ದೇಶಾಭಿಮಾನ ಹೆಚ್ಚಿಸಿದ ತಿಂಗಳ ಸೊಬಗು

| Published : Aug 14 2024, 12:45 AM IST

ಸಾರಾಂಶ

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸಾಂಸ್ಕೃತಿಕ ಸಮುಚ್ಚಯ ನಿರ್ವಹಣಾ ಸಮಿತಿಯಿಂದ ಹಮ್ಮಿಕೊಂಡಿದ್ದ ತಿಂಗಳ ಸೊಬಗು ಸಾಂಸ್ಕೃತಿಕ ಕಾರ್ಯಕ್ರಮ ಜನರಲ್ಲಿ ದೇಶಾಭಿಮಾನದ ಕಿಚ್ಚುಹಚ್ಚಲು ಪ್ರೇರೇಪಿಸಿತು.

ಬಳ್ಳಾರಿ: ಹರ್ ಘರ್ ತಿರಂಗಾ ಅಭಿಯಾನ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸಾಂಸ್ಕೃತಿಕ ಸಮುಚ್ಚಯ ನಿರ್ವಹಣಾ ಸಮಿತಿಯಿಂದ ಹಮ್ಮಿಕೊಂಡಿದ್ದ “ತಿಂಗಳ ಸೊಬಗು” ಸಾಂಸ್ಕೃತಿಕ ಕಾರ್ಯಕ್ರಮ ಜನರಲ್ಲಿ ದೇಶಾಭಿಮಾನದ ಕಿಚ್ಚುಹಚ್ಚಲು ಪ್ರೇರೇಪಿಸಿತು.

ನಗರದ ಡಾ. ರಾಜಕುಮಾರ್ ರಸ್ತೆಯ ಸಾಂಸ್ಕೃತಿಕ ಸಮುಚ್ಛಯ ಆವರಣದ ನಾಡೋಜ ಸುಭದ್ರಮ್ಮ ಮನ್ಸೂರು ಬಯಲು ರಂಗಮಂದಿರದಲ್ಲಿ ಸೋಮವಾರ ಸಂಜೆ ದೇಶಭಕ್ತಿಯ ಕಲರವವಿತ್ತು.

ಒಂದೆಡೆ ದೇಶಭಕ್ತಿಗೀತೆಗಳ ಗಾಯನಕ್ಕೆ ತಕ್ಕಂತೆ ಚಿಣ್ಣರು ಹಾಗೂ ಯುವಕರು ನೃತ್ಯ ಪ್ರದರ್ಶಿಸಿ, ಪ್ರೇಕ್ಷಕರು ರಾಷ್ಟ್ರಭಕ್ತಿಯಿಂದ ಮೈ ಮರೆಯುವಂತೆ ಮಾಡಿದರೆ, ಮತ್ತೊಂದೆಡೆ ಬಯಲಾಟ ಕಲಾವಿದರು ರಾಮಾಯಣ ದೃಶ್ಯಗಳ ಮೂಲಕ ಮನ ರಂಜಿಸಿದರು.

ಬಳ್ಳಾರಿಯ ಮೂನ್ ವಾಕರ್ಸ್ ಸಾಂಸ್ಕೃತಿಕ ಕಲಾ ಸಂಘದ ದೇಶಭಕ್ತಿ ಗೀತೆಗಳ ಸಮೂಹ ನೃತ್ಯಕ್ಕೆ ಹಿರಿಯರು- ಕಿರಿಯರೆನ್ನದೇ ಪ್ರತಿಯೊಬ್ಬರು ದೇಶಾಭಿಮಾನದಲ್ಲಿ ಲೀನವಾಗಿದ್ದರು.

ಬಳಿಕ ಬಳ್ಳಾರಿ ತಾಲೂಕಿನ ಶಂಕರಬಂಡೆ ಗ್ರಾಮದ ಪಿ.ಹೊನ್ನೂರ್‌ಸಾಬ್ ಮತ್ತು ಸಂಗಡಿಗರಿಂದ ಜರುಗಿದ “ರಾಮಾಯಣ” ಬಯಲಾಟ ಸನ್ನಿವೇಶಗಳು ಕಲಾ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾದವು.

ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಎಲ್ಲರನ್ನೂ ಆಕರ್ಷಿಸಿತು. ದೇಶಭಕ್ತಿ ಗೀತೆಗಳ ಗಾಯನ ಮತ್ತು ಸಂಗೀತಕ್ಕೆ ತಕ್ಕಂತೆ ಹೆಜ್ಜೆ ಹಾಕಿದ ಚಿಣ್ಣರ ಕಲಾನೃತ್ಯಕ್ಕೆ ಕಲಾಭಿಮಾನಿಗಳು ಚಪ್ಪಾಳೆಯ ಸುರಿಮಳೆಗೈದರು.

ಕಾರ್ಯಕ್ರಮ ಮುನ್ನ ಪ್ರಾಸ್ತಾವಿಕ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ನಾಗರಾಜ ಅವರು, ತಿಂಗಳ ಸೊಬಗು ಕಾರ್ಯಕ್ರಮದ ವಿಶೇಷ ಹಾಗೂ ಈ ತಿಂಗಳು ಜರುಗುವ ಸ್ವಾತಂತ್ರ್ಯೋತ್ಸವ ಹಿನ್ನೆಲೆಯಲ್ಲಿ ಹಮ್ಮಿಕೊಂಡಿರುವ ದೇಶಭಕ್ತಿ ಮೂಡಿಸುವ ಸಾಂಸ್ಕೃತಿಕ ಚಟುವಟಿಕೆಗಳ ಕುರಿತು ವಿವರಿಸಿದರು.

ಸಾಂಸ್ಕೃತಿಕ ಸೊಬಗು ಸವಿಯಲು ಅಪರ ಜಿಲ್ಲಾಧಿಕಾರಿ ಮಹಮ್ಮದ್ ಎನ್. ಝುಬೇರ್ ಸೇರಿದಂತೆ ಅಧಿಕಾರಿಗಳು, ಇಲಾಖೆಯ ಸಿಬ್ಬಂದಿ ಹಾಗೂ ನಗರವಾಸಿಗಳು ಉಪಸ್ಥಿತರಿದ್ದರು.