ಆನೆ ದಿನಾಚರಣೆ ಸಂರಕ್ಷಣೆ ಸಂದೇಶ ಸಾರುವ ದಿನ

| Published : Aug 13 2025, 12:30 AM IST

ಆನೆ ದಿನಾಚರಣೆ ಸಂರಕ್ಷಣೆ ಸಂದೇಶ ಸಾರುವ ದಿನ
Share this Article
  • FB
  • TW
  • Linkdin
  • Email

ಸಾರಾಂಶ

ಆನೆ ಸಂರಕ್ಷಣೆ, ಮಾನವ- ಆನೆ ಸಂಘರ್ಷ ನಿರ್ವಹಣೆ ಮತ್ತು ಸಹಬಾಳ್ವೆಯ ಮಹತ್ವದ ಸಂದೇಶ ಸಾರುವ ಹಾಗೂ ಆನೆಗಳಿಗೆ ಗೌರವ ಸಲ್ಲಿಸುವ ದಿನ ‘ವಿಶ್ವ ಆನೆಗಳ ದಿನ’ ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕೆ.ಟಿ.ಹನುಮಂತಪ್ಪ ತಿಳಿಸಿದರು.

ಶಿವಮೊಗ್ಗ : ಆನೆ ಸಂರಕ್ಷಣೆ, ಮಾನವ- ಆನೆ ಸಂಘರ್ಷ ನಿರ್ವಹಣೆ ಮತ್ತು ಸಹಬಾಳ್ವೆಯ ಮಹತ್ವದ ಸಂದೇಶ ಸಾರುವ ಹಾಗೂ ಆನೆಗಳಿಗೆ ಗೌರವ ಸಲ್ಲಿಸುವ ದಿನ ‘ವಿಶ್ವ ಆನೆಗಳ ದಿನ’ ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕೆ.ಟಿ.ಹನುಮಂತಪ್ಪ ತಿಳಿಸಿದರು.

ಕರ್ನಾಟಕ ಅರಣ್ಯ ಇಲಾಖೆ, ಶಿವಮೊಗ್ಗ ವನ್ಯಜೀವಿ ವಿಭಾಗ, ಶಿವಮೊಗ್ಗ ವನ್ಯಜೀವಿ ಉಪ ವಿಭಾಗ ಸಕ್ರೆಬೈಲು ವನ್ಯಜೀವಿ ವಲಯ ಇವರ ವತಿಯಿಂದ ಮಂಗಳವಾರ ಸಕ್ರೆಬೈಲಿನಲ್ಲಿ ಏರ್ಪಡಿಸಿದ್ದ ವಿಶ್ವ ಆನೆ ದಿನಾಚರಣೆ-2025 ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಆನೆ ಬಿಡಾರದಲ್ಲಿ ಒಟ್ಟು 25 ಆನೆಗಳಿದ್ದು, 23 ಆನೆಗಳು ಪೂರ್ಣವಾಗಿ ಪಳಗಿವೆ. 3 ಆನೆಗಳನ್ನು ಸೆರೆ ಹಿಡಿದು ಕ್ರಾಲ್‌ಗಳಲ್ಲಿ ಪಳಗಿಸಲಾಗುತ್ತಿದೆ. ಪಳಗಿಸಿದ ಆನೆಗಳಲ್ಲಿ 16 ಗಂಡು 5 ಹೆಣ್ಣು ಮತ್ತು 1 ಮಕನ ಆನೆಗಳಿವೆ. ಪಳಗಿಸಿದ ಆನೆಗಳು ಆನೆ ಸೆರೆ ಕಾರ್ಯಾಚರಣೆ, ಉಪಟಳ ನೀಡುವ ಆನೆ ಹಿಮ್ಮೆಟ್ಟಿಸಲು ಹಾಗೂ ದಸರಾ ಉತ್ಸವದಲ್ಲಿ ಪಾಲ್ಗೊಳ್ಳುತ್ತವೆ. ಇಲ್ಲಿ ಚಾಣಾಕ್ಷ ಮಾವುತರು, ಸಿಬ್ಬಂದಿ ಇದ್ದಾರೆ ಎಂದು ತಿಳಿಸಿದರು.

ಮುಂದಿನ ದಿನಗಳಲ್ಲಿ ಆನೆಗಳ ಪ್ರಾಮುಖ್ಯತೆ, ಆನೆಗಳ ಸಾಧನೆಗಳು, ಕಾರ್ಯಾಚರಣೆಗಳು ಮತ್ತು ಅವುಗಳ ಇತಿಹಾಸ ಕುರಿತು ಮಾಹಿತಿಯುಳ್ಳ ನಾಮಫಲಕ ಅಳವಡಿಸುವ ಅಥವಾ ಮಾಹಿತಿ ಕೇಂದ್ರ ಸ್ಥಾಪಿಸುವ ಹಾಗೂ ವಿದ್ಯಾರ್ಥಿಗಳಿಗೆ ಪರಿಸರ, ಪ್ರಾಣಿಗಳು ಮಾನವ ಸಂಘರ್ಷ, ವನ್ಯಜೀವಿ ಸಂರಕ್ಷಣೆ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವ ಶೈಕ್ಷಣಿಕ ಕಾರ್ಯಕ್ರಮ ಮಾಡುವ ಯೋಜನೆ ಇದೆ ಎಂದರು.

ಆನೆ ಬಿಡಾರದಿಂದ ರವಿ ಮತ್ತು ಶಿವ ಎಂಬ ಎರಡು ಆನೆಗಳನ್ನು ಮಧ್ಯ ಪ್ರದೇಶಕ್ಕೆ ಹಾಗೂ ಕೃಷ್ಣ ಮತ್ತು ಅಭಿಮನ್ಯು ಎಂಬ ಆನೆಗಳನ್ನು ಆಂಧ್ರಪ್ರದೇಶಕ್ಕೆ ಕಳುಹಿಸಿಕೊಡಲಾಗಿದೆ. ಮಾನವ-ಆನೆ ಸಂಘರ್ಷ, ಆನೆಗಳ ಭಾವನಾತ್ಮಕ ಸಂಬಂಧಗಳು, ಅವುಗಳ ಸಾಧನೆ, ಆನೆಗಳ ನಿಜವಾದ ಪ್ರಾಮುಖ್ಯತೆ ಕುರಿತು ಮಾಹಿತಿ ಫಲಕ ಹಾಗೂ ಶಿಕ್ಷಣ, ಸಂಶೋಧನೆ, ದತ್ತು ಇತರೆ ಯೋಜನೆಗಳನ್ನು ಶೀಘ್ರದಲ್ಲೇ ರೂಪಿಸಲಾಗುವುದು ಎಂದು ತಿಳಿಸಿದರು.

ಡಿಸಿಎಫ್ ಪ್ರಸನ್ನಕೃಷ್ಣ ಪಟಗಾರ್ ಮಾತನಾಡಿ, ವಿಶ್ವ ಆನೆಗಳ ದಿನಾಚರಣೆ ಪ್ರಯುಕ್ತ ಭಾರತೀಯ ಅಂಚೆ ಇಲಾಖೆಯ ಸಹಯೋಗದೊಂದಿಗೆ ವಿಶೇಷ ಅಂಚೆ ಲಕೋಟೆ ತಯಾರಿಸಿ ಬಿಡುಗಡೆಗೊಳಿಸಲಾಗುತ್ತಿದೆ. ಮಾನವ ಆನೆ ಸಂಘರ್ಷದಿಂದ ಬಾಧಿತ ಕಾಡಂಚಿನ ಸಮುದಾಯಗಳಿಗೆ ಮತ್ತು ವಿದ್ಯಾರ್ಥಿಗಳಿಗೆ ಹೆಚ್ಚಿನ ಜಾಗೃತಿ ಮೂಡಿಸಲು ಪುರದಾಳು, ಹೆದ್ದಾರಿಪುರ, ಬೆಳ್ಳೂರು ಶಾಲೆಗಳಲ್ಲಿ ಚಿತ್ರಕಲೆ, ಪ್ರಬಂಧ ಮತ್ತು ಪೋಸ್ಟರ್ ರಚನೆ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಎಸಿಎಫ್ ವಿಜಯಕುಮಾರ್, ಆರ್‌ಎಫ್‌ಒ ವಿನಯ್.ಜೆ.ಆರ್ ಸೇರಿದಂತೆ ಇತರೆ ಅಧಿಕಾರಿಗಳು, ಸಿಬ್ಬಂದಿ, ಸಾರ್ವಜನಿಕರು ಇದ್ದರು.

ಆನೆಗಳ ಮರಿಗಳಿಗೆ ಹೆಸರು ನಾಮಕರಣ

ಗಾಜನೂರು ಸಕ್ರೆಬೈಲು ಆನೆ ಬಿಡಾರದಲ್ಲಿ ಮಂಗಳವಾರ ನಾಮಕರಣದ ಸಂಭ್ರಮ ಮನೆ ಮಾಡಿತ್ತು, ವಿಶ್ವ ಆನೆ ದಿನಾಚರಣೆ ಪ್ರಯುಕ್ತ ಮಾವುತರು ಆನೆಗಳನ್ನು ಬಣ್ಣ ಬಣ್ಣದ ಚಿತ್ತಾರದೊಂದಿಗೆ ಅಲಂಕರಿಸಿದ್ದರು. ಆನೆಗಳಿಗೆ ಇಷ್ಟವಾದ ಕಬ್ಬು, ಬೆಲ್ಲ, ತರಕಾರಿ ಫಲಗಳನ್ನು ತಿನ್ನಿಸಲಾಯಿತು.

ಇದೇ ಸಂದರ್ಭದಲ್ಲಿ ಆನೆ ಶಿಬಿರದಲ್ಲಿ ಜನಿಸಿದ ಎರಡು ಹೆಣ್ಣು ಆನೆ ಮರಿಗಳಿಗೆ ನಾಮಕರಣದ ಸಂಭ್ರಮವೂ ಜರುಗಿತು.

ಪೂಜಾ ವಿಧಿ ವಿಧಾನಗಳೊಂದಿಗೆ ಆನೆ ಮರಿಗಳ ನಾಮಕರಣ ಸಮಾರಂಭ ನಡೆದಿದ್ದು, ಆನೆ ಬಿಡಾರದಲ್ಲಿರುವ ನೇತ್ರಾವತಿ ಆನೆಯ 6ನೇ ಮರಿಗೆ ಚಾಮುಂಡಿ ಎಂದು, ಭಾನುಮತಿಯ ನಾಲ್ಕನೇ ಮರಿಗೆ ತುಂಗಾ ಎಂದು ನಾಮಕರಣ ಮಾಡಲಾಯಿತು.

2023ರಲ್ಲಿ ಶಿವಮೊಗ್ಗ ದಸರಾ ವೇಳೆ ನೇತ್ರಾವತಿ ಮರಿ ಹಾಕಿದ ಹಿನ್ನೆಲೆ ಅದಕ್ಕೆ ಚಾಮುಂಡಿ ಎಂದು ನಾಮಕರಣ ಮಾಡಲಾಗಿದ್ದು, ತುಂಗಾ ನದಿಯ ದಡದಲ್ಲಿ ಆನೆ ಶಿಬಿರ ಇರುವ ಹಿನ್ನೆಲೆ ಭಾನುಮತಿಯ ಮರಿಗೆ ತುಂಗಾ ಎಂದು ನಾಮಕರಣ ಮಾಡಲಾಗಿದೆ.

ಅಂಚೆ ಲಕೋಟೆ ಬಿಡುಗಡೆ

ಕಾರ್ಯಕ್ರಮದಲ್ಲಿ ವಿಶ್ವ ಆನೆ ದಿನಾಚರಣೆ ಪ್ರಯುಕ್ತ ವಿಶೇಷ ಅಂಚೆ ಲಕೋಟೆ ಬಿಡುಗಡೆಗೊಳಿಸಲಾಯಿತು.ಈ ವೇಳೆ ಅಂಚೆ ಇಲಾಖೆ ಅಂಚೆ ಅಧೀಕ್ಷಕ ಜಯರಾಂ ಶೆಟ್ಟಿ ಮಾತನಾಡಿ, ವಿಶ್ವ ಆನೆ ದಿನಾಚರಣೆ 2025ರ ಸ್ಮರಣಾತ್ಮಕವಾಗಿ ಈ ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆಗೊಳಿಸಲಾಗಿದೆ. ಈ ಲಕೋಟೆ ನಿಗದಿತ ಸಂಖ್ಯೆ ಅಂದರೆ 2000 ಸಂಖ್ಯೆಯಲ್ಲಿ ಮಾತ್ರ ಇದ್ದು, ಇದರ ಮೌಲ್ಯ 30 ರು. ಆಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾರಾಟ ಮಾಡಲಾಗುತ್ತದೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಕ್ರೆಬೈಲಿನ ಆನೆ ಬಿಡಾರದ ಮಾಹಿತಿಯನ್ನು ಲಕೋಟೆ ಮೂಲಕ ಬಿತ್ತರಿಸಲಾಗುತ್ತದೆ. ಈ ಲಕೋಟೆ ಲಭ್ಯತೆ ಸೀಮಿತವಾಗಿರುವ ಕಾರಣಕ್ಕೆ ಮುಂದೆ ಇದರ ಮೌಲ್ಯ ವೃದ್ಧಿಯಾಗುತ್ತಾ ಹೋಗುತ್ತದೆ ಎಂದು ಮಾಹಿತಿ ನೀಡಿದರು.