ಸಾರಾಂಶ
ದಸರಾದಲ್ಲಿ ಪ್ರಮುಖ ಆಕರ್ಷಣೆಯಾಗಿರುವ ಜಂಬೂ ಸವಾರಿ ಕಿರಂಗೂರಿನ ಬನ್ನಿ ಮಂಟಪದಿಂದ ಆರಂಭಗೊಳ್ಳಲಿದೆ. ಈ ಬಾರಿ ಮಹೇಂದ್ರ ಆನೆ ಅಂಬಾರಿ ಹೊರಲಿದ್ದು, ಹಿರಣ್ಯ ಮತ್ತು ಲಕ್ಷ್ಮೀ ಆನೆಗಳು ಸಾಥ್ ನೀಡಲಿವೆ. ಶುಕ್ರವಾರ ಮಧ್ಯಾಹ್ನ 2.30 ರಿಂದ 3 ಗಂಟೆವರೆಗೆ ಬನ್ನಿಪೂಜೆ ಸೇರಿದಂತೆ ನಾಡದೇವತೆ ಶ್ರೀಚಾಮುಂಡೇಶ್ವರಿ ದೇವಿಗೆ ಅಗ್ರಪೂಜೆ ಮತ್ತು ಜಂಬೂ ಸವಾರಿಗೆ ನಟ ಶಿವರಾಜ್‌ಕುಮಾರ್ ಚಾಲನೆ ನೀಡುವರು.
ಕನ್ನಡಪ್ರಭ ವಾರ್ತೆ ಮಂಡ್ಯ
ದಸರಾ ಮೂಲ ಸ್ಥಳವಾದ ಶ್ರೀರಂಗಪಟ್ಟಣದಲ್ಲಿ ಅ.4ರಿಂದ 7ರವರೆಗೆ ದಸರಾ ಮಹೋತ್ಸವ ನಡೆಯಲಿದೆ. ಈ ಬಾರಿಯ ದಸರಾ ಮಹೋತ್ಸವನ್ನು ಚಿತ್ರನಟ ಶಿವರಾಜ್‌ಕುಮಾರ್ ಉದ್ಘಾಟಿಸಲಿದ್ದಾರೆ.ದಸರಾದಲ್ಲಿ ಪ್ರಮುಖ ಆಕರ್ಷಣೆಯಾಗಿರುವ ಜಂಬೂ ಸವಾರಿ ಕಿರಂಗೂರಿನ ಬನ್ನಿ ಮಂಟಪದಿಂದ ಆರಂಭಗೊಳ್ಳಲಿದೆ. ಈ ಬಾರಿ ಮಹೇಂದ್ರ ಆನೆ ಅಂಬಾರಿ ಹೊರಲಿದ್ದು, ಹಿರಣ್ಯ ಮತ್ತು ಲಕ್ಷ್ಮೀ ಆನೆಗಳು ಸಾಥ್ ನೀಡಲಿವೆ. ಶುಕ್ರವಾರ ಮಧ್ಯಾಹ್ನ 2.30 ರಿಂದ 3 ಗಂಟೆವರೆಗೆ ಬನ್ನಿಪೂಜೆ ಸೇರಿದಂತೆ ವಿವಿಧ ಸಾಂಪ್ರದಾಯಿಕ ಪೂಜೆಗಳು ನೆರವೇರಿದ ಬಳಿಕ ನಾಡದೇವತೆ ಶ್ರೀಚಾಮುಂಡೇಶ್ವರಿ ದೇವಿಗೆ ಅಗ್ರಪೂಜೆ ಮತ್ತು ಜಂಬೂ ಸವಾರಿಗೆ ನಟ ಶಿವರಾಜ್‌ಕುಮಾರ್ ಚಾಲನೆ ನೀಡುವರು. ಸ್ತಬ್ದ ಚಿತ್ರಗಳು, ಸ್ಥಳೀಯ ಕಲಾ ತಂಡಗಳು ಜಂಬೂಸವಾರಿಗೆ ಜೊತೆಯಾಗಲಿವೆ.
ಇದಕ್ಕೂ ಮುನ್ನ ಮಧ್ಯಾಹ್ನ 12.30ಕ್ಕೆ ನಂದಿಧ್ವಜ ಪೂಜೆ ಸೇರಿದಂತೆ ಇತರೆ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ ಘನ ಉಪಸ್ಥಿತಿ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಎನ್.ಚಲುವರಾಯಸ್ವಾಮಿ, ಶಾಸಕ ರಮೇಶಬಾಬು ಬಂಡಿಸಿದ್ದೇಗೌಡ, ಮುಖ್ಯ ಅತಿಥಿಗಳಾಗಿ ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ, ಕೆ.ಜೆ.ಜಾರ್ಜ್, ಕೃಷ್ಣ ಭೈರೇಗೌಡ. ಎಚ್.ಕೆ.ಪಾಟೀಲ್, ಸತೀಶ್ ಜಾರಕಿಹೊಳಿ ಸೇರಿದಂತೆ ಇತರರು ಭಾಗವಹಿಸುವರು. ಜಂಬೂಸವಾರಿ ಮೆರವಣಿ ಕಿರಂಗೂರಿನ ಬನ್ನಿಮಂಟಪದಿಂದ ಆರಂಭವಾಗಿ ಶ್ರೀರಂಗನಾಥಸ್ವಾಮಿ ದೇವಾಲಯದ ಬಳಿ ಅಂತ್ಯಗೊಳ್ಳಲಿದೆ.ಸಂಜೆ 6 ಗಂಟೆಗೆ ಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯದ ಆವರಣದಲ್ಲಿ ದಸರಾ ಮತ್ತು ವೇದಿಕೆ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ. ರಾತ್ರಿ 8 ಗಂಟೆಗೆ ಗಾಯಕ ಹಾಗೂ ಸಂಗೀತ ನಿರ್ದೇಶಕ ವಾಸುಕಿ ವೈಭವ್ ಮತ್ತು ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.