ಕಾನೂರು ಗ್ರಾಮ ಪಂಚಾಯಿತಿ ಗುಂಡ್ವಾನಿ ಕಾಡಿನಲ್ಲಿ ತುಂಟ ಆನೆ ಸೆರೆ

| Published : Oct 07 2025, 01:02 AM IST

ಕಾನೂರು ಗ್ರಾಮ ಪಂಚಾಯಿತಿ ಗುಂಡ್ವಾನಿ ಕಾಡಿನಲ್ಲಿ ತುಂಟ ಆನೆ ಸೆರೆ
Share this Article
  • FB
  • TW
  • Linkdin
  • Email

ಸಾರಾಂಶ

ನರಸಿಂಹರಾಜಪುರ, ಕಳೆದ ಒಂದೂವರೆ ವರ್ಷದಿಂದ ಕಾನೂರು ಗ್ರಾಮ ಪಂಚಾಯಿತಿಯ ಸಂಕ್ಸೆ, ಕಾನೂರು ಗ್ರಾಮ, ಬಾಳೆ ಗ್ರಾಮ ಪಂಚಾಯಿತಿಯ ವಗಡೆ ಸುತ್ತಮುತ್ತ ಜಮೀನಿಗೆ ನುಗ್ಗಿ ಬೆಳೆ ಹಾನಿ ಮಾಡುತ್ತಿದ್ದ ಒಂಟಿ ಸಲಗವನ್ನು ಅರಣ್ಯ ಇಲಾಖೆಯವರು ಸೋಮವಾರ ಕಾರ್ಯಾಚರಣೆ ನಡೆಸಿ ಯಶಸ್ವಿಯಾಗಿ ಸೆರೆ ಹಿಡಿದಿದ್ದಾರೆ.

- ಗ್ರಾಮದಲ್ಲೇ ಉಳಿದಿದ್ದ ಒಂಟಿ ಸಲಗ । ಬೆಳಿಗ್ಗೆ 9 ರಿಂದ 3 ಗಂಟೆವರೆಗೆ ಕಾರ್ಯಾಚರಣೆ । ಶಾಸಕ ಟಿ.ಡಿ.ರಾಜೇಗೌಡ ಸ್ಥಳಕ್ಕೆ ಭೇಟಿ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಕಳೆದ ಒಂದೂವರೆ ವರ್ಷದಿಂದ ಕಾನೂರು ಗ್ರಾಮ ಪಂಚಾಯಿತಿಯ ಸಂಕ್ಸೆ, ಕಾನೂರು ಗ್ರಾಮ, ಬಾಳೆ ಗ್ರಾಮ ಪಂಚಾಯಿತಿಯ ವಗಡೆ ಸುತ್ತಮುತ್ತ ಜಮೀನಿಗೆ ನುಗ್ಗಿ ಬೆಳೆ ಹಾನಿ ಮಾಡುತ್ತಿದ್ದ ಒಂಟಿ ಸಲಗವನ್ನು ಅರಣ್ಯ ಇಲಾಖೆಯವರು ಸೋಮವಾರ ಕಾರ್ಯಾಚರಣೆ ನಡೆಸಿ ಯಶಸ್ವಿಯಾಗಿ ಸೆರೆ ಹಿಡಿದಿದ್ದಾರೆ.

6 ಆನೆಗಳ ಸಹಕಾರ

ಕೊಪ್ಪ ಉಪ ಅರಣ್ಯ ಸಂರಕ್ಷಣಾಧಿಕಾರಿ ಇ. ಶಿವಶಂಕರ್ ಮಾರ್ಗದರ್ಶನದಲ್ಲಿ ತುಂಟ ಒಂಟಿ ಸಲಗವನ್ನು ಹಿಡಿಯಲು ಶಿವಮೊಗ್ಗದ ಸಕ್ರೆ ಬೈಲಿನ 3 ಆನೆ ಹಾಗೂ ಕುಶಾಲನಗರದ ದುಬಾರೆಯ 3 ಆನೆಗಳನ್ನು ಕರೆಸಲಾಗಿತ್ತು. ನರಸಿಂಹರಾಜಪುರ ಹಾಗೂ ಆಲ್ದರದ ಎಲಿಫೆಂಟ್ ಟಾಸ್ಕ್ ಪೋರ್ಸ್ ಸಿಬ್ಬಂದಿ, ಸ್ಥಳೀಯ ಅರಣ್ಯ ಇಲಾಖೆ ಸಿಬ್ಬಂದಿ ಸೇರಿ 100 ಹೆಚ್ಚು ಅರಣ್ಯ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಶನಿವಾರ ಸಂಜೆಯೇ 6 ಆನೆಗಳು ಗುಡ್ಡೇಹಳ್ಳದ ಸರ್ಕಾರಿ ಶಾಲೆ ಮೈದಾನಕ್ಕೆ ಬಂದು ವಾಸ್ತವ್ಯ ಹೂಡಿದ್ದವು. ಭಾನುವಾರ ಬೆಳಿಗ್ಗೆಯಿಂದಲೇ ಕಾರ್ಯಾಚರಣೆ ಪ್ರಾರಂಭಿಸಲಾಗಿತ್ತು. ಆದರೆ, ಒಂಟಿ ಸಲಗ ಹೊಳೆಕೊಪ್ಪ ಸಮೀಪದ ಕುರಿಗುಡ್ಡ ಏರಿ ಬಿಟ್ಟಿದ್ದರಿಂದ ಅಲ್ಲಿ ಕಾರ್ಯಾಚರಣೆ ಸಾಧ್ಯವಾಗದೆ ಭಾನುವಾರ ಸಂಜೆ 4 ಗಂಟೆಗೆ ಕಾರ್ಯಾಚರಣೆ ಸ್ಥ ಗಿತಗೊಳಿಸಲಾಯಿತು. ಮತ್ತೆ ಸೋಮವಾರ ಮುಂಜಾನೆ 4 ಗಂಟೆಯಿಂದಲೇ ಅರಣ್ಯ ಸಿಬ್ಬಂದಿ, ಸಾಕಿದ ಆನೆಗಳು ಒಟ್ಟಾಗಿ ಒಂಟಿ ಸಲಗ ಇರುವ ಜಾಗ ಹುಡುಕಿ ಸಂಕ್ಸೆ ಗ್ರಾಮದ ಗುಂಡ್ವಾನಿ ಸಮೀಪದ ಕಾಡಿನಲ್ಲಿ ಕಾರ್ಯಾಚರಣೆ ನಡೆಸಿದರು. ಬೆಳಿಗ್ಗೆ 9 ಗಂಟೆಗೆ ಒಂಟಿ ಸಲಗ ಇರುವ ಜಾಗದ ಸುತ್ತ ಮುತ್ತಲಿನ ಜಾಗದಲ್ಲಿ ಸಾಕಿದ ಆನೆಗಳನ್ನು ತಂದು ನಿಲ್ಲಿಸಲಾಯಿತು. ನಂತರ ಮಡಕೇರಿಯಿಂದ ಬಂದಿದ್ದ ಮುಖ್ಯ ಪಶು ವೈದ್ಯಾಧಿಕಾರಿ ಡಾ.ಮಸೀದ್ ನೇತೃತ್ವದಲ್ಲಿ ದುಬಾರೆಯಿಂದ ಬಂದಿದ್ದ ಶಾರ್ಪ್ ಶೂಟರ್ ರಂಜನ್ ಸಲಗಕ್ಕೆ ಮಂಪರು ಔಷಧಿ ನೀಡುವಲ್ಲಿ ಯಶಸ್ವಿಯಾದರು.

ಮಂಪರಿನಲ್ಲಿದ್ದ ಒಂಟಿ ಸಲಗದ ಕಾಲುಗಳನ್ನು ಹಗ್ಗದಿಂದ ಕಟ್ಟಿ ಲಾರಿ ಬರುವ ರಸ್ತೆವರೆಗೆ ಆನೆಗಳ ಸಹಾಯದಿಂದ ಕರೆ ತರಲಾಯಿತು. ನಂತರ ಕ್ರೇನ್‌ ಸಹಾಯದಿಂದ ಕಾಲು ಕಟ್ಟಿದ ಎತ್ತಿ ಲಾರಿಗೆ ಹತ್ತಿಸಲಾಯಿತು. ಒಂಟಿ ಸಲಗವನ್ನು ಶೃಂಗೇರಿ ವಲಯ ಅರಣ್ಯಾಧಿಕಾರಿ ಮಧುಕರ ನೇತೃತ್ವದಲ್ಲಿ ಕುಶಾಲನಗರ ದುಬಾರೆ ಕ್ಯಾಂಪಿಗೆ ಕಳುಹಿಸಲಾಯಿತು.

ಕಾಟ ಕೊಡುತ್ತಿದ್ದ ಒಂಟಿ ಸಲಗ: ಕಾನೂರು ಗ್ರಾಪಂ ಸದಸ್ಯ ಹಾಗೂ ಕೃಷಿಕ ಮನೋಹರ ಕನ್ನಡಪ್ರಭದೊಂದಿಗೆ ಮಾತನಾಡಿ, ಸಂಕ್ಸೆ ಗ್ರಾಮದ ಗುಡ್ಡೇಹಳ್ಳ, ಗುಂಡ್ವಾನಿ, ನೇರ್ಲೆ, ಕಾಸನ,ಚಿಟ್ಟಿ ಕೊಡಿಗೆ,ಬಾಳೆಹಿತ್ತಲು ಮುಂತಾದ ಗ್ರಾಮಗಳಲ್ಲಿ ಈ ಒಂಟಿ ಸಲಗ ಕಾಟ ಕೊಡುತ್ತಿತ್ತು. 2024 ರ ಜುಲೈನಲ್ಲಿ ಈ ಒಂಟಿ ಸಲಗ ಸಂಕ್ಸೆ ಗ್ರಾಮಕ್ಕೆ ಬಂದಿದ್ದು ಮತ್ತೆ ಹೋಗಿಲ್ಲ. ಅಡಕೆ, ಭತ್ತ, ತೆಂಗು ಹಾಗೂ ಬಾಳೆ ತೋಟವನ್ನು ನಿರಂತರವಾಗಿ ಹಾಳು ಮಾಡುತ್ತಿತ್ತು. ಆದರೆ, ಗ್ರಾಮಸ್ಥರಿಗೆ ಏನು ಅಪಾಯ ಮಾಡಿಲ್ಲ. ರೈತರು ಐಬೆಕ್ಸ್ ಬೇಲಿ ಮಾಡಿದ್ದರೂ ಬೇಲಿ ತುಂಡು ಮಾಡಿ ಜಮೀನಿಗೆ ನುಗ್ಗುತ್ತಿತ್ತು. ಹಾಗಾಗಿ ಸಲಗ ಹಿಡಿಯಲು ಶಾಸಕ ಟಿ.ಡಿ.ರಾಜೇಗೌಡರಿಗೆ ಮನವಿ ಮಾಡಿದ್ದೆವು ಎಂದರು.

ಒಂಟಿ ಸಲಗ ಹಿಡಿಯುವ ಕಾರ್ಯಾಚರಣೆಯಲ್ಲಿ ಕೊಪ್ಪ ಡಿಎಫ್.ಓ ಇ.ಶಿವಶಂಕರ್, ಕೊಪ್ಪ ಎಸಿ.ಫ್ ಬಾಬು ರಾಜೇಂದ್ರ ಪ್ರಸಾದ್, ಬಾಳೆಹೊನ್ನೂರು ಎಸಿಎಫ್ ಮೋಹನ್ ಕುಮಾರ್, ಚಿಕ್ಕಅಗ್ರಹಾರ ವಲಯ ಅರಣ್ಯಾಧಿಕಾರಿ ಎಂ.ಪಿ.ಆದರ್ಶ, ನ.ರಾ.ಪುರ ವಲಯ ಅರಣ್ಯಾಧಿಕಾರಿ ಪ್ರವೀಣ್, ಕುದುರೆಗುಂಡಿ ಉಪ ವಲಯ ಅರಣ್ಯಾಧಿಕಾರಿ ರಂಗನಾಥ ಅತಾಲಟಿ, ಕಾನೂರು ಗಸ್ತು ಅರಣ್ಯ ಪಾಲಕ ಮಂಜುನಾಥ ಕುಲಾಲ್ ಮತ್ತಿತರರು ಪಾಲ್ಗೊಂಡಿದ್ದರು.

-- ಬಾಕ್ಸ್--

ಕಾವಾಡಿಗನಿಗೆ ಆನೆ ಸೊಂಡಿಲು ತಾಗಿ ಗಾಯ ದುಬಾರೆಯಿಂದ ಆನೆ ಜೊತೆ ಬಂದಿದ್ದ ಕಾವಾಡಿಗ ತೌಫಿಕ್ ಗೆ ಒಂಟಿ ಸಲಗದ ಸೊಂಡಿಲು ತಾಗಿ ಮುಖಕ್ಕೆ ಸಣ್ಣ ಮಟ್ಟದ ಪೆಟ್ಟಾಯಿತು. ಸ್ಥಳದಲ್ಲಿದ್ದ ವೈದ್ಯರು, ಸಿಬ್ಬಂದಿ ಅವರಿಗೆ ಉಪಚರಿಸಿ ಚಿಕಿತ್ಸೆ ನೀಡಿದರು. ಕಾಡಾನೆ ಹಿಡಿಯುವ ಕಾರ್ಯಾಚರಣೆ ವೀಕ್ಷಿಸಲು ಸಾವಿರಾರು ರೈತರು ಆಗಮಿಸಿದ್ದರು. ಆದರೆ, ಪೊಲೀಸರು ರಸ್ತೆಯಲ್ಲೇ ಬ್ಯಾರಿಕೇಡ್ ಹಾಕಿ ಬಿಗಿ ಬಂದೋಬಸ್ತು ಮಾಡಿದ್ದ ರಿಂದ ನೂರಾರು ಜನರು ಗುಡ್ಡೇಹಳ್ಳ ಮುಖ್ಯ ರಸ್ತೆಯಲ್ಲಿ ಕಾರ್ಯಾಚರಣೆ ನಂತರ ಲಾರಿಯಲ್ಲಿ ಹೋಗುವ ಆನೆ ಯನ್ನು ವೀಕ್ಷಿಸಿದರು.

-- ಬಾಕ್ಸ್ --

ಕಾರ್ಯಾಚರಣೆ ಯಶಸ್ವಿ: ಟಿ.ಡಿ.ರಾಜೇಗೌಡ

ಸ್ಥಳದಲ್ಲಿದ್ದ ಶಾಸಕ ಟಿ.ಡಿ.ರಾಜೇಗೌಡ 4 ಗಂಟೆಗಳ ಕಾಲ ಕಾರ್ಯಾಚರಣೆ ವೀಕ್ಷಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಕಾನೂರು, ಬಾಳೆ ಗ್ರಾಪಂನ 10 ಕಿ.ಮೀ. ವ್ಯಾಪ್ತಿಯ ಜಮೀನುಗಳಲ್ಲಿ ಈ ಒಂಟಿ ಸಲಗ ಭಾರೀ ಪ್ರಮಾಣದಲ್ಲಿ ಬೆಳೆ ಹಾನಿ ಮಾಡುತ್ತಿದೆ ಎಂದು ಗ್ರಾಮಸ್ಥರು ದೂರು ನೀಡಿದ್ದರು. ಚಿಕ್ಕಮಗಳೂರಿನಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಈ ವಿಷಯವನ್ನು ನಾನು ಪ್ರಸ್ತಾಪ ಮಾಡಿ ಜಿಲ್ಲಾ ಉಸ್ತುವಾರಿ ಸಚಿವ ಜಾರ್ಜ್ ಅವರಿಗೆ ಕಾಡಾನೆ ಹಿಡಿಯುವಂತೆ ಮನವಿ ಮಾಡಿದ್ದೆ. ಅರಣ್ಯ ಸಚಿವ ಈಶ್ವರ ಖಂಡ್ರೆ ಆನೆ ಹಿಡಿಯುವಂತೆ ಸೂಚಿಸಿದ್ದರು.ಅದರಂತೆ ಕೊಪ್ಪ ಡಿಎಫ್.ಓ ನೇತೃತ್ವದಲ್ಲಿ ಕಾರ್ಯಾಚರಣೆ ಯಶಸ್ವಿಯಾಗಿದೆ. ಗ್ರಾಮಸ್ಥರು ಸಹಕಾರ ನೀಡಿದ್ದಾರೆ ಎಂದರು.