ಸಾರಾಂಶ
ರವಿ ಕಾಂಬಳೆ
ಕನ್ನಡಪ್ರಭ ವಾರ್ತೆ ಹುಕ್ಕೇರಿಜೀವನದ ಜಂಜಾಟ ಮತ್ತು ಕಚೇರಿಯ ಕಡತಗಳ ವಿಲೇವಾರಿಯಲ್ಲಿ ತೊಡಗಿಸಿಕೊಂಡು ಒತ್ತಡದ ಜೀವನ ಅನುಭವಿಸುತ್ತಿರುವ ಜಿಲ್ಲೆಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ನೌಕರರಲ್ಲಿ ನವಚೈತನ್ಯ ಮತ್ತು ಹೊಸ ಹುರುಪು ತುಂಬಲು ಬೆಳಗಾವಿ ಜಿಲ್ಲಾ ಪಂಚಾಯತಿ ಮಹತ್ವದ ಹೆಜ್ಜೆ ಇಟ್ಟಿದೆ. ಇದರೊಂದಿಗೆ ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದ ಮುನ್ನವೇ ನೌಕರರಲ್ಲಿ ಹೊಸ ಹುರುಪು ತುಂಬಲು ಮುಂದಾಗಿದೆ.ಹೌದು, ಸಾರ್ವಜನಿಕರು ಮತ್ತು ಸರ್ಕಾರಿ ಕೆಲಸ ನಿರ್ವಹಿಸಿ ಸುಸ್ತಾಗುತ್ತಿರುವ ಆರ್‌ಡಿಪಿಆರ್ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಮಾನಸಿಕ ಸ್ಥಿಮಿತ ಕಾಯ್ದುಕೊಳ್ಳುವುದರ ಜತೆಗೆ ತಮ್ಮಲ್ಲಿರುವ ವಿವಿಧ ರೀತಿಯ ಕ್ರೀಡೆ ಮತ್ತು ಸಾಂಸ್ಕೃತಿಕ ಪ್ರತಿಭೆಗಳ ಅನಾವರಣಕ್ಕೆ ಬೆಳಗಾವಿ ಜಿಲ್ಲಾ ಪಂಚಾಯತಿ ಸೂಕ್ತ ವೇದಿಕೆ ಕಲ್ಪಿಸಿದೆ.ರಾಜ್ಯದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಎನ್ನುವಂತೆ ಬೆಳಗಾವಿ ಜಿಲ್ಲಾ ಪಂಚಾಯತಿ ಸಿಇಒ ರಾಹುಲ್ ಶಿಂಧೆ ಸಾರಥ್ಯದಲ್ಲಿ ಮೂರು ದಿನಗಳ ಕಾಲ ಆರ್‌ಡಿಪಿಆರ್ ಇಲಾಖೆಯು ತನ್ನ ನೌಕರರಿಗೆ ಪ್ರತ್ಯೇಕವಾಗಿ ಕ್ರೀಡಾ ಮತ್ತು ಸಾಂಸ್ಕೃತಿಕ ಹಬ್ಬ-2024 ಆಯೋಜಿಸಲಾಗಿದೆ. ತನ್ಮೂಲಕ ವಿನೂತನ ಮತ್ತು ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದು, ಬರುವ ಭವಿಷ್ಯದ ದಿನಗಳಲ್ಲಿ ಈ ಕ್ರೀಡೆ ಮತ್ತು ಹಬ್ಬ ರಾಜ್ಯದ ಎಲ್ಲ ಜಿಲ್ಲೆಗಳಿಗೂ ವಿಸ್ತರಣೆಯಾಗುವ ಸಾಧ್ಯತೆ ಹೆಚ್ಚಿದೆ.ಬೆಳಗಾವಿ ನಗರದ ಹೊರವಲಯದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿಟಿಯು)ದ ಮೈದಾನದಲ್ಲಿ ಇದೇ ತಿಂಗಳು ನ.29, 30 ಮತ್ತು ಡಿ.1 ರಂದು ಮೂರು ದಿನಗಳ ಕಾಲ ಈ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ಮೇಳೈಸಲಿವೆ. ಜೊತೆಗೆ ಮೂರು ದಿನಗಳ ಕಾಲ ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳ ಸೊಬಗು ಮೂಡಿಬರಲಿವೆ.ಈಗಾಗಲೇ ಜಿಲ್ಲೆಯ 15 ತಾಲೂಕುಗಳಲ್ಲಿ ಪ್ರಾಯೋಗಿಕವಾಗಿ ವಿವಿಧ ಕ್ರೀಡೆಗಳ ಮೂಲಕ ಆಯ್ಕೆಯಾದ ಅರ್ಹ ತಂಡಗಳು ಈ ಜಿಲ್ಲಾ ಮಟ್ಟದಲ್ಲಿ ಭಾಗವಹಿಸಲಿವೆ. ಪ್ರಥಮ ಮತ್ತು ದ್ವಿತೀಯ ಸ್ಥಾನ ವಿಜೇತರಿಗೆ ಪ್ರಶಂಸನಾ ಪತ್ರ, ಟ್ರೋಫಿ ನೀಡಲಾಗುವುದು. ದೂರದ ತಾಲೂಕುಗಳ ಕ್ರೀಡಾಳುಗಳು ಮತ್ತು ಮಹಿಳೆಯರಿಗೆ ವಾಸ್ತವ್ಯದ ವ್ಯವಸ್ಥೆ ಕಲ್ಪಿಸಲಾಗಿದೆ.ಪುರುಷ ಮತ್ತು ಮಹಿಳೆಯರಿಗೆ ಅಥ್ಲೆಟಿಕ್ಸ್, ಹಗ್ಗಜಗ್ಗಾಟ ಸ್ಪರ್ಧೆಗಳನ್ನು ಆಯೋಜಿಸಿದ್ದರೆ, ಪುರುಷರಿಗಾಗಿ ಕ್ರಿಕೆಟ್, ಕಬಡ್ಡಿ, ವಾಲಿಬಾಲ್ ಪಂದ್ಯ ನಡೆಯಲಿವೆ. ಇನ್ನು ಮಹಿಳೆಯರಿಗೆ ಥ್ರೋಬಾಲ್ ಏರ್ಪಡಿಸಲಾಗಿದೆ. ಜೊತೆಗೆ ಪುರುಷ ಮತ್ತು ಮಹಿಳಾ ಸಿಬ್ಬಂದಿಗೆ ಏಕಪಾತ್ರಾಭಿನಯ, ಜಾನಪದ ಗೀತೆ, ಭಾವಗೀತೆ, ಮಿಮಿಕ್ರಿ, ಸಂಗೀತ ವಾದ್ಯ ನುಡಿಸುವುದು, ನೃತ್ಯ ಹಾಗೂ ರಂಗಕಲೆ ಸೇರಿದಂತೆ ಇತರೆ ಸಾಂಸ್ಕತಿಕ ಕಾರ್ಯಕ್ರಮ ನಡೆಯಲಿವೆ.
ಆರ್‌ಡಿಪಿಆರ್ ನೌಕರರ ಒತ್ತಡ ನಿವಾರಣೆ ಮತ್ತು ನೌಕರರಲ್ಲಿ ಹೊಸ ಚೈತನ್ಯ, ಹುರುಪು ತುಂಬಲು ಬೆಳಗಾವಿ ಆರ್‌ಡಿಪಿಆರ್ ಕ್ರೀಡಾ ಮತ್ತು ಸಾಂಸ್ಕೃತಿಕ ಹಬ್ಬ-2024 ಆಯೋಜಿಸಲಾಗಿದೆ. ಪಂದ್ಯಾವಳಿ ಯಶಸ್ವಿಗೆ ಬೇಕಾದ ಅಗತ್ಯ ವ್ಯವಸ್ಥೆ ಮತ್ತು ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.-ರಾಹುಲ್ ಶಿಂಧೆ,
ಸಿಇಒ ಜಿಪಂ ಬೆಳಗಾವಿ. ಬೇರೆ ಇಲಾಖೆಗಳಿಗಿಂತ ಆರ್‌ಡಿಪಿಆರ್ ನೌಕರರಿಗೆ ಹೆಚ್ಚಿನ ಒತ್ತಡವಿದ್ದು ಸರ್ಕಾರ ಮತ್ತು ಸಾರ್ವಜನಿಕರ ನಡುವಿನ ಸಂಪರ್ಕದ ಮೊದಲ ಕೊಂಡಿಯಂತೆ ಕರ್ತವ್ಯ ನಿರ್ವಹಿಸುತ್ತಾರೆ. ಈ ನೌಕರರಿಗೆ ಪ್ರೇರೇಪಣೆ ನೀಡಿ ಮಾನಸಿಕವಾಗಿ ಸದೃಢಗೊಳ್ಳಲು ಈ ಕಾರ್ಯಕ್ರಮ ಮತ್ತಷ್ಟು ಪೂರಕವಾಗಲಿದೆ.-ಟಿ.ಆರ್.ಮಲ್ಲಾಡದ,
ಇಒ ತಾಪಂ ಹುಕ್ಕೇರಿ.