ಸಾರಾಂಶ
ರಾಜ್ಯದಲ್ಲಿ ವಿದ್ಯುತ್‌ಗೆ ಕೊರತೆ ಇಲ್ಲ. ಹೀಗಾಗಿ ನಿರ್ವಹಣೆ ಸಂದರ್ಭ ವಿದ್ಯುತ್ ಕಡಿತ ಬಿಟ್ಟರೆ ನಿರಂತರವಾಗಿ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ಶೇ. 65ರಷ್ಟು ನವೀಕರಿಸಬಹುದಾದ ಇಂಧನ ಮೂಲಗಳಿಂದಲೇ ವಿದ್ಯುತ್ ಸಿಗುತ್ತಿದೆ.
ಧಾರವಾಡ: ವಾಸಯೋಗ್ಯ ಹಾಗೂ ಮುಕ್ತಾಯ ಪ್ರಮಾಣಪತ್ರ ಇಲ್ಲದ ಮನೆ ಅಥವಾ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಕುರಿತಂತೆ ಸಾರ್ವಜನಿಕರಿಂದ ತೀವ್ರ ಒತ್ತಡಗಳು ಬರುತ್ತಿದ್ದು, ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಸೂಕ್ತ ತೀರ್ಮಾನ ತೆಗೆದುಕೊಳ್ಳುವುದಾಗಿ ಇಂಧನ ಸಚಿವ ಕೆ.ಜೆ. ಜಾರ್ಜ್ ಹೇಳಿದರು.
ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ಬಗ್ಗೆ ಕಾನೂನು ತಜ್ಞರ ಅಭಿಪ್ರಾಯ ಪಡೆದು ಕಳೆದ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗಿದೆ. ಬರುವ ಕ್ಯಾಬಿನೆಟ್ ಸಭೆಯಲ್ಲಿ ತೀರ್ಮಾನ ಪ್ರಕಟಿಸಲಾಗುವುದು ಎಂದರು.ವಿದ್ಯುತ್‌ಗೆ ಕೊರತೆ ಇಲ್ಲ: ರಾಜ್ಯದಲ್ಲಿ ವಿದ್ಯುತ್‌ಗೆ ಕೊರತೆ ಇಲ್ಲ. ಹೀಗಾಗಿ ನಿರ್ವಹಣೆ ಸಂದರ್ಭ ವಿದ್ಯುತ್ ಕಡಿತ ಬಿಟ್ಟರೆ ನಿರಂತರವಾಗಿ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ಶೇ. 65ರಷ್ಟು ನವೀಕರಿಸಬಹುದಾದ ಇಂಧನ ಮೂಲಗಳಿಂದಲೇ ವಿದ್ಯುತ್ ಸಿಗುತ್ತಿದೆ. ಶರಾವತಿ ಪಂಪ್ ಸ್ಟೋರೇಜ್ ಯೋಜನೆ ಜಾರಿಗೊಳಿಸುವ ಮೂಲಕ 3,000 ಮೆಘಾ ವ್ಯಾಟ್ ವಿದ್ಯುತ್ ಉತ್ಪಾದನೆ ಗುರಿ ಇಟ್ಟುಕೊಳ್ಳಲಾಗಿದೆ. ಇದಕ್ಕೆ 120 ಎಕರೆ ಜಮೀನು ಬೇಕಾಗಲಿದ್ದು, ಒಳಗಡೆ ಕೇಬಲ್ ಅಳವಡಿಸಿ ಈ ಭೂಮಿಯಲ್ಲಿ ಅರಣ್ಯ ಬೆಳೆಸಲಾಗುವುದು. ನಂತರ ವರಾಹಿ ನದಿಗೂ ಪಂಪ್ ಸ್ಟೋರೇಜ್ ವಿದ್ಯುತ್ ಉತ್ಪಾದನೆ ಮಾಡುವ ಆಲೋಚನೆ ಸರ್ಕಾರಕ್ಕಿದೆ ಎಂದರು.