ಸಾರಾಂಶ
ರಬಕವಿ-ಬನಹಟ್ಟಿ : ಅಧೋಗತಿಯತ್ತ ಸಾಗುತ್ತಿರುವ ನೇಕಾರರಿಗೆ ವಿದ್ಯುತ್ ಬಾಕಿ ಉಳಿಸಿಕೊಂಡಿರುವ ಕಂಟಕ ಎದುರಾಗಿದೆ. ಬಾಕಿ ಉಳಿಸಿಕೊಂಡ ಮನೆಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸುವಲ್ಲಿ ಹೆಸ್ಕಾಂ ಅಧಿಕಾರಿಗಳು ನಿರತರಾಗಿದ್ದು, ಕತ್ತಲೆಯಲ್ಲಿ ಕಾಲ ಕಳೆಯುವ ಆತಂಕ ಎದುರಾಗಿದೆ.
ವಿದ್ಯುತ್ ಬಾಕಿ ಹೇಗೆ?:
ಕಳೆದ ಏಪ್ರಿಲ್2023 ರಿಂದ ನೇಕಾರರಿಗೆ ಮೊದಲೇ ಇದ್ದ ಸಬ್ಸಿಡಿಯಂತೆ ಪ್ರತಿ ಯುನಿಟ್‌ನ ₹1.25 ವಿದ್ಯುತ್‌ಗೆ ಎಫ್‌ಎಸಿ(ಹೆಚ್ಚುವರಿ) ಬಿಲ್ ಮೂಲಕ ಬಿಲ್ ಪಾವತಿಯಾಗಿತ್ತು. ಸೆಪ್ಟೆಂಬರ್‌ವರೆಗೂ ಬಿಲ್ ಹೆಚ್ಚುವರಿಯಾಗಿದ್ದ ಕಾರಣ ರಾಜ್ಯದ ನೇಕಾರರು ಬಿಲ್ ಕಟ್ಟಿರಲಿಲ್ಲ. ನಂತರ ಅಕ್ಟೋಬರ್ ತಿಂಗಳಿಂದ ಸರ್ಕಾರದ ಪ್ರಣಾಳಿಕೆಯಂತೆ 10 ಎಚ್‌ಪಿವರೆಗೆ ಸಂಪೂರ್ಣ ಬಿಲ್ ಉಚಿತ, ನಂತರದ 20 ಎಚ್‌ಪಿವರೆಗಿನ ಬಳಕೆಗೆ ಪ್ರತಿ ಯುನಿಟ್‌ಗೆ ₹೧.೨೫ ಬಿಲ್ ಸಂದಾಯಸಬೇಕು ಎಂದು ಆದೇಶ ಹೊರಡಿಸಿತು.
ಆದರೆ, ಮುಂಚಿನ 6 ತಿಂಗಳಿನ ಬಾಕಿ ಮೊತ್ತ ಬಾಗಲಕೋಟೆ ₹5 ಕೋಟಿ, ಬೆಳಗಾವಿ ಜಿಲ್ಲೆಯಲ್ಲಿ ₹25 ಕೋಟಿ ಬಾಕಿಯಿತ್ತು. ತೀವ್ರ ಆರ್ಥಿಕ ಸಂಕಷ್ಟದಿಂದ ಅರ್ಧ ಬಿಲ್ ಪಾವತಿಸಲು ನೇಕಾರರಿಗೆ ಆಗಿರಲಿಲ್ಲ. ಇದರ ಕುರಿತು ಸಾಕಷ್ಟು ಹೋರಾಟ ನಡೆದು ಕೊನೆಗೂ ಕಂತುಗಳ ಮೂಲಕ ತುಂಬಲು ಅವಕಾಶ ನೀಡಿದಾಗ ಕೆಲ ನೇಕಾರರು ಬಿಲ್ ಪಾವತಿ ಮಾಡಿದ್ದರು. ಕೆಲವರಿಗೆ ಬಿಲ್ ಕಟ್ಟಲು ಸಾಧ್ಯವಾಗಿರಲಿಲ್ಲ. ಇದೀಗ ವಿದ್ಯುತ್ ಬಾಕಿ ಉಳಿಸಿಕೊಂಡವರ ಮನೆಗೆ ತೆರಳಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುತ್ತಿದೆ.
ಶಾಸಕರ ಮಧ್ಯಸ್ಥಿಕೆ ತೂಗುಗತ್ತಿಯಿಂದ ಪಾರು:
ಬನಹಟ್ಟಿಯ ಇಕ್ಬಾಲ್ ಜಮಖಂಡಿ ಎಂಬ ನೇಕಾರನ ಮನೆ ಸಂಪರ್ಕ ಕಡಿತಗೊಳಿಸುವಾಗ ತೇರದಾಳ ಶಾಸಕ ಸಿದ್ದು ಸವದಿಯವರ ಮಧ್ಯಸ್ಥಿಕೆಯಿಂದ ಸಮಯಾವಕಾಶ ನೀಡಿದ್ದು, ಸರ್ಕಾರದ ಪ್ರಣಾಳಿಕೆಯಂತೆ ಏಪ್ರಿಲ್ ತಿಂಗಳಿನಿಂದಲೇ ಜಾರಿಗೊಳಿಸಿದರೆ ಬಾಕಿ ತುಂಬುವ ಪ್ರಮೇಯವೇ ಬರುತ್ತಿರಲಿಲ್ಲ. ವಿನಾಕಾರಣ 6 ತಿಂಗಳ ಬಿಲ್ ನೇಕಾರರು ಕಟ್ಟಬೇಕಾದ ಸ್ಥಿತಿ ಎದುರಾಗಿದೆ ಎಂದು ಶಾಸಕರು ಸರ್ಕಾರದ ವಿರುದ್ಧ ಬೇಸರ ಹೊರಹಾಕಿದರು.
ಈ ಕುರಿತು ಇಂಧನ ಸಚಿವರೊಂದಿಗೆ ಮಾತನಾಡಿ ಪರಿಹಾರ ಕಂಡುಕೊಳ್ಳುವುದಾಗಿ ತಿಳಿಸಿ, ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ದೂರವಾಣಿಯಲ್ಲಿ ಮಾತನಾಡಿ ಸದ್ಯ ನೇಕಾರರ ಬಾಕಿ ಮೊತ್ತದ ಶೇ.೫೦ರಷ್ಟು ಹಣವನ್ನು ಕಂತುಗಳ ರೂಪದಲ್ಲಿ ಹಣ ಪಾವತಿಸಿಕೊಂಡು ಸಹಕರಿಸಬೇಕೆಂದರು.
ಇದಕ್ಕೆ ಹೆಸ್ಕಾಂ ಅಧಿಕಾರಿಗಳು ಸ್ಪಂದಿಸಿದ್ದರಿಂದ ವಿದ್ಯುತ್ ಕಟ್ ಮಾಡುವ ಪ್ರಕ್ರಿಯೆಗೆ ತಾತ್ಕಾಲಿಕ ಬ್ರೇಕ್ ಬಿದ್ದಿದೆ.
ಮೊದಲೇ ನೇಕಾರರ ಪರಿಸ್ಥಿತಿ ಚಿಂತಾಜನಕವಾಗಿದೆ. ವಿದ್ಯುತ್ ಕಡಿತದಂತಹ ಕಾರ್ಯಕ್ಕೆ ಸರ್ಕಾರ ಇಳಿಯಬಾರದು. ಸೂಕ್ತ ನಿರ್ಧಾರಕ್ಕೆ ನಾವೂ ಬದ್ಧರಿದ್ದೇವೆ. ಮಾತುಕತೆ ಮೂಲಕ ಪರಿಹರಿಸೋಣ.’
-ಶಿವನಿಂಗ ಟಿರ್ಕಿ, ಅಧ್ಯಕ್ಷರು, ನೇಕಾರ ಸೇವಾ ಸಂಘ