ಕಾಡುಪ್ರಾಣಿಗಳ ಹಾವಳಿ ನಿಯಂತ್ರಣಕ್ಕೆ ಎಲಿಫ್ಯಾಂಟ್ ಬ್ಯಾರಿಕೇಡ್ಸ್‌

| Published : Oct 17 2023, 12:45 AM IST

ಕಾಡುಪ್ರಾಣಿಗಳ ಹಾವಳಿ ನಿಯಂತ್ರಣಕ್ಕೆ ಎಲಿಫ್ಯಾಂಟ್ ಬ್ಯಾರಿಕೇಡ್ಸ್‌
Share this Article
  • FB
  • TW
  • Linkdin
  • Email

ಸಾರಾಂಶ

ಕನಕಪುರ: ತಾಲೂಕು ಸೇರಿದಂತೆ ರಾಮನಗರ ಜಿಲ್ಲೆಯನ್ನು ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಮಾದರಿ ಜಿಲ್ಲೆ ಹಾಗೂ ತಾಲೂಕನ್ನಾಗಿ ಮಾಡಲು ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಎಂದು ಸಂಸದ ಡಿ.ಕೆ.ಸುರೇಶ್ ತಿಳಿಸಿದರು.
ಕನಕಪುರ: ತಾಲೂಕು ಸೇರಿದಂತೆ ರಾಮನಗರ ಜಿಲ್ಲೆಯನ್ನು ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಮಾದರಿ ಜಿಲ್ಲೆ ಹಾಗೂ ತಾಲೂಕನ್ನಾಗಿ ಮಾಡಲು ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಎಂದು ಸಂಸದ ಡಿ.ಕೆ.ಸುರೇಶ್ ತಿಳಿಸಿದರು. ತಾಲೂಕಿನ ಗಡಿಭಾಗದ ಹೊನ್ನಿಗನಹಳ್ಳಿ ಮತ್ತು ಕಾಡಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನ ಸಂಪರ್ಕ ಸಭೆಯಲ್ಲಿ ಸಾರ್ವಜನಿಕರ ಕುಂದು ಕೊರತೆ ಅಹವಾಲು ಸ್ವೀಕರಿಸಿ ಮಾತನಾಡಿದ ಅವರು, ಕಾಡುಪ್ರಾಣಿಗಳ ಹಾವಳಿ ನಿಯಂತ್ರಣಕ್ಕೆ ಎಲಿಫ್ಯಾಂಟ್ ಬ್ಯಾರಿಕೇಡ್ ಮಾಡಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಉಪಮುಖ್ಯಮಂತ್ರಿಗಳು ಮತ್ತು ಅರಣ್ಯ ಇಲಾಖೆ ಸಚಿವರೊಂದಿಗೆ ಚರ್ಚಿಸಿ 100 ಕೋಟಿ ಅನುದಾನಕ್ಕೆ ಬೇಡಿಕೆ ಇಡಲಾಗಿತ್ತು. ಆದರೆ 40 ಕೋಟಿ ಮಂಜೂರು ಮಾಡುವ ಭರವಸೆ ನೀಡಿ, ಎಸ್ಟಿಮೇಟ್ ಮಾಡಲು ತಿಳಿಸಿದ್ದು ಸದ್ಯದಲ್ಲೇ 30ರಿಂದ 35 ಕಿ.ಮೀ. ಎಲಿಫ್ಯಾಂಟ್ ಬ್ಯಾರಿಕೇಡ್ ಆಗಲಿದೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಬಾಕಿ ಉಳಿದಿರುವ ಕಾಮಗಾರಿ ಪೂರ್ಣಗೊಳಿಸುತ್ತೇವೆ ಎಂದು ತಿಳಿಸಿದರು. ಸೋಲಿಗೇರಿ ಸೋಂಬಾಪುರ ಕುರಿ ಮಂದೆ ಗ್ರಾಮದಲ್ಲಿ ಸಾಗುವಳಿ ಮಾಡುತ್ತಿದ್ದವರನ್ನು ಗುರುತಿಸಿ ಸುಮಾರು 100 ಜನರಿಗೆ 2ರಿಂದ 3 ಎಕರೆ ಭೂಮಿ ಮಂಜೂರು ಮಾಡಲು ಚರ್ಚಿಸಿದ್ದೇವೆ. ಹಂತ ಹಂತವಾಗಿ ಸಮಸ್ಯೆ ಬಗೆಹರಿಸುವ ಕೆಲಸ ಮಾಡುತ್ತೇವೆ. ಕಾಡಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಕಾಂಕ್ರೀಟ್ ರಸ್ತೆಗೆ 5 ಕೋಟಿ ರು. ಮೀಸಲಿಡಲಾಗಿದೆ. ಸಂಪೂರ್ಣವಾಗಿ ಕಾಂಕ್ರೀಟ್ ರಸ್ತೆ ಮಾಡಬೇಕಾದರೆ 15 ಕೋಟಿ ಅಗತ್ಯವಿದೆ. ಮೊದಲನೇ ಹಂತದಲ್ಲಿ 5 ಕೋಟಿ ಪಂಚಾಯಿತಿಗೆ ಒದಗಿಸಲಾಗುವುದು. ಪಿಡಬ್ಲ್ಯೂಡಿ ಮತ್ತು ಜಿಪಂ ಅನುದಾನದಿಂದಲೂ ಕೆಲವು ರಸ್ತೆ ಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಹೇಳಿದರು. ಸಾಗುವಳಿ ಚೀಟಿ ಪಡೆದಿರುವವರಿಗೆ ಪೋಡಿ ಖಾತೆ ತಿದ್ದುಪಡಿ ಮಾಡಿಕೊಡಲು ಕಾರ್ಯಕ್ರಮ ರೂಪಿಸಿದ್ದೇವೆ. ಪ್ರತಿ ಪಂಚಾಯತಿ ಮಟ್ಟದಲ್ಲಿ ಕಂದಾಯ ಅದಾಲತ್ ಮಾಡಿ ಈ ಎಲ್ಲ ಸಮಸ್ಯೆಗಳನ್ನು ಬಗೆಹರಿಸುವಂತೆ ಈಗಾಗಲೇ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ನಿವೇಶನಕ್ಕೆ ಹಾಕಿಕೊಂಡಿರುವ ಅರ್ಜಿಗಳನ್ನು ಪರಿಶೀಲಿಸಿ ಕೆಮ್ಮಾಳೆ ಗ್ರಾಮದ ಬಳಿ ಸ್ಥಳ ಗುರುತಿಸಿದ್ದೇವೆ. ಜನವರಿ ವೇಳೆಗೆ ಸಾತನೂರು ಮತ್ತು ಹೊನ್ನಿಗನಹಳ್ಳಿ ಗ್ರಾಪಂ ವ್ಯಾಪ್ತಿಯ 1 ಸಾವಿರ ನಿವೇಶನ ಹಂಚಿಕೆ ಮಾಡಲಾಗುವುದು. ಗೋಮಾಳ ಗ್ರಾಮಠಾಣಾ ಹೊರಗೆ ಮತ್ತು ಒಳಗೆ ಮನೆ ನಿರ್ಮಿಸಿಕೊಂಡವರಿಗೆ ಹಕ್ಕು ಪತ್ರ ಮತ್ತು ಇ- ಸ್ವತ್ತು ಮಾಡಲು ಜಿಲ್ಲಾಡಳಿತ ಸಿದ್ಧವಾಗಿದೆ. ನೀವು ಯಾರಿಗೂ ಹಣ ಕೊಟ್ಟು ಪೋಡಿ ಮತ್ತು ಈ ಸ್ವತ್ತು ಮಾಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ಹೇಳಿದರು. ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ರವಿ, ಆರ್‌ಇಎಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಶ್ರೀಕಂಠು, ಹೊನ್ನಿಗನಹಳ್ಳಿ ಗ್ರಾಪಂ ಅಧ್ಯಕ್ಷೆ ಶ್ವೇತಾ, ಉಪಾಧ್ಯಕ್ಷ ಲಿಂಗಪ್ಪ, ಮುಖಂಡ ವಿಜಯ್, ದಿಲೀಪ್, ಶಂಕರ್, ತಹಸೀಲ್ದಾರ್ ಸ್ಮಿತಾ, ಇಒ ಬೈರಪ್ಪ, ಕಾಡಹಳ್ಳಿ ಗ್ರಾಪಂ ಅಧ್ಯಕ್ಷೆ ಸುಂದರಮ್ಮ, ಮುಖಂಡ ಉಮೇಶ್, ವಿಶ್ವನಾಥ್‌ ಸೇರಿದಂತೆ ಕಾಂಗ್ರೆಸ್ ಮುಖಂಡರು, ಗ್ರಾಪಂ ಸದಸ್ಯರು, ವಿವಿಧ ಇಲಾಖೆ ಅಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು. ಕೆ ಕೆ ಪಿ ಸುದ್ದಿ 04: ಕನಕಪುರ ತಾಲೂಕಿನ ಕಾಡಹಳ್ಳಿ ಗ್ರಾಮದಲ್ಲಿ ಸಾರ್ವಜನಿಕರ ಕುಂದು ಕೊರತೆ ಅಹವಾಲು ಸ್ವೀಕಾರ ಸಭೆಯಲ್ಲಿಸಂಸದ ಡಿ.ಕೆ.ಸುರೇಶ್ ಮಾತನಾಡಿದರು.