ವಿದ್ಯುತ್ ಸದ್ಬಳಕೆಯಾದರೆ ಮಿತ್ರ, ದುರ್ಬಳಕೆಯಾದರೆ ಶತ್ರು: ಜಯಪ್ಪ

| Published : Jul 05 2025, 12:18 AM IST

ವಿದ್ಯುತ್ ಸದ್ಬಳಕೆಯಾದರೆ ಮಿತ್ರ, ದುರ್ಬಳಕೆಯಾದರೆ ಶತ್ರು: ಜಯಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ವಿದ್ಯುತ್ ಸದ್ಬಳಕೆ ಮಾಡಿಕೊಂಡರೆ ಉತ್ತಮ ಮಿತ್ರನಂತೆ. ಆದರೆ ದುರ್ಬಳಕೆ ಮಾಡಿಕೊಂಡರೆ ಮರಣ ತರುವ ಶತ್ರುವೂ ಆಗಬಲ್ಲದು ಎಂದು ಹೊನ್ನಾಳಿ ಬೆಸ್ಕಾಂ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಜಯಪ್ಪ ಹೇಳಿದ್ದಾರೆ.

- ವಿದ್ಯುತ್ ಸುರಕ್ಷತಾ ಸಪ್ತಾಹದಲ್ಲಿ ಬೆಸ್ಕಾಂ ಎಇಇ ಜಯಪ್ಪ

- - -

ಕನ್ನಡಪ್ರಭ ವಾರ್ತೆ ಹೊನ್ನಾಳಿ

ವಿದ್ಯುತ್ ಸದ್ಬಳಕೆ ಮಾಡಿಕೊಂಡರೆ ಉತ್ತಮ ಮಿತ್ರನಂತೆ. ಆದರೆ ದುರ್ಬಳಕೆ ಮಾಡಿಕೊಂಡರೆ ಮರಣ ತರುವ ಶತ್ರುವೂ ಆಗಬಲ್ಲದು ಎಂದು ಹೊನ್ನಾಳಿ ಬೆಸ್ಕಾಂ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಜಯಪ್ಪ ಹೇಳಿದರು.

ರಾಷ್ಟ್ರೀಯ ವಿದ್ಯುತ್ ಸುರಕ್ಷತಾ ಸಪ್ತಾಹ ಅಂಗವಾಗಿ ಬುಧವಾರ ತಾಲೂಕಿನ ಸುಂಕದಕಟ್ಟೆ ಸಮೀಪದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ವಿದ್ಯುತ್ ಸುರಕ್ಷತಾ ಸಪ್ತಾಹ- 2025ರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿದ್ಯುತ್ ಬಳಕೆ ಬಗ್ಗೆ ಗ್ರಾಹಕರು, ವಿದ್ಯಾರ್ಥಿಗಳು, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಬೆಸ್ಕಾಂ ವತಿಯಿಂದ ಜೂ.26ರಿಂದ ಜುಲೈ 3ರವರೆಗೆ ತಾಲೂಕಿನಾದ್ಯಂತ ಪ್ರತಿ ಹಳ್ಳಿಗಳಲ್ಲಿ ವಿದ್ಯುತ್ ಸಿಬ್ಬಂದಿ ಮೂಲಕ ಜಾಗೃತಿ ಜಾಥಾ ನಡೆಸಲಾಗುತ್ತಿದೆ. ಇದರ ಜೊತೆಗೆ ವಿಶೇಷವಾಗಿ ಶಾಲಾ- ಕಾಲೇಜುಗಳಿಗೆ ಭೇಟಿ ನೀಡಿ ವಿದ್ಯುತ್ ಸುರಕ್ಷಿತ ಬಳಕೆ ಕುರಿತು ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.

ಜಿಲ್ಲಾ ವಿದ್ಯುತ್ ಪರಿವೀಕ್ಷಕರಾದ ರಾಧಾ ಮಾತನಾಡಿ, ಜಿಲ್ಲೆಯಲ್ಲಿ ಈ ವರ್ಷದಲ್ಲಿ 85ಕ್ಕೂ ಹೆಚ್ಚಿನ ವಿದ್ಯುತ್ ಅವಘಡಗಳಾಗಿವೆ. ಇದಕ್ಕೆ ಬಹುಮುಖ್ಯ ಕಾರಣ ವಿದ್ಯುತ್ ಸುರಕ್ಷಿತ ಬಳಕೆ ಅರಿವು ಅಥವಾ ಜ್ಞಾನವಿಲ್ಲದೇ ಇರುವುದು. ಇಲಾಖೆ ಸಚಿತ್ರಗಳ ಮೂಲಕ ಜನರು ಎಚ್ಚರಿಕೆ ವಹಿಸುವಂತೆ ತಿಳಿಸುತ್ತಲೇ ಇದೆ. ಆದರೂ, ವಿದ್ಯುತ್ ಅವಘಡಗಳು ಕಡಿಮೆ ಆಗುತ್ತಿಲ್ಲ. ಈ ಹಿನ್ನೆಲೆ ವಿದ್ಯಾರ್ಥಿಗಳು ಸಹ ವಿದ್ಯುತ್ ಸುರಕ್ಷಿತ ಬಳಕೆ ಬಗ್ಗೆ ಇಲಾಖೆ ನೀಡುವ ಮಾಹಿತಿಗಳನ್ನು ತಿಳಿದುಕೊಂಡು ಕುಟುಂಬ, ಗ್ರಾಮಗಳಲ್ಲಿ ಜಾಗೃತಿ ಮೂಡಿಸಬೇಕು ಎಂದರು.

ವಿದ್ಯುತ್ ಪರಿವೀಕ್ಷಕ ಬಾಬೂ ಸಾಬ್ ದೇಸಾಯಿ ಮಾತನಾಡಿ, ವಿದ್ಯುತ್ ಉತ್ಪಾದನೆಯಿಂದ ಹಿಡಿದು ಅದರ ನಿರ್ವಹಣೆ ಹಾಗೂ ಗ್ರಾಹಕರಿಗೆ ತಲುಪಿಸುವ ಎಲ್ಲ ಹಂತಗಳ ಬಗ್ಗೆ ವಿದ್ಯಾರ್ಥಿಗಳಿಗೆ ವಿವರಿಸಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಟಾಕಪ್ಪ ಜೌವ್ಙಾಣ್ ಮಾತನಾಡಿದರು. ಬೆಸ್ಕಾಂ ಅಧಿಕಾರಿಗಳಾದ ಹಾಲೇಶಪ್ಪ, ರುದ್ರೇಶಪ್ಪ, ಕಾಲೇಜಿನ ಉಪನ್ಯಾಸಕ ದೊಡ್ಡಸ್ವಾಮಿ, ಮಾಲತಿ ಜಿ.ಆರ್. ವೀರಭದ್ರ, ಉಪನ್ಯಾಸಕರು, ಲೈನ್ ಮ್ಯಾನ್‌ಗಳು, ವಿದ್ಯಾರ್ಥಿಗಳು ಇದ್ದರು.

- - -

-2ಎಚ್.ಎಲ್.ಐ1.ಜೆಪಿಜಿ:

ವಿದ್ಯುತ್ ಸುರಕ್ಷತಾ ಬಳಕೆ ಕುರಿತು ಹೊನ್ನಾಳಿ ಬೆಸ್ಕಾಂ ಎಇಇ ಜಯಪ್ಪ ಮಾತನಾಡಿದರು, ರಾಧಾ, ಬಾಬೂ ಸಾಬ್ ದೇಸಾಯಿ, ಟಾಕಪ್ಪ ಚೌವ್ಙಾಣ್ ಇತರರು ಇದ್ದರು.