ವಿದ್ಯುತ್ ಕಣ್ಣಾಮುಚ್ಚಾಲೆ; ಸಾರ್ವಜನಿಕ ಆಸ್ಪತ್ರೆಯಲ್ಲಿ ಕತ್ತಲೋ ಕತ್ತಲು!

| Published : May 22 2024, 12:48 AM IST

ವಿದ್ಯುತ್ ಕಣ್ಣಾಮುಚ್ಚಾಲೆ; ಸಾರ್ವಜನಿಕ ಆಸ್ಪತ್ರೆಯಲ್ಲಿ ಕತ್ತಲೋ ಕತ್ತಲು!
Share this Article
  • FB
  • TW
  • Linkdin
  • Email

ಸಾರಾಂಶ

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಟಾರ್ಚ್‌ ಬೆಳಕಲ್ಲಿ ಚಿಕಿತ್ಸೆ ನೀಡುವ ಪರಿಸ್ಥಿತಿ ಎದುರಾಗಿದ್ದು, ಮಳೆ ಬಂತೆಂದರೆ ವಿದ್ಯುತ್ ಕಡಿತ ಹಾಗೂ ದುರಸ್ತಿಗೂ ಜಗ್ಗದ ಜನರೇಟರ್ ಹೀಗೆ ಈ ಅವ್ಯವಸ್ಥೆಗಳ ಮಧ್ಯೆ ರೋಗಿಗಳು ಕಂಗಾಲಾಗಿದ್ದಾರೆ.

ಬಿಜಿಕೆರೆ ಬಸವರಾಜು

ಕನ್ನಡಪ್ರಭ ವಾರ್ತೆ, ಮೊಳಕಾಲ್ಮುರು

ಕಳೆದೊಂದು ವಾರದಿಂದ ಸುರಿಯುತ್ತಿರುವ ಮಳೆಯ ಪರಿಣಾಮವಾಗಿ ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ರೋಗಿಗಳಿಗೆ ಮೇಣದ ಹಾಗೂ ಮೊಬೈಲ್ ಟಾರ್ಚ್‌ ಬೆಳಕಲ್ಲಿ ಚಿಕಿತ್ಸೆ ನೀಡುವ ಅನಿವಾರ್ಯತೆ ಎದುರಾಗಿದೆ.

ಇಂತದೊಂದು ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಆಸ್ಪತ್ರೆಯ ಕಾರ್ಯವೈಖರಿ ಕುರಿತು ಸಾರ್ವಜನಿಕ ರಿಂದ ವ್ಯಾಪಕ ಟೀಕೆಗೂ ಗುರಿಯಾಗಿದೆ. ವೈದ್ಯರ ಕೊರತೆಯ ನಡುವೆ ಕಾರ್ಯ ನಿರ್ವಹಿಸುತ್ತಿರುವ ೧೦೦ ಹಾಸಿಗೆಗಳ ಆಸ್ಪತ್ರೆ ಯಲ್ಲಿ ಕಳೆದೊಂದು ವಾರದಿಂದ ಬಿಟ್ಟು ಬಿಡದೆ ಕಾಡುತ್ತಿರುವ ವಿದ್ಯುತ್ ಕಣ್ಣಾ ಮುಚ್ಚಾಲೆಯಿಂದ ಹಗಲಲ್ಲಿಯೇ ಮೊಬೈಲ್ ಮತ್ತು ಮೇಣದ ಬೆಳಕಿನಲ್ಲಿ ವೈದ್ಯರು ಚಿಕಿತ್ಸೆ ನೀಡುವಂತಾಗಿದೆ. ರೋಗಿಗಳು ಕೂಡ ಇದೇ ಬೆಳಕಿನಲ್ಲಿ ಸಮಯ ಕಳೆಯುವಂತಾಗಿದೆ.ಕಳೆದೊಂದು ವಾರದಿಂದ ಆಸ್ಪತ್ರೆಯಲ್ಲಿ ಜನರೇಟರ್ ಕೆಟ್ಟಿರುವ ಪರಿಣಾಮ ಸ್ಥಳೀಯ ಮೆಕಾನಿಕ್ ಕರೆಸಿ ಎರಡು ಸಾರಿ ದುರಸ್ತಿ ಮಾಡಿಸಿದ್ದರೂ ಪ್ರಯೋಜನ ಕಂಡಿಲ್ಲ. ಇದರಿಂದಾಗಿ ಆಸ್ಪತ್ರೆಯಲ್ಲಿ ಮಳೆ ಬಂದಾಗ ವಿದ್ಯುತ್ ಕಡಿತಗೊಳ್ಳುತ್ತಿದೆ. ಆಸ್ಪತ್ರೆಯಲ್ಲಿ ಕ್ಷಣಕಾಲ ಸಂಪೂರ್ಣ ಕತ್ತಲಾವರಿಸುತ್ತದೆ. ದುರಸ್ತಿಗೆ ಮುಂದಾಗಬೇಕಾದವರು ನಿರ್ಲಕ್ಷ ಭಾವನೆ ತಾಳುತ್ತಿದ್ದಾರೆ. ಇದರಿಂದ ಆಸ್ಪತ್ರೆಯಲ್ಲಿ ಕತ್ತಲಲ್ಲಿ ಕಾಲ ಕಳೆಯುವುದು ಅನಿವಾರ್ಯ ಎನ್ನುವುದು ಕೆಲವರ ಆರೋಪವಾಗಿದೆ.

ಕಳೆದೊಂದು ವಾರದಿಂದ ಗುಡುಗು ಸಿಡಿಲಿನಾರ್ಭಟಕ್ಕೆ ಆಗಾಗ್ಗೆ ಆಸ್ಪತ್ರೆಯಲ್ಲಿ ವಿದ್ಯುತ್ ಕಡಿತವಾಗುತ್ತಿದೆ. ಇದರಿಂದಾಗಿ ತುರ್ತು ಚಿಕಿತ್ಸಾ ಕೊಠಡಿ, ಒಳರೋಗಿ ಕೊಠಡಿ,ಚಿಕಿತ್ಸಾ ಕೊಠಡಿ,ಚುಚ್ಚು ಮದ್ದು ಕೊಠಡಿ,ರಕ್ತ ಪರೀಕ್ಷಾ ಕೊಠಡಿ ಸೇರಿದಂತೆ ಆಯಕಟ್ಟಿನ ಕೊಠಡಿಗಳಲ್ಲಿ ವಿದ್ಯುತ್ ಕಡಿತಗೊಂಡ ವೇಳೆ ಕತ್ತಲಾವರಿಸುತ್ತದೆ.ಸಿಬ್ಬಂದಿಗಳು ಮಬ್ಬು ಬೆಳಕಲ್ಲಿ ವಿದ್ಯುತ್ ಬರುವವರೆಗೆ ಕಾಲ ಕಳೆಯುವಂತಾಗುತ್ತದೆ.

ಮಳೆ ಮತ್ತು ಇನ್ನಿತರೆ ಕಾರಣಗಳಿಗೆ ವಿದ್ಯುತ್ ಕಡಿತಗೊಂಡಲ್ಲಿ ಮತ್ತೆ ಕರೆಂಟು ಬರುವುದಕ್ಕೆ ಕನಿಷ್ಟ ೧೦ ರಿಂದ ೨೦ ನಿಮಿಷ ಸಮಯ ವಿಳಂಬವಾಗುತ್ತದೆ. ಅಲ್ಲಿಯ ತನಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಮೇಣದ ಬತ್ತಿ ಮತ್ತು ಮೊಬೈಲ್ ಟಾರ್ಚ ಬೆಳಕು ಅನಿವಾರ್ಯ ವಾಗುತ್ತದೆ.ಇದರೊಟ್ಟಿಗೆ ಪ್ಯಾನಿಲ್ಲದೆ ಸೊಳ್ಳೆಗಳ ಹಾವಳಿಗೆ ಸಿಲುಕಿ ನಲಗುವಂತಾಗುತ್ತದೆ.

ತುರ್ತು ಚಿಕಿತ್ಸಾ ವಿಭಾಗ ಮತ್ತು ಶಸ್ತ್ರಚಿಕಿತ್ಸಾ ಕೊಠಡಿಗಳಿಗೆ ವಿದ್ಯುತ್ ಸಂಪರ್ಕ ಪ್ರತ್ಯೇಕಗೊಳಿಸಿದ್ದರೂ ಜನರೇಟರ್ ದುರಸ್ಥಿ ಯ ಪರಿಣಾಮ ಕಳೆದೊಂದು ವಾರದಿಂದ ಉಂಟಾಗುತ್ತಿರುವ ವಿದ್ಯುತ್ ಕಡಿತದಿಂದ ಸಮಸ್ಯೆ ಬಿಗುಡಾಯಿಸುವಂತಾಗಿದೆ.ಬೆಂಗಳೂರಿಂದ ಬಂದ ಮೆಕಾನಿಕ್: ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದ್ದ ಜನರೇಟರ್ ಸಮಸ್ಯೆಯಿಂದ ಎಚ್ಚೆತ್ತ ಅಧಿಕಾರಿಗಳು ಸೋಮವಾರ ಮೆಕಾನಿಕ್ ಕರೆಸಿದ್ದು, ದುರಸ್ತಿಗೆ ಮುಂದಾಗಿದ್ದಾರೆ. ಬೆಂಗಳೂರಿನಿಂದ ಮೆಕಾನಿಕ್ ದುರಸ್ತಿ ಮಾಡಿದ್ದರೂ ಜನರೇಟರ್ ಹೋಗಿ ಬಂದು ಹೋಗಿ ಬಂದು ಕೆಲಸ ಮಾಡುತ್ತಿದೆ ಎನ್ನಲಾಗುತ್ತಿದ್ದು, ಸಂಬಂಧಿಸಿದ ಅಧಿಕಾರಿಗಳು ಆಸ್ಪತ್ರೆಯಲ್ಲಿ ಎದುರಾಗಿರುವ ಜನರೇಟರ್ ಸಮಸ್ಯೆಗೆ ಯಾವ ಪರಿ ಪರಿಹಾರ ನೀಡುತ್ತಾರೋ ಎಂಬುದನ್ನು ಕಾದು ನೋಡಬೇಕಿದೆ. ಇನ್ನು, ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಮಂಜುನಾಥ್‌, ಆಸ್ಪತ್ರೆಯಲ್ಲಿ ಕೆಲ ದಿನಗಳಿಂದ ಜನರೇಟರ್ ಸಮಸ್ಯೆಯಾಗಿ ದುರಸ್ತಿ ಮಾಡಿಸಿದ್ದರೂ ಮತ್ತೆ ಮತ್ತೆ ಕೆಡುವಂತಹ ಸ್ಥಿತಿ ಎದುರಾಗಿರುವ ಪರಿಣಾಮ ಬೆಂಗಳೂರಿನಿಂದ ಮೆಕಾನಿಕ್ ಕರೆಸಿದ್ದು, ದುರಸ್ತಿ ಮಾಡಿಸಿದ್ದೇವೆ. ಕೆಲ ವೈದ್ಯರು ಸಮಸ್ಯೆಗಳನ್ನು ಸೃಷ್ಟಿ ಮಾಡಿ ಸಾಮಾಜಿಕ ಜಾಲತಾಣಗಳಿಗೆ ಹರಿಬಿಡುತ್ತಾ ಆಸ್ಪತ್ರೆಗೆ ಕೆಟ್ಟ ಹೆಸರು ತರುವ ಯತ್ನ ಮಾಡುತ್ತಿದ್ದಾರೆ. ಆಸ್ಪತ್ರೆಯ ಉನ್ನೀತೀಕರಣಕ್ಕೆ ಸಾರ್ವಜನಿಕರ ಜತೆಗೆ ಆಸ್ಪತ್ರೆಯ ಸಿಬ್ಬಂದಿ ಕೈಜೋಡಿಸಬೇಕು ಎಂದೂ ತಿಳಿಸಿದ್ದಾರೆ.