ಸಾರಾಂಶ
ದಾವಣಗೆರೆ: ಭಾರತ ಚುನಾವಣಾ ಆಯೋಗ ನಿರ್ದೇಶನದನ್ವಯ ಮತದಾರ ಪಟ್ಟಿಯ ಸಂಕ್ಷಿಪ್ತ ವಿಶೇಷ ಪರಿಷ್ಕರಣೆ ನಡೆಯುತ್ತಿದ್ದು, ಮತದಾರರ ಪಟ್ಟಿಗೆ ಹೊಸದಾಗಿ ಸೇರ್ಪಡೆ, ತಿದ್ದುಪಡಿ, ವರ್ಗಾವಣೆ ಹಾಗೂ ಆಕ್ಷೇಪಣೆಗಳಿದ್ದಲ್ಲಿ ನ.28 ರೊಳಗಾಗಿ ಸಲ್ಲಿಸಲು ಅವಕಾಶ ಇದೆ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮತ್ತು ಮತದಾರರ ಪಟ್ಟಿ ವಿಶೇಷ ವೀಕ್ಷಕರಾದ ಡಾ.ಶಮ್ಲಾ ಇಕ್ಬಾಲ್ ತಿಳಿಸಿದರು.
ದಾವಣಗೆರೆ: ಭಾರತ ಚುನಾವಣಾ ಆಯೋಗ ನಿರ್ದೇಶನದನ್ವಯ ಮತದಾರ ಪಟ್ಟಿಯ ಸಂಕ್ಷಿಪ್ತ ವಿಶೇಷ ಪರಿಷ್ಕರಣೆ ನಡೆಯುತ್ತಿದ್ದು, ಮತದಾರರ ಪಟ್ಟಿಗೆ ಹೊಸದಾಗಿ ಸೇರ್ಪಡೆ, ತಿದ್ದುಪಡಿ, ವರ್ಗಾವಣೆ ಹಾಗೂ ಆಕ್ಷೇಪಣೆಗಳಿದ್ದಲ್ಲಿ ನ.28 ರೊಳಗಾಗಿ ಸಲ್ಲಿಸಲು ಅವಕಾಶ ಇದೆ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮತ್ತು ಮತದಾರರ ಪಟ್ಟಿ ವಿಶೇಷ ವೀಕ್ಷಕರಾದ ಡಾ.ಶಮ್ಲಾ ಇಕ್ಬಾಲ್ ತಿಳಿಸಿದರು. ಶನಿವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಕುರಿತಂತೆ ಮಾಹಿತಿ ನೀಡುವ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈಗಾಗಲೇ ಅಕ್ಟೋಬರ್ 29 ರಂದು ಕರಡು ಮತದಾರರ ಪಟ್ಟಿ ಬಿಡುಗಡೆ ಮಾಡಲಾಗಿದ್ದು, ನ.28 ರ ವರೆಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ. ಈ ಅವಧಿಯಲ್ಲಿ ನ.23 ನಾಲ್ಕನೇ ಶನಿವಾರ ಹಾಗೂ 24 ರ ಭಾನುವಾರ ರಜಾ ದಿನಗಳಂದು ವಿಶೇಷ ಕಾರ್ಯಾಚರಣೆ ಮಾಡಲಾಗುತ್ತದೆ. ಸಾರ್ವಜನಿಕರು ತಮ್ಮ ಮತಗಟ್ಟೆ ವ್ಯಾಪ್ತಿಯ ಮತಗಟ್ಟೆ ಅಧಿಕಾರಿಗಳನ್ನು ಭೇಟಿ ಮಾಡಿ ಆಕ್ಷೇಪಣೆಗಳಿದ್ದಲ್ಲಿ ಸಲ್ಲಿಸಬಹುದಾಗಿದೆ ಎಂದರು. ಸಾರ್ವಜನಿಕರು ಮತದಾರರ ಪಟ್ಟಿಗೆ ಆಕ್ಷೇಪಣೆಗಳನ್ನು ತಹಸೀಲ್ದಾರರ ಕಚೇರಿ, ಉಪವಿಭಾಗಾಧಿಕಾರಿಗಳ ಕಚೇರಿ, ಪಾಲಿಕೆ ವ್ಯಾಪ್ತಿಯಲ್ಲಿ ಸಂಬಂಧಿಸಿದ ಕಾರ್ಯಾಲಯಗಳಿಗೆ ಹಾಗೂ ಬಿಎಲ್ಓಗಳಿಗೆ ನೀಡಬಹುದಾಗಿದೆ. ಸ್ವೀಕರಿಸುವ ಎಲ್ಲಾ ಅರ್ಜಿಗಳನ್ನು ಡಿಸೆಂಬರ್ 24 ರೊಳಗಾಗಿ ಇತ್ಯರ್ಥಪಡಿಸಿ 2025 ರ ಜನವರಿ 6 ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ ಎಂದು ಮಾಹಿತಿ ನೀಡಿದರು. ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರ ಸ್ವಾಮಿ ಮಾತನಾಡಿ, ಜಿಲ್ಲೆಯ 7 ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 1693 ಮತಗಟ್ಟೆಗಳಿದ್ದು, ಎಲ್ಲಾ ಮತಗಟ್ಟೆಗಳಲ್ಲಿ ಮತಗಟ್ಟೆ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಇದರಲ್ಲಿ 1048 ಶಿಕ್ಷಕರು, 501 ಅಂಗನವಾಡಿ ಕಾರ್ಯಕರ್ತೆಯರು, 61 ಆಶಾ ಕಾರ್ಯಕರ್ತೆಯರು, 38 ಬಿಲ್ ಕಲೆಕ್ಟರ್, 15 ಗ್ರಾಮ ಆಡಳಿತಾಧಿಕಾರಿಗಳು, 16 ದ್ವಿತೀಯ ದರ್ಜೆ ಸಹಾಯಕರು, 14 ಪ್ರಥಮ ದರ್ಜೆ ಸಹಾಯಕರು ಬಿಎಲ್‌ಓಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು. ಕರಡು ಮತದಾರರ ಪಟ್ಟಿಯನ್ವಯ 2025 ರ ಜನವರಿಗೆ 1ಕ್ಕೆ ನಿರೀಕ್ಷಿತ 19,143,379 ಜನಸಂಖ್ಯೆ ನಿರೀಕ್ಷಿಸಲಾಗಿದೆ. ಪ್ರಸ್ತುತ 743476 ಪುರುಷ, 751277 ಮಹಿಳೆ ಸೇರಿ 1494753 ಮತದಾರರಿದ್ದಾರೆ. ಇದು ಜನಗಣತಿ ಅಂಕಿ ಅಂಶಕ್ಕೆ ಹೋಲಿಕೆ ಮಾಡಿದಲ್ಲಿ ಶೇ.78.08 ಮತದಾರರಿದ್ದಾರೆ ಎಂದು ತಿಳಿಸಿದರು. ವಯೋಮಾನದನ್ವಯ 18 ರಿಂದ 19 ವರ್ಷ 43805 ಮತದಾರರಿದ್ದು, ಜನಸಂಖ್ಯೆಗೆ ಶೇ 2.28%, 20-29 ವರ್ಷದವರೆಗೆ 298110 ಮತದಾರರು ಜನಸಂಖ್ಯೆಗೆ ಶೇ 15.57%, 30-39 ರವರೆಗೆ 340012 ಮತದಾರರು ಜನಸಂಖ್ಯೆಗೆ ಶೇ.17.76, 40-49 ರ ಮಧ್ಯದಲ್ಲಿ 325916 ಮತದಾರರು ಜನಸಂಖ್ಯೆಗೆ ಶೇ.17.02, 50-59 ರಲ್ಲಿ 238269 ಮತದಾರರು ಜನಸಂಖ್ಯೆಗೆ ಶೇ 12.44, 60-69 ರ ವಯಸ್ಸಿನವರು 148982 ಮತದಾರರು ಜನಸಂಖ್ಯೆಗೆ ಶೇ 7.78, 70-79 ರ ವಯೋಮಾನ 72742 ಮತದಾರರು ಜನಸಂಖ್ಯೆಗೆ ಶೇ 3.79 ಮತ್ತು 80-89 ವರ್ಷದ ಅವಧಿಯಲ್ಲಿ 22976 ಮತದಾರರಿದ್ದಾರೆ, ಜನಸಂಖ್ಯೆಗೆ ಹೋಲಿಕೆ ಮಾಡಿದಲ್ಲಿ ಶೇ.1.20 ಮತದಾರರಿದ್ದಾರೆ. ಈ ಅವಧಿಯಲ್ಲಿ ಹೊಸದಾಗಿ ಯುವ ಮತದಾರರಾಗಿ 43805 ಮತದಾರರು ಸೇರ್ಪಡೆಯಾಗಿದ್ದಾರೆ ಎಂದು ಹೇಳಿದರು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್, ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್, ಆಯುಕ್ತರಾದ ರೇಣುಕಾ, ಹಾಗೂ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಉಪಸ್ಥಿತರಿದ್ದರು.