ಸಾರಾಂಶ
ಕನ್ನಡಪ್ರಭ ವಾರ್ತೆ ಬೇಲೂರು
ಕೊಡಗು, ಹಾಸನ ಮತ್ತು ಚಿಕ್ಕಮಗಳೂರಿನ ಅರಣ್ಯದ ಹೊರಗೆ ನೆಲೆಸಿರುವ 200 ಆನೆಗಳನ್ನು ಹಿಡಿದು, ಭದ್ರಾ ಅಭಯಾರಣ್ಯದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಆನೆಧಾಮಕ್ಕೆ ಕಳುಹಿಸಿದಲ್ಲಿ ಈ ಮೂರು ಜಿಲ್ಲೆಗಳ ಆನೆ ಸಮಸ್ಯೆಗೆ ಶಾಶ್ವತ ಪರಿಹಾರ ಲಭಿಸುತ್ತದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಹೇಳಿದರು.ಪಟ್ಟಣದ ಆರ್.ವಿ. ಕಲ್ಯಾಣ ಮಂಟಪದಲ್ಲಿ ಆನೆ -ಮಾನವ ಸಂಘರ್ಷ ಇರುವ ಹಾಸನ, ಕೊಡಗು ಮತ್ತು ಚಿಕ್ಕಮಗಳೂರಿನ ಕಾಫಿ ಬೆಳೆಗಾರರು, ತೋಟದ ಬೆಳೆಗಾರರು, ರೈತರು ಮತ್ತು ಗ್ರಾಮಸ್ಥರ ಸಭೆಯಯಲ್ಲಿ ಮಾತನಾಡಿ, ವಿಶ್ವ ವನ್ಯಜೀವಿ ದಿನ ಕಾಡು ಪ್ರಾಣಿಗಳ ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸುವ ದಿನವಾಗಿದೆ. ಅದೇ ದಿನ ವನ್ಯಜೀವಿಗಳಿಂದ ಮಾನವರ ಅಮೂಲ್ಯ ಜೀವ ರಕ್ಷಿಸಲು ಮಾರ್ಗೋಪಾಯಗಳ ಬಗ್ಗೆ ಚರ್ಚಿಸುವ ಸಲುವಾಗಿ ಈ ಸಭೆ ನಡೆಸಲಾಗುತ್ತಿದೆ ಎಂದರು.
ವನ್ಯಜೀವಿ ಸಂರಕ್ಷಣಾ ಕಾಯಿದೆ ಬಂದ ನಂತರ ಪ್ರಾಣಿಬೇಟೆ ನಿಷೇಧಿಸಲಾಗಿದೆ. ವನ್ಯ ಜೀವಿಗಳ ಸಂರಕ್ಷಣೆ ಮಾಡಲಾಗುತ್ತಿದೆ. ಹೀಗಾಗಿ ರಾಜ್ಯದಲ್ಲಿ ವನ್ಯಜೀವಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಆದರೆ ಅದಕ್ಕೆ ಅನುಗುಣವಾಗಿ ಅರಣ್ಯ ಪ್ರದೇಶ ಹೆಚ್ಚಳವಾಗುತ್ತಿಲ್ಲ. ಇದು ಮಾನವ-ವನ್ಯಜೀವಿ ಸಂಘರ್ಷಕ್ಕೆ ಕಾರಣವಾಗಿದೆ ಎಂದರು. ವನ್ಯಜೀವಿಗಳಿಂದ ಅದರಲ್ಲೂ ಆನೆಗಳಿಂದ ಮಾನವರ ಜೀವ ಮತ್ತು ರೈತರ ಬೆಳೆಗೆ ಆಗುತ್ತಿರುವ ಹಾನಿ ತಡೆಗೆ ಅಂತರ ಜಿಲ್ಲಾ ಸಮನ್ವಯತೆ ಮತ್ತು ತಂತ್ರಜ್ಞಾನದ ಸಮರ್ಥ ಬಳಕೆ ಅಗತ್ಯವಾಗಿದೆ. ವನ್ಯಜೀವಿ ದಾಳಿಯಿಂದ ಗಾಯಗೊಂಡು ವಿಕಲಾಂಗರಾಗುವವರಿಗೆ ಹೆಚ್ಚಿನ ಪರಿಹಾರ ನೀಡಬೇಕು ಎಂಬ ಬೇಡಿಕೆ ಇದೆ, ಈ ಬಗ್ಗೆ ಪರಿಶೀಲಿಸಲಾಗುವುದು. ಅದೇ ರೀತಿ ಬೆಳೆ ಹಾನಿಗೆ ಶೀಘ್ರ ಪರಿಹಾರ ಪಾವತಿಸುವ ವ್ಯವಸ್ಥೆ ಜಾರಿಗೆ ತರಲು ವ್ಯವಸ್ಥೆ ರೂಪಿಸಲಾಗುವುದು ಎಂದು ತಿಳಿಸಿದರು.ರಸ್ತೆ, ನೀರು, ವಿದ್ಯುತ್ ಸೇರಿದಂತೆ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ವನಪ್ರದೇಶ ವಿಭಜನೆಯಾಗಿರುವುದು ಕೂಡ ಆನೆ, ಮಾನವ ಸಂಘರ್ಷ ಹೆಚ್ಚಳಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಒಟ್ಟಾರೆ ವನ್ಯ ಜೀವಿಗಳಿಂದ ಅಮೂಲ್ಯವಾದ ಮಾನವ ಜೀವಕ್ಕೆ ಹಾನಿ ಆಗುವುದನ್ನು ನಿಯಂತ್ರಿಸಲು ರೈಲ್ವೆ ಬ್ಯಾರಿಕೇಡ್ ನಿರ್ಮಿಸಲಾಗುತ್ತಿದೆ ಎಂದು ಹೇಳಿದರು.
ಹಾಸನ ಜಿಲ್ಲೆಯಲ್ಲಿ ಕಳೆದ 2 ವರ್ಷದಲ್ಲಿ 7 ಆನೆಗಳಿಗೆ ರೇಡಿಯೋ ಕಾಲರ್ ಅಳವಡಿಸಲಾಗಿದೆ. ಸಾಮಾನ್ಯವಾಗಿ ಗುಂಪಿನ ನೇತತ್ವ ವಹಿಸುವ ಹೆಣ್ಣಾನೆ ಗುರುತಿಸಿ ರೇಡಿಯೋ ಕಾಲರ್ ಅಳವಡಿಸಿದರೆ, ಆನೆಗಳ ಚಲನವಲನದ ಬಗ್ಗೆ ನಿಗಾ ಇಡಲು ಅನುಕೂಲವಾಗುತ್ತದೆ. ಪ್ರಸ್ತುತ ದೇಶೀಯವಾಗಿ ರೇಡಿಯೋ ಕಾಲರ್ ಅಭಿವೃದ್ಧಿ ಪಡಿಸಿದ್ದು, ಹೆಚ್ಚಿನ ರೇಡಿಯೋ ಕಾಲರ್ ಅಳವಡಿಸಲು ಕ್ರಮ ವಹಿಸಲಾಗಿದೆ ಎಂದರು.ಅಧ್ಯಯನಕ್ಕೆ ಸೂಚನೆ:ಆನೆಗಳ ಸಂಸತಿ ನಿಯಂತ್ರಿಸಲು ಸಂತಾನಹರಣ ಪ್ರಕ್ರಿಯೆ ನಡೆಸಬೇಕು ಎಂಬ ಸಲಹೆ ಬಂದಿದೆ. ಈ ನಿಟ್ಟಿನಲ್ಲಿ ಭಾರತೀಯ ವಿಜ್ಞಾನ ಮಂದಿರ (ಐಐಸ್‌ಸಿ)ಕ್ಕೆ ಜಾಗತಿಕವಾಗಿ ಆನೆಗಳ ಸಂತಾನ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳ ಅಧ್ಯಯನ ನಡೆಸುವ ಹೊಣೆ ನೀಡಲಾಗಿದೆ. ಅಧ್ಯಯನ ವರದಿ ಬಂದ ಬಳಿಕ ಸುಪ್ರೀಂಕೋರ್ಟ್ ತೀರ್ಪು, ವನ್ಯ ಜೀವಿ ಸಂರಕ್ಷಣಾ ಕಾಯಿದೆ ನಿಯಮಾವಳಿಗಳ ರೀತ್ಯ ಕ್ರಮ ವಹಿಸಲಾಗುವುದು ಎಂದರು. ಇದರ ಜೊತೆಗೆ ಆನೆಗಳಿಗೆ ಕಾಡಿನಲ್ಲಿ ಆಹಾರ ಮತ್ತು ನೀರಿನ ವ್ಯವಸ್ಥೆ ಆದಲ್ಲಿ, ಅವು ನಾಡಿಗೆ ಬರುವುದಿಲ್ಲ ಎಂಬ ಅಭಿಪ್ರಾಯವಿದೆ. ಈ ಹಿನ್ನೆಲೆಯಲ್ಲಿ ಕಾಡಿನಲ್ಲಿ ಹಂತಹಂತವಾಗಿ ನೀಲಗಿರಿ ಮತ್ತು ಅಕೇಶಿಯಾ ಮರಗಳನ್ನು ತೆರವು ಮಾಡಿ, ಆನೆಗಳಿಗೆ ಪ್ರಿಯವಾದ ಬಿದಿರು, ಬೈನೆ, ವಾಟೆ, ಹಲಸು, ಹುಲ್ಲು ಇತ್ಯಾದಿ ಮರ ಬೆಳೆಸಲು ಸಹ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಸಭೆಯಲ್ಲಿ ಸಂಸತ್ ಸದಸ್ಯ ಶ್ರೇಯಸ್ ಪಟೇಲ್, ಶಾಸಕರುಗಳಾದ ರಾಜೇಗೌಡ, ಎಚ್.ಕೆ. ಸುರೇಶ್, ಸಿಮೆಂಟ್ ಮಂಜು, ಮಾಜಿ ಸಚಿವ ಬಿ. ಶಿವರಾಂ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮೀನಾಕ್ಷಿ ನೇಗಿ ಮತ್ತಿತರರು ಉಪಸ್ಥಿತರಿದ್ದರು.)
;Resize=(128,128))
;Resize=(128,128))
;Resize=(128,128))
;Resize=(128,128))