ವಿದ್ಯಾಕಾಂತರಾಜ್‌

ಕನ್ನಡಪ್ರಭ ವಾರ್ತೆ, ಸಕಲೇಶಪುರ

ಸರ್ಕಾರ ವಿದ್ಯುತ್ ಬಿಲ್ ಬಾಕಿ ಪಾವತಿಸದ ಕಾರಣ ಈ ವರ್ಷ ಎತ್ತಿನಹೊಳೆಯಿಂದ ನೀರು ಹರಿಯುವುದು ಅನುಮಾನ.

ಎತ್ತಿನಹೊಳೆಯಿಂದ ಕುಡಿಯುವ ನೀರನ್ನು ಜೂನ್ 15ರಿಂದ ಮೇಲೆತ್ತಬೇಕಿದೆ. ಯೋಜನೆ ಕಾರ್ಯಾರಂಭಕ್ಕೆ ಇನ್ನು 10 ದಿನಗಳು ಮಾತ್ರ ಬಾಕಿ ಇದ್ದರೂ ಸರ್ಕಾರ ಬಾಕಿ ಇರುವ ₹254 ಕೋಟಿ ಮೊತ್ತದ ಬೃಹತ್ ವಿದ್ಯುತ್ ಬಿಲ್ಲನ್ನು ಪಾವತಿಸಿಲ್ಲ. ಹಾಗಾಗಿ ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮ (ಸೆಸ್ಕ್‌) ವಿದ್ಯುತ್ ಸಂಪರ್ಕ ಕಡಿತಗೊಳಿಸುವ ಬಗ್ಗೆ ಯೋಚಿಸುತ್ತಿದೆ. ಈ ಕುರಿತು ಹಿರಿಯ ಅಧಿಕಾರಿಗಳ ನಡುವೆ ಮಾತುಕತೆ ನಡೆದಿದೆ ಎಂಬುದು ಸ್ಥಳೀಯ ಸೆಸ್ಕ್‌ ಅಧಿಕಾರಿಗಳ ಮಾತು.

ಬಯಲುನಾಡಿಗೆ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ 2008ರಲ್ಲಿ ₹8 ಸಾವಿರ ಕೋಟಿ ವೆಚ್ಚದಲ್ಲಿ ಮೈದಳೆದ ಈ ಯೋಜನೆ, 2014ರಲ್ಲಿ ಭೂಮಿ ಪೂಜೆ ನೆರವೇರುವ ವೇಳೆಗೆ ₹13 ಸಾವಿರ ಕೋಟಿಗೆ ತಲುಪಿತ್ತು. 10 ವರ್ಷಗಳ ನಂತರ, 2024ರ ಸೆಪ್ಟಂಬರ್‌ನಲ್ಲಿ ಯೋಜನೆ ಉದ್ಘಾಟನೆಗೊಳ್ಳುವ ವೇಳೆಗೆ ಯೋಜನಾ ವೆಚ್ಚ ₹23 ಸಾವಿರ ಕೋಟಿಗೆ ತಲುಪಿತ್ತು. ಉದ್ಘಾಟನೆಗೊಂಡು ಎರಡು ವರ್ಷ ಕಳೆದರೂ ನಿಗದಿತ ಪ್ರದೇಶಗಳಿಗೆ ನೀರು ಹರಿಸಲು ಯೋಜನೆಯಿಂದ ಸಾಧ್ಯವಾಗಿಲ್ಲ. ಆದರೆ, ಸರ್ಕಾರ ಪ್ರಾಯೋಗಿಕವಾಗಿ ನೀರು ಹರಿಸಿದ್ದಕ್ಕೆ ಬಳಕೆಯಾದ ವಿದ್ಯುತ್‌ ಬಿಲ್ಲೇ ₹259 ಕೋಟಿ ಈ ಪೈಕಿ, ₹5 ಕೋಟಿ ವಿದ್ಯುತ್ ಬಿಲ್ಲನ್ನು ಮಾತ್ರ ಪಾವತಿಸಲಾಗಿದೆ.


ಯೋಜನೆಯಡಿ ಜೂನ್ 15ರಿಂದ ಅಕ್ಟೋಬರ್ 31ರವರೆಗೆ ಮಾತ್ರ ನೀರು ಮೇಲೆತ್ತಲಾಗುತ್ತಿದೆ. ನೀರು ಮೇಲೆತ್ತುವ ಸಾಂಧ್ರತೆಯನ್ನು ಆಧರಿಸಿ ನೀರು ಮೇಲೆತ್ತುವ ವೇಳೆ 15 ರಿಂದ 20 ಕೋಟಿಯಷ್ಟು ಪ್ರತಿ ತಿಂಗಳು ವಿದ್ಯುತ್ ಬಿಲ್ ಪಾವತಿಸಬೇಕಿದೆ. ಇನ್ನುಳಿದ, ಆರು ತಿಂಗಳು ಕನಿಷ್ಠ ವಿದ್ಯುತ್ ಬಿಲ್ ಆಗಿ ಪ್ರತಿ ತಿಂಗಳು ₹9 ಕೋಟಿ ಪಾವತಿಸಬೇಕಿದೆ. ಈ ಮಧ್ಯೆ, ಬಾಕಿ ಉಳಿದ ₹254 ಕೋಟಿಗೆ ಬಡ್ಡಿಯೇ ಪ್ರತಿ ತಿಂಗಳು ₹3 ಕೋಟಿ ಪಾವತಿಸಬೇಕಿದೆ.

ಈ ಮಧ್ಯೆ, ಸಕಾಲಿಕವಾಗಿ ವಿದ್ಯುತ್ ಬಿಲ್ ಪಾವತಿಸದ ಕಾರಣ ಸೆಸ್ಕ್‌, ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಯ ವಿದ್ಯುತ್ ಸಂಪರ್ಕವನ್ನು 2025ರ ಡಿಸೆಂಬರ್ 16ರಿಂದ ಕಡಿತಗೊಳಿಸಿತ್ತು. ಸತತ ಮೂರು ತಿಂಗಳು ವಿದ್ಯುತ್ ಸಂಪರ್ಕವಿಲ್ಲದೆ ದಿನದೂಡಿದ ಇಲಾಖೆ, ಅಂತಿಮವಾಗಿ ₹5 ಕೋಟಿ ಪಾವತಿಸಿ ಉಳಿದ ಹಣವನ್ನು 2026ರ ಜೂನ್ 15ರೊಳಗಾಗಿ ಭರಿಸುವ ಭರವಸೆ ನೀಡಿ, ಏಪ್ರಿಲ್ 1ರಿಂದ ಸಂಪರ್ಕ ಪಡೆದಿದೆ. ಆದರೆ, ಇನ್ನೂ ಬಾಕಿ ಬಿಲ್‌ ಪಾವತಿಸಿಲ್ಲ. ಹೀಗಾಗಿ, ಮತ್ತೆ ವಿದ್ಯುತ್ ಕಡಿತ ನಿಶ್ಚಿತ ಎನ್ನಲಾಗುತ್ತಿದೆ.