ಸಾರಾಂಶ
ವಿಘ್ನೇಶ್ ಎಂ. ಭೂತನಕಾಡು
ಕನ್ನಡಪ್ರಭ ವಾರ್ತೆ ಮಡಿಕೇರಿದುಬಾರೆ ಸಾಕಾನೆ ಶಿಬಿರದಲ್ಲಿ ಪಳಗುತ್ತಿರುವ ಬಭ್ರುವಾಹನ (ಕರಡಿ) ಹಾಗೂ ರಾಜನ್(ಸೀಗೆಗುಡ್ಡ) ಆನೆಗಳು ಈಗಾಗಲೇ ಕ್ರಾಲ್‌ನಲ್ಲಿ ಪಳಗುತ್ತಿದ್ದು, ಇನ್ನು ಕೆಲವೇ ದಿನಗಳಲ್ಲಿ ಕ್ರಾಲ್‌ನಿಂದ ಹೊರ ಬರಲಿವೆ. ಮಳೆ ಕಾರಣದಿಂದ ಈ ಪ್ರಕ್ರಿಯೆ ಸ್ವಲ್ಪ ವಿಳಂಬವಾಗಲಿದೆ.
ಈಗಾಗಲೇ ಈ ಎರಡೂ ಆನೆಗಳು ಕೂಡ ಮಾವುತರ ಶಿಸ್ತಿನ ಪಾಠ ಕಲಿತಿದ್ದು, ಕ್ರಾಲ್ ನಿಂದ ಹೊರ ಬರಲು ಸಜ್ಜಾಗಿವೆ. ಸೆರೆ ಹಿಡಿಯುವ ವೇಳೆ ಭಾರಿ ಆವೇಶ ಹಾಗೂ ಸಿಟ್ಟಿನಿಂದ ಇದ್ದ ಈ ಕಾಡಾನೆಗಳು, ಈಗ ಶಾಂತ ರೂಪಕ್ಕೆ ಬದಲಾಗಿವೆ.ಹಾಸನ ಜಿಲ್ಲೆಯಲ್ಲಿ ಭಾರಿ ಉಪಟಳ ನೀಡುತ್ತಿದ್ದ ಬಲಿಷ್ಠ ಕಾಡಾನೆ ಕರಡಿಯನ್ನು(ಮೊದಲ ಹೆಸರು) ಕಳೆದ ಮೂರು ತಿಂಗಳ ಹಿಂದೆ ಕ್ಯಾಪ್ಟನ್ ಅಭಿಮನ್ಯು ನೇತೃತ್ವದಲ್ಲಿ ಭೀಮ, ಹರ್ಷ, ಪ್ರಶಾಂತ, ಸುಗ್ರೀವ, ಧನಂಜಯ, ಅಶ್ವತ್ಥಾಮ ಹಾಗೂ ಮಹೀಂದ್ರ ಆನೆಗಳ ನೆರವಿನಿಂದ ಬೇಲೂರು ತಾಲೂಕಿನ ವಾಟೇಹಳ್ಳಿಯ ಐಬಿಸಿ ಕಾಫಿ ತೋಟದಲ್ಲಿ ಸೆರೆ ಹಿಡಿಯಲಾಗಿತ್ತು. ಇದಕ್ಕೆ ಈಗ ಬಭ್ರುವಾಹನ ಎಂದು ಅರಣ್ಯ ಇಲಾಖೆ ಈಗ ನಾಮಕರಣ ಮಾಡಿದೆ.
ಬಭ್ರುವಾಹನ ಆನೆಗೆ 35 ವರ್ಷ ಪ್ರಾಯವಾಗಿದೆ. ಕರಿಯಣ್ಣ ಇದರ ಮಾವುತರಾಗಿ ಕಳೆದ ಮೂರು ತಿಂಗಳಿಂದ ಈ ಆನೆಯನ್ನು ನಿರಂತರವಾಗಿ ಪಳಗಿಸುತ್ತಿದ್ದಾರೆ. ರಾಜನ್ ಆನೆಗೆ 24 ವರ್ಷ ವಯಸ್ಸಾಗಿದ್ದು, ಚಂದ್ರ ಮಾವುತರಾಗಿ ಕೆಲಸ ಮಾಡುತ್ತಿದ್ದಾರೆ.ಕಳೆದ ಏಪ್ರಿಲ್ ತಿಂಗಳಲ್ಲಿ ಹಾಸನ ಜಿಲ್ಲೆಯಲ್ಲಿ ಸೀಗೆಗುಡ್ಡ ಹೆಸರಿನ ಕಾಡಾನೆಯನ್ನು ಸೆರೆ ಹಿಡಿಯಲಾಗಿತ್ತು. ಈ ಆನೆ ಸಕಲೇಶಪುರ ಭಾಗದಲ್ಲಿ ಜನರಿಗೆ ಹಾಗೂ ಕೃಷಿ ಜಮೀನಿಗೆ ತೆರಳಿ ಹೆಚ್ಚಿನ ಉಪಟಳ ನೀಡುತ್ತಿತ್ತು. ಈ ಹಿನ್ನೆಲೆಯಲ್ಲಿ ಅಂದು ಸಾಕಾನೆಗಳಿಂದ ಸೆರೆ ಹಿಡಿಯಲಾಗಿತ್ತು. ಇದಕ್ಕೆ ರಾಜನ್ ಎಂದು ಇಲಾಖೆಯಿಂದ ಹೆಸರಿಡಲಾಗಿತ್ತು. ಈ ಎರಡೂ ಆನೆಗಳಿಗೆ ಕೂಡ ಪ್ರತಿ ದಿನ 30 ಕೆ.ಜಿ ಭತ್ತ, 300 ಕೆ.ಜಿ. ಸೊಪ್ಪುಗಳನ್ನು ನೀಡಲಾಗುತ್ತಿದೆ.
ಇದೀಗ ಹೆಚ್ಚು ಮಳೆಯಾಗುತ್ತಿದೆ. ಆದ್ದರಿಂದ ಮಳೆ ಮುಗಿದ ನಂತರ ಈ ಎರಡು ಆನೆಗಳು ಪಳಗಿ ಕ್ರಾಲ್‌ನಿಂದ ಹೊರ ಬರಲಿವೆ. ಈಗಾಗಲೇ ಪಶು ವೈದ್ಯಾಧಿಕಾರಿ ಚಿಟ್ಟಿಯಪ್ಪ ಕೂಡ ಆನೆಗಳನ್ನು ಪರಿಶೀಲಿಸಿದ್ದು, ಆನೆಯನ್ನು ಹೊರ ಬಿಡಬಹುದು ಎಂದು ಹೇಳಿದ್ದಾರೆ. ಸಾಕಾನೆಗಳು ನಿಂತು ಆನೆಗಳನ್ನು ಹೊರ ತೆಗೆಯಬೇಕಾಗಿದ್ದು, ಮಳೆ ಹಿನ್ನೆಲೆಯಲ್ಲಿ ಸಮಸ್ಯೆಯಾಗಿದೆ ಎಂದು ಅರಣ್ಯಾಧಿಕಾರಿಗಳು ಹಾಗೂ ಅಲ್ಲಿನ ಸಿಬ್ಬಂದಿ ಹೇಳುತ್ತಾರೆ.ಆರಂಭದಲ್ಲಿ ರಂಪಾಟ:
ದುಬಾರೆಗೆ ಆಗಮಿಸಿದ ಬಭ್ರುವಾಹನ ಹಾಗೂ ರಾಜನ್ ಆನೆಗಳು ಕ್ರಾಲ್ ನಲ್ಲಿ ಒಳಗಿದ್ದ ಸಂದರ್ಭ ಆರಂಭದಲ್ಲಿ ಭಾರಿ ರಂಪಾಟ ನಡೆಸಿದ್ದವು. ಈ ಸಂದರ್ಭ ಸಾಕಾನೆಗಳಾದ ಪ್ರಶಾಂತ, ಹರ್ಷ ಆನೆಗಳನ್ನು ಕ್ರಾಲ್ ಸಮೀಪ ಒಂದು ವಾರ ಕಟ್ಟಿ ಹಾಕಿ ಸಮಾಧಾನ ಪಡಿಸಲಾಗುತ್ತಿತ್ತು. ರಾಜನ್ ಆನೆ ಕ್ರಾಲ್ ನಿಂದ ಕಾಲನ್ನು ಮೇಲೆತ್ತಿ ಏರಲು ಪ್ರಯತ್ನಿಸುತ್ತಿತ್ತು. ಆರಂಭದಲ್ಲಿ ತುಂಬಾ ತೊಂದರೆ ಮಾಡುತ್ತಿತ್ತು. ಈಗ ಬಹುತೇಕ ಪಳಗಿವೆ ಎನ್ನುತ್ತಾರೆ ಅಧಿಕಾರಿಗಳು.ಆನೆ ಸೆರೆಗೆ ಬಳಕೆ:
ಕಾಡಾನೆ ಸೆರೆ ಕಾರ್ಯಾಚರಣೆಯಲ್ಲಿ ಈಗ ಪ್ರಶಾಂತ ಆನೆ ಮುಂಚೂಣಿಯಲ್ಲಿದೆ. ಆದ್ದರಿಂದ ಈ ಆನೆಯ ಸ್ಥಾನ ತುಂಬಲು ಬಭ್ರುವಾಹನನನ್ನು ತಯಾರಿಗೊಳಿಸಲು ಅರಣ್ಯ ಇಲಾಖೆ ಚಿಂತನೆ ನಡೆಸಿದೆ. ಈಗ ಕ್ರಾಲ್ ನಲ್ಲಿ ಪಳಗುತ್ತಿರುವ ಈ ಎರಡೂ ಆನೆಗಳನ್ನು ಕೂಡ ಮುಂದಿನ ದಿನಗಳಲ್ಲಿ ಕಾಡಾನೆ ಸೆರೆ ಕಾರ್ಯಾಚರಣೆಗಳಿಗೆ ಬಳಕೆ ಮಾಡಲು ತರಬೇತಿ ನೀಡಲಾಗುತ್ತದೆ. ಭೀಷ್ಮ ಹಾಗೂ ಮಾರ್ತಾಂಡ ಆನೆಗಳೊಂದಿಗೆ ಈ ಆನೆಗಳು ಕೂಡ ಪಾಲ್ಗೊಳ್ಳಲಿವೆ.ಅಲ್ಲದೆ ಮುಂಬರುವ ವರ್ಷಗಳಲ್ಲಿ ಮೈಸೂರು ದಸರಾ ಉತ್ಸವಕ್ಕೆ ಭಾಗವಹಿಸುವಂತೆ ಈ ಆನೆಗಳನ್ನು ಸಜ್ಜುಗೊಳಿಸಲಾಗುತ್ತದೆ ಎಂದು ಅಲ್ಲಿನ ಅಧಿಕಾರಿಗಳು ಹೇಳುತ್ತಾರೆ.
................ಈ ಎರಡೂ ಆನೆಗಳು ನಮ್ಮ ಶಿಬಿರದಲ್ಲಿ ಈಗಾಗಲೇ ಮೂರು ತಿಂಗಳಿಂದ ಕ್ರಾಲ್‌ನಲ್ಲಿ ಪಳಗುತ್ತಿವೆ. ಮಾವುತನ ಮಾತುಗಳನ್ನು ಕೇಳಲಾರಂಭಿಸಿದೆ. ಆನೆಗೆ ಯಾವುದೇ ಗಾಯ ಇಲ್ಲ, ಆರೋಗ್ಯಕರವಾಗಿದೆ. ಮಳೆ ಕಳೆದ ನಂತರ ಎರಡೂ ಆನೆಗಳನ್ನು ಹೊರಬಿಡಲು ಸಿದ್ಧತೆ ಮಾಡಲಾಗುತ್ತಿದೆ.
-ಡೋಬಿ, ಹಿರಿಯ ಮಾವುತ ದುಬಾರೆ ಸಾಕಾನೆ ಶಿಬಿರ..............ದುಬಾರೆಯಲ್ಲಿ ಪಳಗುತ್ತಿರುವ ಬಭ್ರುವಾಹನ ಹಾಗೂ ರಾಜನ್ ಆನೆಗಳನ್ನು ಕೆಲವೇ ದಿನಗಳಲ್ಲಿ ಕ್ರಾಲ್‌ನಿಂದ ಹೊರ ಬಿಡಲಾಗುವುದು. ಇಲಾಖೆಯ ಮೇಲಾಧಿಕಾರಿಗಳು ಈ ಬಗ್ಗೆ ಸೂಚನೆ ನೀಡುತ್ತಾರೆ. ಅದಾದ ಬಳಿಕ ಹೊರ ಬಿಡಲಾಗುವುದು.
-ಧರ್ಮೇಂದ್ರ, ಅರಣ್ಯಾಧಿಕಾರಿ.