ಇನ್ನು ಮೆಟ್ರೋ ಹಳಿ ಕೆಳಗೆ ರಸ್ತೆ: ಡಿಕೆಶಿ

| Published : Feb 09 2024, 01:46 AM IST / Updated: Feb 09 2024, 02:03 PM IST

DK Shivakumar

ಸಾರಾಂಶ

ಮೆಟ್ರೋ ಹಳಿಗಳ ಕೆಳಗೆ ಎತ್ತರಿಸಿದ ರಸ್ತೆ ನಿರ್ಮಾಣಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್‌ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದಲ್ಲಿ ಭವಿಷ್ಯದ ಎಲ್ಲ ಮೆಟ್ರೋ ಮಾರ್ಗದಲ್ಲಿ ಡಬಲ್‌ ಡೆಕ್ಕರ್‌ (ಮೆಟ್ರೋ ಎಲಿವೆಟೆಡ್‌ನ ಕೆಳ ಹಂತದಲ್ಲಿ ರಸ್ತೆ) ನಿರ್ಮಾಣಕ್ಕೆ ಸೂಚಿಸಲಾಗಿದ್ದು, ಪ್ರಮುಖವಾಗಿ ಈಗ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೆಟ್ರೋ ಮಾರ್ಗದಲ್ಲಿ ಅವಕಾಶವಿರುವಲ್ಲಿ ಈ ಮಾದರಿ ಅನುಸರಿಸುವಂತೆ ಸೂಚಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದರು.

ಗುರುವಾರ ನಾಗವಾರ ಮುಖ್ಯರಸ್ತೆಯ ಕೆ.ಜಿ.ಹಳ್ಳಿ ಮೆಟ್ರೋ ಸ್ಟೇಷನ್ ಬಳಿ ಟಿಬಿಎಂ ಸುರಂಗ ಕೊರೆದು ಹೊರಬರುವ ಪ್ರಕ್ರಿಯೆ ವೀಕ್ಷಿಸಿದರು. ಬಳಿಕ ಏರ್‌ಪೋರ್ಟ್‌ಗೆ ಸಂಪರ್ಕ ಕಲ್ಪಿಸುವ ಮೆಟ್ರೋ ಯೋಜನೆ ಬಗ್ಗೆ ಮಾತನಾಡಿ, ನಾಗ್ಪುರದಲ್ಲಿ ಈ ರೀತಿಯ ಯೋಜನೆ ಗಮನಿಸಿದ್ದು, ಮುಂದಿನ ಮೆಟ್ರೋ ಕಾಮಗಾರಿಗಳಲ್ಲಿ ಈ ಯೋಜನೆ ಕಾರ್ಯಗತ ಮಾಡುತ್ತೇವೆ. ಮೆಟ್ರೋ ಕಂ ರಸ್ತೆ ನಿರ್ಮಾಣದಿಂದ ಮೇಲ್ಸೇತುವೆ ನಿರ್ಮಾಣಕ್ಕೆ ತಗುಲುವ ಶೇ.60ರಷ್ಟು ವೆಚ್ಚ ತಗ್ಗಲಿದೆ ಎಂದರು.

2025ಕ್ಕೆ ಗುಲಾಬಿ ಸುರಂಗ ಮಾರ್ಗ: ಇನ್ನು ‘ನಮ್ಮ ಮೆಟ್ರೋ’ 2ನೇ ಹಂತದ ಕಾಳೇನ ಅಗ್ರಹಾರದಿಂದ ನಾಗವಾರದ ಮಾರ್ಗ 2025ರ ವೇಳೆಗೆ ಮುಗಿಯಲಿದೆ. ಈ ಮಾರ್ಗದಲ್ಲಿ 13.76 ಕಿಮೀ ಉದ್ದ ಸುರಂಗ ಇರಲಿದ್ದು. 

ಡೇರಿ ವೃತ್ತದಿಂದ ನಾಗವಾರದವರೆಗೆ 12 ಸುರಂಗ ನಿಲ್ದಾಣ ನಿರ್ಮಾಣ ಆಗಲಿದೆ. ಎತ್ತರಿಸಿದ ಮಾರ್ಗವೂ ಸೇರಿ ಒಟ್ಟು 18 ನಿಲ್ದಾಣಗಳಿರಲಿವೆ. ಸುರಂಗ ಮಾರ್ಗಕ್ಕಾಗಿ ಕಾರ್ಯಾಚರಣೆಯಲ್ಲಿ ತೊಡಗಿದ್ದ ಒಂಭತ್ತು ಟಿಬಿಎಂ ಪೈಕಿ ಏಳು ಕೆಲಸ ಮುಗಿಸಿವೆ ಎಂದರು.ಕೆಜೆಹಳ್ಳಿ ಬಳಿ ಹೊರಬಂದ 

ಟಿಬಿಎಂ ಭದ್ರಾ: ಟಿಬಿಎಂ ಭದ್ರಾ ಟ್ಯಾನರಿ ರಸ್ತೆ ನಿಲ್ದಾಣದಿಂದ ನಾಗವಾರದ ರ್ಯಾಂಪ್‌ವರೆಗಿನ 4.591 ಕಿ.ಮೀ. ಉದ್ದದ ಸುರಂಗ ಮಾರ್ಗದ ನಿರ್ಮಾಣ ಕಾರ್ಯ ಪೂರ್ಣಗೊಳಿಸಿ ಕೆ.ಜಿ. ಹಳ್ಳಿ (ಕಾಡಗೊಂಡನಹಳ್ಳಿ) ನಿಲ್ದಾಣದ ಬಳಿ ಗುರುವಾರ ಯಶಸ್ವಿಯಾಗಿ ಹೊರಬಂದಿದೆ.