ಮಲೆನಾಡು, ಮತ್ತಿತರ ಜಿಲ್ಲೆಗಳಲ್ಲಿನ ಕಾಡಾನೆ ಹಾವಳಿ ತಡೆಗೆ ಶೀಘ್ರ ಆನೆ ವಿಹಾರ ಧಾಮ

| N/A | Published : Apr 20 2025, 02:03 AM IST / Updated: Apr 20 2025, 10:49 AM IST

ಮಲೆನಾಡು, ಮತ್ತಿತರ ಜಿಲ್ಲೆಗಳಲ್ಲಿನ ಕಾಡಾನೆ ಹಾವಳಿ ತಡೆಗೆ ಶೀಘ್ರ ಆನೆ ವಿಹಾರ ಧಾಮ
Share this Article
  • FB
  • TW
  • Linkdin
  • Email

ಸಾರಾಂಶ

ಮಲೆನಾಡು, ಮತ್ತಿತರ ಜಿಲ್ಲೆಗಳಲ್ಲಿನ ಕಾಡಾನೆ ಹಾವಳಿ ತಡೆಗೆ ರಾಜ್ಯ ಬಜೆಟ್‌ನಲ್ಲಿ ಘೋಷಿಸಲಾಗಿರುವ ಆನೆ ವಿಹಾರಧಾಮ (ಎಲಿಫೆಂಟ್‌ ಸಾಫ್ಟ್‌ ರಿಲೀಸ್‌ ಸೆಂಟರ್‌) ಯೋಜನೆ ಅನುಷ್ಠಾನದ ಅಂತಿಮ ವರದಿ ಸಿದ್ಧಗೊಂಡಿದ್ದು, ಇನ್ನು 10 ದಿನಗಳಲ್ಲಿ ಅಧಿಕಾರಿಗಳು ಇದನ್ನು ಇಲಾಖೆಗೆ ಸಲ್ಲಿಸಲಿದ್ದಾರೆ.

ಗಿರೀಶ್‌ ಗರಗ

 ಬೆಂಗಳೂರು : ಮಲೆನಾಡು, ಮತ್ತಿತರ ಜಿಲ್ಲೆಗಳಲ್ಲಿನ ಕಾಡಾನೆ ಹಾವಳಿ ತಡೆಗೆ ರಾಜ್ಯ ಬಜೆಟ್‌ನಲ್ಲಿ ಘೋಷಿಸಲಾಗಿರುವ ಆನೆ ವಿಹಾರಧಾಮ (ಎಲಿಫೆಂಟ್‌ ಸಾಫ್ಟ್‌ ರಿಲೀಸ್‌ ಸೆಂಟರ್‌) ಯೋಜನೆ ಅನುಷ್ಠಾನದ ಅಂತಿಮ ವರದಿ ಸಿದ್ಧಗೊಂಡಿದ್ದು, ಇನ್ನು 10 ದಿನಗಳಲ್ಲಿ ಅಧಿಕಾರಿಗಳು ಇದನ್ನು ಇಲಾಖೆಗೆ ಸಲ್ಲಿಸಲಿದ್ದಾರೆ.

ಶಿವಮೊಗ್ಗ, ಹಾಸನ, ಕೊಡಗು, ಚಿಕ್ಕಮಗಳೂರು ಜಿಲ್ಲೆ ವ್ಯಾಪ್ತಿಯಲ್ಲಿ 200ಕ್ಕೂ ಹೆಚ್ಚಿನ ಆನೆಗಳು ಕಾಡಂಚಿನ ಗ್ರಾಮಗಳಿಗೆ ಪದೇ ಪದೆ ದಾಳಿ ಮಾಡಿ ಬೆಳೆ ಮತ್ತು ಪ್ರಾಣ ಹಾನಿ ಮಾಡುತ್ತಿವೆ. ಇದರಿಂದಾಗಿ ಆ ಭಾಗದ ರೈತರು ಸಮಸ್ಯೆಗೊಳಗಾಗಿದ್ದು, ಆನೆಗಳ ದಾಳಿ ತಪ್ಪಿಸುವಂತೆ ಅರಣ್ಯ ಇಲಾಖೆಗೆ ಒತ್ತಾಯಿಸಿದ್ದರು. ಈ ಸಮಸ್ಯೆಗೆ ಪರಿಹಾರ ಎನ್ನುವಂತೆ ಆನೆಗಳ ವಿಹಾರ ಧಾಮ (ಎಲಿಫೆಂಟ್ ಸಾಫ್ಟ್‌ ರಿಲೀಸ್‌ ಸೆಂಟರ್‌) ಯೋಜನೆ ಅನುಷ್ಠಾನ ಕುರಿತು ರಾಜ್ಯ ಬಜೆಟ್‌ನಲ್ಲಿ ಘೋಷಿಸಲಾಗಿತ್ತು. ಇದೀಗ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದ ವರದಿಯನ್ನು ಅಧಿಕಾರಿಗಳು ಸಿದ್ಧಗೊಳಿಸಿದ್ದು, ಆ ವರದಿಯನ್ನು ಇಲಾಖೆಯ ತಾಂತ್ರಿಕ ಸಮಿತಿ ಪರಿಶೀಲಿಸುತ್ತಿದೆ. ಅದಾದ ನಂತರ ಅದನ್ನು ಇಲಾಖೆಗೆ ಸಲ್ಲಿಸಲಾಗುತ್ತದೆ.

4 ಸ್ಥಳಗಳ ಪರಿಶೀಲನೆ:

ಆನೆ ವಿಹಾರಧಾಮವನ್ನು ಭದ್ರಾ ವನ್ಯಜೀವಿ ಸಂರಕ್ಷಿತಾರಣ್ಯದ 2 ಸಾವಿರ ಹೆಕ್ಟೇರ್‌ ಅರಣ್ಯ ಪ್ರದೇಶದಲ್ಲಿ ಅನುಷ್ಠಾನಕ್ಕೆ ಈಗಾಗಲೇ ನಿರ್ಧರಿಸಲಾಗಿದೆ. ಅದಕ್ಕಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಈಗಾಗಲೇ ಭದ್ರಾ ವನ್ಯಜೀವಿ ಸಂರಕ್ಷಿತಾರಣ್ಯ ವ್ಯಾಪ್ತಿಯ 3ರಿಂದ 4 ಪ್ರದೇಶಗಳ ಪರಿಶೀಲನೆ ನಡೆಸಿದ್ದಾರೆ. ಆ ಪ್ರದೇಶಗಳು ದಟ್ಟ ಅರಣ್ಯ ಇರುವ, ಕಾಡಾನೆಗಳನ್ನು ತಂದು ಆ ಪ್ರದೇಶದಲ್ಲಿ ಬಿಟ್ಟರೆ ಅಲ್ಲಿ ಕಾಡಾನೆಗೆ ಆಹಾರ ಸಮರ್ಪಕವಾಗಿ ದೊರೆಯುತ್ತದೆಯೇ ಎಂಬ ಅಂಶಗಳನ್ನು ಪರಿಶೀಲಿಸಲಾಗಿದೆ. ಆಹಾರ, ಆನೆಗಳ ವಾಸಕ್ಕೆ ಸೂಕ್ತವಾದ ಪ್ರದೇಶವನ್ನು ಆನೆ ವಿಹಾರಧಾಮ ಸ್ಥಾಪನೆಗೆ ಅಂತಿಮಗೊಳಿಸಲಾಗುತ್ತದೆ.

200ಕ್ಕೂ ಹೆಚ್ಚಿನ ಆನೆಗಳು:

ಅರಣ್ಯ ಇಲಾಖೆ ಗುರುತಿಸಿರುವಂತೆ ಕೊಡಗು ಜಿಲ್ಲೆಯಲ್ಲಿ 120, ಹಾಸನದಲ್ಲಿ 63 ಹಾಗೂ ಶಿವಮೊಗ್ಗ ಜಿಲ್ಲೆ ವ್ಯಾಪ್ತಿಯಲ್ಲಿ ಸುಮಾರು 15ರಿಂದ 20 ಆನೆಗಳು ಪದೇ ಪದೆ ಕಾಡಂಚಿನ ಗ್ರಾಮಗಳಿಗೆ ದಾಳಿ ಮಾಡುತ್ತಿವೆ. ಆ ಆನೆಗಳನ್ನು ಹಂತಹಂತವಾಗಿ ಹಿಡಿದು ಆನೆ ವಿಹಾರಧಾಮಕ್ಕೆ ಬಿಡುವುದು ಅರಣ್ಯ ಇಲಾಖೆಯ ಯೋಜನೆಯಾಗಿದೆ. ಈ ಯೋಜನೆಗಾಗಿ ರಾಜ್ಯ ಬಜೆಟ್‌ನಲ್ಲಿ 20 ಕೋಟಿ ರು.ಗಳನ್ನೂ ಮೀಸಲಿಡಲಾಗಿದೆ.

ವಿಹಾರಧಾಮದಲ್ಲಿ ಏನೇನು ವ್ಯವಸ್ಥೆ?

ಬೇರೆ ಪ್ರದೇಶಗಳಲ್ಲಿ ನಾಡಿಗೆ ದಾಳಿ ಮಾಡಿ ನಷ್ಟವನ್ನುಂಟು ಮಾಡುವ ಕಾಡಾನೆಗಳು ಸೆರೆಯಾದ ನಂತರ ಅವುಗಳನ್ನು ಭದ್ರಾ ವನ್ಯಜೀವಿ ಸಂರಕ್ಷಿತಾರಣ್ಯದಲ್ಲಿ ಸ್ಥಾಪಿಸಲಾಗುವ ಆನೆ ವಿಹಾರಧಾಮಕ್ಕೆ ತಂದು ಬಿಡಲಾಗುತ್ತದೆ. ಹೀಗೆ ತಂದು ಬಿಡುವ ಕಾಡಾನೆಗಳು ಅರಣ್ಯ ಪ್ರದೇಶದಿಂದ ಹೊರಬಾರದಂತೆ ತಡೆಯಲು 2 ಸಾವಿರ ಹೆಕ್ಟೇರ್‌ ಅರಣ್ಯ ಪ್ರದೇಶದ ಸುತ್ತಲೂ ಸೋಲಾರ್‌ ಫೆನ್ಸಿಂಗ್‌, ರೈಲ್ವೆ ಬ್ಯಾರಿಕೇಡ್‌ಗಳ ಅಳವಡಿಕೆ ಹಾಗೂ ಟ್ರಂಚ್‌ಗಳನ್ನು ಮಾಡಲಾಗುತ್ತದೆ. ಅದರ ಜತೆಗೆ ಅರಣ್ಯ ಪ್ರದೇಶದ ಸುತ್ತಲೂ ಆನೆಗಳಿಗೆ ಪ್ರಿಯವಾದ ಬಿದಿರನ್ನು ಗುಂಪು ಗುಂಪಾಗಿ ಬೆಳೆಸಲೂ ಯೋಜಿಸಲಾಗಿದೆ. ಆ ಮೂಲಕ ನೈಸರ್ಗಿಕ ಬೇಲಿ ನಿರ್ಮಾಣ ಮಾಡಲೂ ಚಿಂತನೆ ನಡೆಸಲಾಗಿದೆ. ಅದರ ಜತೆಗೆ ಅರಣ್ಯ ಪ್ರದೇಶದಲ್ಲಿ ಹಲಸಿನ ಸಸಿಗಳನ್ನು ನೆಡುವುದು, ಹುಲ್ಲುಗಾವಲು ಬೆಳೆಸುವ ಮೂಲಕ ಆನೆಗಳು ಅರಣ್ಯ ಪ್ರದೇಶದೊಳಗೇ ಇರುವಂತೆ ಮಾಡಲು ಚಿಂತನೆ ನಡೆಸಲಾಗಿದೆ.

ಆನೆಗಳು ಕಾಡಂಚಿನ ಗ್ರಾಮಗಳಿಗೆ ದಾಳಿ ಮಾಡಿ ಬೆಳೆ ಹಾನಿ ಮತ್ತು ಜೀವ ಹಾನಿ ತಪ್ಪಿಸಲು ಭದ್ರಾ ವನ್ಯಜೀವಿ ಸಂರಕ್ಷಿತಾರಣ್ಯದ 2 ಸಾವಿರ ಹೆಕ್ಟೇರ್‌ ಅರಣ್ಯ ಪ್ರದೇಶದಲ್ಲಿ ಆನೆಗಳ ವಿಹಾರಧಾಮ ನಿರ್ಮಿಸಲು ಯೋಜಿಸಲಾಗಿದೆ. ಅದಕ್ಕೆ ಸಂಬಂಧಿಸಿ ವನ್ಯಜೀವಿ ಸಂರಕ್ಷಿತಾರಣ್ಯದಲ್ಲಿ ಮೂರ್ನಾಲ್ಕು ಪ್ರದೇಶ ಪರಿಶೀಲಿಸಲಾಗಿದೆ. ಅದಕ್ಕೆ ಸಂಬಂಧಿಸಿ ವರದಿ ಸಿದ್ಧವಾಗಿದ್ದು, ಇನ್ನು 10 ದಿನಗಳಲ್ಲಿ ಇಲಾಖೆಗೆ ಸಲ್ಲಿಕೆಯಾಗುವ ನಿರೀಕ್ಷೆಯಿದೆ.

- ಸುಭಾಷ್ ಮಾಲ್ಖಡೆ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ)