ಸಾರಾಂಶ
ಕೊಳಕೇರಿ ಗ್ರಾಮದ ಬೊಮ್ಮಂಜಕೇರಿ ಸುತ್ತಮುತ್ತಲಿನ ತೋಟಗಳಲ್ಲಿ ಕಾಡಾನೆಗಳು ಬೀಡುಬಿಟ್ಟಿದ್ದು ದಾಂದಲೆ ಮಾಡಿ ಭಾರಿ ನಷ್ಟ ಉಂಟು ಮಾಡಿದೆ.
ಕನ್ನಡಪ್ರಭ ವಾರ್ತೆ ನಾಪೋಕ್ಲು
ಸಮೀಪದ ಕೊಳಕೇರಿ ಗ್ರಾಮದ ಬೊಮ್ಮಂಜಕೇರಿ ಸುತ್ತಮುತ್ತಲಿನ ತೋಟಗಳಲ್ಲಿ ಕಾಡಾನೆಗಳು ಬೀಡು ಬಿಟ್ಟಿದ್ದು ದಾಂದಲೆ ಮಾಡಿ ಭಾರಿ ನಷ್ಟ ಉಂಟು ಮಾಡಿರುವ ಘಟನೆ ಜರುಗಿದೆ. ಬೊಮ್ಮುಂಜ ಕೇರಿಯಲ್ಲಿ ಮಂಗಳವಾರ ಕಾಡಾನೆಗಳ ಹಿಂಡು ಇಲ್ಲಿಯ ನಿವಾಸಿಗಳಾದ ಅಚ್ಛಾಂಡಿರ, ಪುಳ್ಳೆರ, ಮಲೆಯರ , ತಂಬಂಡ, ಬಿದ್ದಾಟಂಡ ಅಚ್ಚಪಂಡ, ತೋಟಗಳಲ್ಲಿ ದಾಂದಲೆ ನಡೆಸಿದ್ದು ತೆಂಗು, ಅಡಿಕೆ, ಕಾಫಿ ಗಿಡಗಳನ್ನು ನಾಶಪಡಿಸಿ ರೈತರು ಅಪಾರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಒಂದು ಮರಿಯಾನೆ ಸೇರಿದಂತೆ ಏಳು ಕಾಡಾನೆಗಳು ಇಲ್ಲೇ ಅಡ್ಡಾಡುತ್ತಿದ್ದು ಗ್ರಾಮಸ್ಥರು ಭಯಭೀತರಾಗಿದ್ದಾರೆ. ಅರಣ್ಯ ಸಂರಕ್ಷಣಾಧಿಕಾರಿ ಕಾಳೇಗೌಡ, ಅರಣ್ಯ ರಕ್ಷಕ ಸಿಬ್ಬಂದಿ, ಸ್ಥಳಕ್ಕೆ ಆಗಮಿಸಿ ಕಾಡಾನೆಗಳನ್ನು ಕಾಡಿಗಟ್ಟಲು ಪ್ರಯತ್ನಿಸಿದ್ದರೂ ಸಫಲರಾಗಿಲ್ಲ. ಸಂಬಂಧಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳು ಗ್ರಾಮದಲ್ಲಿರುವ ಕಾಡಾನೆಗಳನ್ನು ಕಾಡಿಗಟ್ಟುವ ಅಥವಾ ಸೆರೆ ಹಿಡಿಯುವ ಸ್ಥಳಾಂತರಿಸಲು ಕ್ರಮ ಕೈಗೊಳ್ಳಬೇಕು. ನಷ್ಟ ಸಂಭವಿಸಿದ ಬೆಳೆಗಾರರಿಗೆ ಸೂಕ್ತ ಪರಿಹಾರ ಒದಗಿಸಿ ಕೊಡಬೇಕು ಎಂದು ಗ್ರಾಮಸ್ಥರು ಪುಳ್ಳೆರ, ವಿನು, ಸೋಮಯ್ಯ, ಅಚ್ಛಾಂಡಿರ ಅಪ್ಪಸ್ವಾಮಿ, ಗಣೇಶ, ತಂಬಂಡ ಮುತ್ತಪ್ಪ, ರವಿ, ಮಲೆಯರ ಅಪ್ಪಚ್ಚು , ಅಶೋಕ್ ಸೇರಿದಂತೆ ಇನ್ನಿತರರು ಒತ್ತಾಯಿಸಿದ್ದಾರೆ.