ಸಾರಾಂಶ
ಮನುಕುಲದ ಅವಶ್ಯಕತೆಗಳಲ್ಲಿ ವಿದ್ಯುತ್ ಶಕ್ತಿ ಭದ್ರತೆ ತುಂಬಾ ಮಹತ್ವದಾಯಕವಾಗಿದೆ ಎಂದು ಜಿಲ್ಲಾಧಿಕಾರಿ ಡಾ. ವಿಜಯ ಮಹಾಂತೇಶ ದಾನಮ್ಮನವರ ಹೇಳಿದರು.
ಹಾವೇರಿ: ಮನುಕುಲದ ಅವಶ್ಯಕತೆಗಳಲ್ಲಿ ವಿದ್ಯುತ್ ಶಕ್ತಿ ಭದ್ರತೆ ತುಂಬಾ ಮಹತ್ವದಾಯಕವಾಗಿದೆ ಎಂದು ಜಿಲ್ಲಾಧಿಕಾರಿ ಡಾ. ವಿಜಯ ಮಹಾಂತೇಶ ದಾನಮ್ಮನವರ ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ಆಯೋಜಿಸಲಾಗಿದ ಪಿಎಂ ಸೂರ್ಯ ಘರ್ ಯೋಜನೆಗಳ ಅನುಷ್ಠಾನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಭಾರತ ಸರ್ಕಾರದ ನವ ಮತ್ತು ನವೀಕರಿಸಬಹುದಾದ ಇಂಧನ ಮಂತ್ರಾಲಯ ವತಿಯಿಂದ ಅನುಷ್ಠಾನಗೊಳಿಸುತ್ತಿರುವ ಪಿಎಂ ಸೂರ್ಯ ಘರ್ ಅಡಿಯಲ್ಲಿ ಬರುವ ಮುಫ್ತ್ ಬಿಜಲಿ ಯೋಜನೆ ಹಾಗೂ ಮಾದರಿ ಸೋಲಾರ್ ಗ್ರಾಮ ಯೋಜನೆಗಳ ಉಪಯುಕ್ತತೆ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.ಜಿಲ್ಲೆಯಲ್ಲಿರುವ ಎಲ್ಲ ಸರ್ಕಾರಿ ಇಲಾಖೆಗಳ ಸ್ವಂತ ಕಟ್ಟಡಗಳ ಮೇಲೆ ಸೋಲಾರ್ ಘಟಕಗಳನ್ನು ಸ್ಥಾಪಿಸಿಕೊಳ್ಳಬೇಕು. ಇದರಿಂದ ಕಚೇರಿಗೆ ಪ್ರತಿ ತಿಂಗಳು ಬರುವ ವಿದ್ಯುತ್ ಬಿಲ್ ಹೊರೆ ತಪ್ಪಿಸಲು ಸಾಧ್ಯವಾಗುತ್ತದೆ ಎಂದರು.
ಸರ್ಕಾರದ ಮಹತ್ವಕಾಂಕ್ಷಿ ಮತ್ತೊಂದು ಯೋಜನೆಯಾದ ಸೌರ ಗ್ರಾಮ ಯೋಜನೆಯನ್ನು ಗ್ರಾಮೀಣ ಪ್ರದೇಶಗಳಲ್ಲಿ ಪರಿಣಾಮಕಾರಿಯಾಗಿ ಜಾರಿಗೆ ತರಲು ಕ್ರಮವಹಿಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. ಜನರಿಗೆ ಸೌರ ಗ್ರಾಮ ಯೋಜನೆಯ ಉಪಯುಕ್ತತೆ ಮನವರಿಕೆ ಮಾಡಿಕೊಡಬೇಕು. ಈ ಯೋಜನೆಯ ಸಬ್ಸಿಡಿ ಸೌಲಭ್ಯವನ್ನು ಉಪಯೋಗಿಸಿಕೊಂಡು ತಮ್ಮ ತಮ್ಮ ಮನೆಗಳ ಮೇಲೆ ಸೌರ ಘಟಕಗಳನ್ನು ನಿರ್ಮಿಸಿಕೊಂಡು ವಿದ್ಯುತ್ ಸ್ವಾವಲಂಬಿಗಳಾಗಬೇಕು ಎಂದರು.ಹೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್ ಸಿ.ಬಿ. ಹೊಸಮನಿ ಪ್ರಧಾನಮಂತ್ರಿ ಸೂರ್ಯ ಘರ್, ಬಿಜಲಿ ಯೋಜನೆ, ಮಾದರಿ ಸೌರ ಗ್ರಾಮ ಯೋಜನೆಗಳ ಉಪಯುಕ್ತತೆಯ ಕುರಿತು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ಎಲ್. ನಾಗರಾಜ್, ಜಿಲ್ಲಾ ನಗರಭಿವೃದ್ಧಿ ಕೋಶ ಯೋಜನಾಧಿಕಾರಿ ಮಮತಾ, ಜಿಲ್ಲಾ ಮಟ್ಟದ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.