ಪೋಡು ಹಾಡಿಗಳ ೩೬೫ ಮನೆಗಳಿಗೆ ವಿದ್ಯುತ್ ಸಂಪರ್ಕ

| Published : Feb 13 2025, 12:48 AM IST

ಸಾರಾಂಶ

ಚಾಮರಾಜನಗರದಲ್ಲಿನ ಹಾಡಿಗಳಿಗೆ ಸಂಪ್ರದಾಯಿಕ ವಿದ್ಯುತ್ ಜಾಲದಿಂದ ವಿದ್ಯುತ್ ಸಂಪರ್ಕ ಕಲ್ಪಿಸುವ ಕಾಮಗಾರಿಗೆ ಪುಣಜನೂರಿನಿಂದ ವಿದ್ಯುತ್ ಜಾಲಕ್ಕೆ ಸಂಪರ್ಕ ವಿಸ್ತರಿಸುವ ಜಾಗದಲ್ಲಿ ಜಿಲ್ಲಾಧಿಕಾರಿ ಶಿಲ್ಪಾನಾಗ್ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಹಾಡಿಗಳಿಗೆ ಸಂಪ್ರದಾಯಿಕ ವಿದ್ಯುತ್ ಜಾಲದಿಂದ ವಿದ್ಯುತ್ ಸಂಪರ್ಕ ಕಲ್ಪಿಸುವ ಕಾಮಗಾರಿಗೆ ಪುಣಜನೂರಿನಿಂದ ವಿದ್ಯುತ್ ಜಾಲಕ್ಕೆ ಸಂಪರ್ಕ ವಿಸ್ತರಿಸುವ ಜಾಗದಲ್ಲಿ ಜಿಲ್ಲಾಧಿಕಾರಿ ಶಿಲ್ಪಾನಾಗ್ ಚಾಲನೆ ನೀಡಿದರು.

ಈ ಕಾಮಗಾರಿಗೆ ಬೇಡುಗುಳಿಯಲ್ಲಿ ಶಾಸಕರು ಹಾಗೂ ಎಂಎಸ್‌ಐಎಲ್ ಅಧ್ಯಕ್ಷ ಸಿ.ಪುಟ್ಟರಂಗಶೆಟ್ಟಿ ಫೆ.೩ ರಂದು ವಿಧ್ಯುಕ್ತವಾಗಿ ಚಾಲನೆ ನೀಡಿದ್ದರು ಎಂದು ಜಿಲ್ಲಾಧಿಕಾರಿ ಶಿಲ್ಪಾನಾಗ್ ತಿಳಿಸಿದರು. ಈ ಯೋಜನೆಯಡಿ ಹರದನಹಳ್ಳಿ ಉಪವಿಭಾಗಕ್ಕೆ ಒಳಪಡುವ (ಬಿಳಗಿರಿ ರಂಗನಾಥ ಹುಲಿ ಸಂರಕ್ಷಣಾ ವಿಭಾಗ) ಮೊಣಕೈಪೋಡು, ಬೇಡುಗುಳಿ, ಮಾರಿಗುಡಿ ಪೋಡು, ಕಾಡಿಗೆರೆ ಮತ್ತು ಬಂಡಿಗೆರೆ ಹಾಡಿಗಳಲ್ಲಿರುವ ೩೬೫ ಮನೆಗಳಿಗೆ ಸಂಪ್ರದಾಯಿಕ ವಿದ್ಯುತ್ ಜಾಲದಿಂದ ಭೂಮಿಯೊಳಗೆ ಕೇಬಲ್ ಅಳವಡಿಸಿ ವಿದ್ಯುತ್ ಸಂಪರ್ಕ ನೀಡಲಾಗುತ್ತದೆ. ಇದರಿಂದ ಹಾಡಿಗಳಲ್ಲಿ ವಾಸಿಸುವ ಬುಡಕಟ್ಟು ಜನರಿಗೆ ನಿರಂತರ ವಿದ್ಯುತ್ ನೀಡಬಹುದಾಗಿದೆ ಎಂದು ಹೇಳಿದರು.

ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದಿಂದ ೯.೪ ಕೋಟಿ ರು.ಗಲಿಗೆ ಟೆಂಡರ್ ನೀಡಲಾಗಿದೆ. ವಿದ್ಯುತ್ ಸಂಪರ್ಕ ಕಲ್ಪಿಸುವ ಕಾಮಗಾರಿಯನ್ನು ೬ ತಿಂಗಳೊಳಗಾಗಿ ಮುಕ್ತಾಯಗೊಳಿಸಲಾಗುವುದು. ಇಲ್ಲಿಯವರೆಗೂ ಹಾಡಿಗಳಿಗೆ ಸೋಲಾರ್‌ನಿಂದ ವಿದ್ಯುತ್ ಸಂಪರ್ಕ ನೀಡಲಾಗಿತ್ತು. ರಾತ್ರಿ ವೇಳೆ ಹಾಗೂ ಮಳೆ ನಿರಂತರವಾಗಿರುವ ಸಂದರ್ಭದಲ್ಲಿ ವಿದ್ಯುತ್ ಸಂಪರ್ಕ ನೀಡಲು ಸಾಧ್ಯವಾಗುತ್ತಿರಲಿಲ್ಲ. ಮುಖ್ಯಮಂತ್ರಿಗಳ ಆದೇಶದನ್ವಯ ಭೂಮಿಯೊಳಗೆ ಕೇಬಲ್ ಅಳವಡಿಸಿ ಸಂಪ್ರದಾಯಿಕ ವಿದ್ಯುತ್ ಜಾಲದಿಂದ ವಿದ್ಯುತ್ ಸಂಪರ್ಕ ನೀಡಲು ನಿಯಮಾನುಸಾರ ಕ್ರಮವಹಿಸಲಾಗಿದೆ ಎಂದರು.