಅಧಿಕಾರಿ ಶುಭಂ ಶುಕ್ಲಾ, ಅಪರ ಜಿಲ್ಲಾಧಿಕಾರಿ ವಿಜಯಕುಮಾರ್ ಹೊನಕೇರಿ, ಉಪ ವಿಭಾಗಾಧಿಕಾರಿ ಶ್ರವಣ ನಾಯಕ ಹಾಗೂ ಕಾಂಗ್ರೆಸ್, ಬಿಜೆಪಿ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಸಭೆಯಲ್ಲಿ ಇದ್ದರು.