ಸಾರಾಂಶ
ಬೆಂಗಳೂರು: ನೀಲಗಿರಿ ಶ್ರೇಣಿಯ ಸಂರಕ್ಷಿತ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿನ ಆನೆಗಳ ಅಂದಾಜು ಗಣತಿ ಕಾರ್ಯಕ್ಕೆ ಕೇರಳ, ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡು ಅರಣ್ಯ ಇಲಾಖೆಗಳು ಮುಂದಾಗಿದ್ದು, ಮೇ 23ರಿಂದ 25ರವರೆಗೆ ನಾಲ್ಕೂ ರಾಜ್ಯಗಳ ಗಡಿ ಪ್ರದೇಶದಲ್ಲಿನ ಆನೆಗಳ ಗಣತಿ ಕಾರ್ಯ ಆರಂಭಿಸಲಾಗುತ್ತಿದೆ.
ನೀಲಗಿರಿ ಶ್ರೇಣಿಯ ಸಂರಕ್ಷಿತ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ನಿರಂತರವಾಗಿ ನಡೆಯುತ್ತಿರುವ ಮಾನವ-ಆನೆ ಸಂಘರ್ಷ ತಡೆಗಾಗಿ ಕರ್ನಾಟಕ, ಕೇರಳ ಮತ್ತು ತಮಿಳುನಾಡು ರಾಜ್ಯಗಳ ಅರಣ್ಯ ಇಲಾಖೆಗಳು ಅಂತಾರಾಜ್ಯ ಸಮನ್ವಯ ಸಮಿತಿ (ಐಸಿಸಿ) ರಚಿಸಿವೆ. ಈ ಸಮಿತಿಯು ಕರ್ನಾಟಕ, ಕೇರಳ ಮತ್ತು ತಮಿಳುನಾಡು ಜತೆಗೆ ಆಂಧ್ರಪ್ರದೇಶದ ಗಡಿ ಭಾಗಗಳಲ್ಲಿನ ಆನೆಗಳ ಸಂಖ್ಯೆ ಸೇರಿದಂತೆ ಇನ್ನಿತರ ಅಂಶಗಳನ್ನು ಪತ್ತೆ ಮಾಡುವ ಕಾರ್ಯಕ್ಕೆ ಮುಂದಾಗಿವೆ. ಅಲ್ಲದೆ, ಆನೆ-ಮಾನವ ಸಂಘರ್ಷಕ್ಕೆ ಕಾರಣ ಹಾಗೂ ಅದರ ತಡೆಗೆ ಸೂಕ್ತ ಕ್ರಮ ಅಥವಾ ಯೋಜನೆ ರೂಪಿಸಲೂ ನಿರ್ಧರಿಸಲಾಗದೆ. ಅದರ ಭಾಗವಾಗಿ ಮೇ 23ರಿಂದ 24ರವರೆಗೆ ಸಂಯೋಜಿತ ಆನೆಗಳ ಸಂಖ್ಯೆಯನ್ನು ಪತ್ತೆ ಮಾಡಲು ಗಣತಿ ಕಾರ್ಯ ನಡೆಸಲಾಗುತ್ತಿದೆ.
ಪ್ರಮುಖವಾಗಿ ಕೋಲಾರ, ಕಾವೇರಿ ವನ್ಯಜೀವಿಧಾಮ, ಮಲೆಮಹದೇಶ್ವರ ಬೆಟ್ಟ ವನ್ಯಜೀವಿಧಾಮ, ಬಿಳಿಗಿರಿ ರಂಗ ದೇವಸ್ಥಾನ ಹುಲಿ ಸಂರಕ್ಷಿತ ಅರಣ್ಯ, ಬನ್ನೇರಘಟ್ಟ ರಾಷ್ಟ್ರೀಯ ಉದ್ಯಾನ, ಬಂಡೀಪುರ ಹುಲಿ ಸಂರಕ್ಷಿತ ತಾಣ, ನಾಗರಹೊಳೆ ಹುಲಿ ಸಂರಕ್ಷಿತ ತಾಣ, ಮಡಿಕೇರಿ ಪ್ರಾದೇಶಿಕ ಮತ್ತು ವನ್ಯಜೀವಿಧಾಮ, ವಿರಾಜಪೇಟೆ ವಿಭಾಗ ವ್ಯಾಪ್ತಿಯಲ್ಲಿ ಗಣತಿ ಕಾರ್ಯ ನಡೆಸಲಾಗುತ್ತದೆ. ಇದರಲ್ಲಿ 65 ಅರಣ್ಯ ವಲಯಗಳ 563 ಬೀಟ್‌ಗಳು ಮತ್ತು 1,689 ಮಾನವಶಕ್ತಿಯನ್ನು ತೊಡಗಿಸಿಕೊಳ್ಳಲಾಗುತ್ತಿದೆ.