ನೌಕರರ ಪಿಂಚಣಿ ಚುಕ್ತಾಕ್ಕಾಗಿ ಗ್ರಾಹಕರಿಗೆ ವಿದ್ಯುತ್‌ ಶಾಕ್‌ : ದರ ಏರಿಕೆ ಹೊಡೆತವೂ ಸದ್ಯದಲ್ಲೇ?

| N/A | Published : Mar 21 2025, 01:34 AM IST / Updated: Mar 21 2025, 04:54 AM IST

ನೌಕರರ ಪಿಂಚಣಿ ಚುಕ್ತಾಕ್ಕಾಗಿ ಗ್ರಾಹಕರಿಗೆ ವಿದ್ಯುತ್‌ ಶಾಕ್‌ : ದರ ಏರಿಕೆ ಹೊಡೆತವೂ ಸದ್ಯದಲ್ಲೇ?
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದಲ್ಲಿ ವಾರ್ಷಿಕ ವಿದ್ಯುತ್‌ ದರ ಪರಿಷ್ಕರಣೆಗೂ ಮೊದಲೇ ಕೆಪಿಟಿಸಿಎಲ್‌, ಎಸ್ಕಾಂಗಳ ನೌಕರರ ಪಿಂಚಣಿ, ಗ್ರ್ಯಾಚುಟಿ ಹೊರೆಯನ್ನು ಗ್ರಾಹಕರ ಮೇಲೆ ವರ್ಗಾಯಿಸುವ ಮೂಲಕ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ) ಹೊಸ ಶಾಕ್‌ ನೀಡಿದೆ.  

 ಬೆಂಗಳೂರು :  ರಾಜ್ಯದಲ್ಲಿ ವಾರ್ಷಿಕ ವಿದ್ಯುತ್‌ ದರ ಪರಿಷ್ಕರಣೆಗೂ ಮೊದಲೇ ಕೆಪಿಟಿಸಿಎಲ್‌, ಎಸ್ಕಾಂಗಳ ನೌಕರರ ಪಿಂಚಣಿ, ಗ್ರ್ಯಾಚುಟಿ ಹೊರೆಯನ್ನು ಗ್ರಾಹಕರ ಮೇಲೆ ವರ್ಗಾಯಿಸುವ ಮೂಲಕ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ) ಹೊಸ ಶಾಕ್‌ ನೀಡಿದೆ. ಇದರಿಂದಾಗಿ ಏ.1 ರಿಂದ ಅನ್ವಯವಾಗುವಂತೆ ಯುನಿಟ್‌ಗೆ ಕನಿಷ್ಠ 35 ಪೈಸೆಯಿಂದ ಗರಿಷ್ಠ 39 ಪೈಸೆವರೆಗೆ ವಿದ್ಯುತ್‌ ದರ ಹೆಚ್ಚಳ ಆಗಲಿದೆ.

ಕೆಇಆರ್‌ಸಿಯು ಮಾ.18ರಂದು ಮಂಗಳವಾರ ಈ ಬಗ್ಗೆ ಆದೇಶ ಹೊರಡಿಸಿದ್ದು, ಮುಂದಿನ ಮೂರು ವರ್ಷಗಳಲ್ಲಿ ಗ್ರಾಹಕರಿಂದ ಪ್ರತಿ ಯುನಿಟ್‌ಗೆ ಗರಿಷ್ಠ 39 ಪೈಸೆಯಿಂದ ಕನಿಷ್ಠ 35 ಪೈಸೆ ವಸೂಲು ಮಾಡಲು ಕೆಪಿಟಿಸಿಎಲ್‌ ಹಾಗೂ ಎಸ್ಕಾಂಗಳಿಗೆ ಅವಕಾಶ ಕಲ್ಪಿಸಿದೆ.

ಇನ್ನು ಇದರ ಬೆನ್ನಲ್ಲೇ ಏ.1ರಿಂದ ಎಂದಿನಂತೆ ವಾರ್ಷಿಕ ವಿದ್ಯುತ್ ದರ ಪರಿಷ್ಕರಣೆಯೂ ಆಗಲಿದೆ. ಈ ವಾರದಲ್ಲೇ ಮತ್ತೊಂದು ದರ ಪರಿಷ್ಕರಣೆ ಆದೇಶ ಹೊರ ಬೀಳಲಿದ್ದು, ರಾಜ್ಯ ವಿದ್ಯುತ್ ಗ್ರಾಹಕರಿಗೆ ಡಬಲ್‌ ಶಾಕ್‌ ಖಚಿತವಾಗಿದೆ.

4,659 ಕೋಟಿ ರು. ಪಿಂಚಣಿ, ಗ್ರ್ಯಾಚ್ಯುಟಿ ಬಾಕಿ:

2021ರಿಂದ 2024 ವರೆಗೆ ಪಿಂಚಣಿ ಮತ್ತು ಗ್ರ್ಯಾಚುಟಿ ಹಿಂಬಾಕಿ ಸೇರಿ ಒಟ್ಟಾರೆ 4,659 ಕೋಟಿ ರು. ಬಾಕಿ ಇದೆ. ಇದನ್ನು ಒಟ್ಟು ಆರು ಕಂತುಗಳಲ್ಲಿ ಗ್ರಾಹಕರಿಂದಲೇ ಸಂಗ್ರಹಿಸಿ, ಕೆಪಿಟಿಸಿಎಲ್ ನೌಕರರಿಗೆ ನೀಡಲು ಉದ್ದೇಶಿಸಲಾಗಿದೆ.

ಅದರಂತೆ ಮೊದಲ ವರ್ಷ ಅಂದರೆ 2025-26ರಲ್ಲಿ 2,812.23 ಕೋಟಿ ರು. 2026-2027ನೇ ಸಾಲಿನಲ್ಲಿ 2,845.75 ಕೋಟಿ ರು. ಹಾಗೂ 2027-2028ನೇ ಸಾಲಿನಲ್ಲಿ 2,860.97 ಕೋಟಿ ರು. ಸಂಗ್ರಹಿಸಬೇಕಿದೆ ಎಂದು ಕೆಇಆರ್‌ಸಿ ಆದೇಶದಲ್ಲಿ ತಿಳಿಸಲಾಗಿದೆ.

ಮೊದಲ ವರ್ಷದಲ್ಲಿ ಸಂಗ್ರಹಿಸಬೇಕಾದ 2,812.23 ಕೋಟಿ ರು.ಗಳನ್ನು 2025-26ರಲ್ಲಿ ಗ್ರಾಹಕರಿಂದ ಪ್ರತಿ ಯುನಿಟ್‌ಗೆ 36 ಪೈಸೆಯಂತೆ ಸಂಗ್ರಹಿಸಲಾಗುತ್ತದೆ. ನಂತರ ವರ್ಷ 2026-27ರಲ್ಲಿ 2,845.75 ಕೋಟಿ ರು.ಗಳನ್ನು ಪ್ರತಿ ಯುನಿಟ್‌ಗೆ 35 ಪೈಸೆಯಂತೆ ಹಾಗೂ 2027-28ರಲ್ಲಿ 2,860.97 ಕೋಟಿ ರು.ಗಳನ್ನು ಪ್ರತಿ ಯುನಿಟ್‌ಗೆ 39 ಪೈಸೆಯಂತೆ ಗ್ರಾಹಕರಿಂದ ಪಡೆಯಲಾಗುತ್ತದೆ. ಬರುವ ಈ ಆದೇಶ ಏ.1 ರಿಂದಲೇ ಅನ್ವಯವಾಗಲಿದೆ.

ಗೃಹಜ್ಯೋತಿ ಫಲಾನುಭವಿಗಳಿಗೆ ಹೊರೆಯಿಲ್ಲ:

200 ಯುನಿಟ್‌ವರೆಗೆ ಉಚಿತ ವಿದ್ಯುತ್ ಯೋಜನೆಯ ಗೃಹಜ್ಯೋತಿ ಮತ್ತು ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡುವುದರಿಂದ ಆ ಹೊರೆಯನ್ನು ಸರ್ಕಾರವೇ ಭರಿಸಲಿದೆ. ಹೀಗಾಗಿ ಗೃಹಜ್ಯೋತಿ ಯೋಜನೆಯಡಿ 200 ಯುನಿಟ್‌ವರೆಗೆ ಉಚಿತ ವಿದ್ಯುತ್‌ ಪಡೆಯುತ್ತಿರುವ ಫಲಾನುಭವಿಗಳಿಗೆ ನೂತನ ದರ ಪರಿಷ್ಕರಣೆಯಿಂದ ಯಾವುದೇ ಹೊರೆ ಉಂಟಾಗುವುದಿಲ್ಲ.ಯಾವ ವರ್ಷಕ್ಕೆ ಎಷ್ಟು ದರ ಹೆಚ್ಚಳ?ವರ್ಷ- ಗ್ರಾಹಕರಿಂದ ಸಂಗ್ರಹಿಸಬೇಕಾದ ಮೊತ್ತ- ದರ ಹೆಚ್ಚಳ 2025-262,812.23 ಕೋಟಿ ರು. 36 ಪೈಸೆ 2026-272,845.75 ಕೋಟಿ ರು. 35 ಪೈಸೆ 2027-282,860.97 ಕೋಟಿ ರು. 39 ಪೈಸೆ---

ಇದು ಬಿಜೆಪಿ ಸರ್ಕಾರದ ಪ್ರಸ್ತಾವನೆ, ನಮ್ಮ ಸರ್ಕಾರ ದರ ಹೆಚ್ಚಳ ಮಾಡಿಲ್ಲ: ಜಾರ್ಜ್‌

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಮತ್ತು ಎಸ್ಕಾಂ ಸಿಬ್ಬಂದಿಯ ಪಿಂಚಣಿ, ಗ್ರಾಚ್ಯುಟಿ ಹಣದ ವಿಷಯವಾಗಿ ಹೈಕೋರ್ಟ್‌ 2024ರ ಮಾರ್ಚ್‌ನಲ್ಲಿ ಹೊರಡಿಸಿದ್ದ ಆದೇಶದ ಮೇರೆಗೆ ಕೆಇಆರ್‌ಸಿ ದರ ಹೆಚ್ಚಳದ ಆದೇಶ ಹೊರಡಿಸಿದೆ. ನಮ್ಮ ಸರ್ಕಾರ ವಿದ್ಯುತ್‌ ದರವನ್ನು ಏರಿಸಿಲ್ಲ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್‌ ಹೇಳಿದ್ದಾರೆ.ಬಿಜೆಪಿ ಸರ್ಕಾರ 2022ರ ಮಾರ್ಚ್‌ನಲ್ಲಿ ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿ (ಕೆಇಬಿ)ಯನ್ನು ರದ್ದುಗೊಳಿಸಿ ಕೆಪಿಟಿಸಿಎಲ್ ‌ಹಾಗೂ 5 ಎಸ್ಕಾಂಗಳನ್ನು ರಚಿಸಿದ ನಂತರ ಪಿಂಚಣಿ ಮತ್ತು ಗ್ರಾಚ್ಯುಟಿ ಪಾಲನ್ನು ಗ್ರಾಹಕರಿಂದ ಪಡೆಯಲು ಆದೇಶಿಸುವಂತೆ ಕೆಇಆರ್‌ಸಿಗೆ ಪ್ರಸ್ತಾವನೆ ಸಲ್ಲಿಸಿತ್ತು. ಆಗ ಕೆಇಆರ್‌ಸಿ ಪ್ರಸ್ತಾವನೆಯನ್ನು ಪುರಸ್ಕರಿಸಿರಲಿಲ್ಲ. ಇದೀಗ ಹೈಕೋರ್ಟ್‌ ಆದೇಶದ ಮೇರೆಗೆ ಕೆಇಆರ್‌ಸಿ ಹೊಸ ಆದೇಶ ಹೊರಡಿಸಿದೆ. ಹೀಗಾಗಿ ಈ ದರ ಹೆಚ್ಚಳಕ್ಕೂ ನಮ್ಮ ಸರ್ಕಾರಕ್ಕೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.