ಪ್ರಜಾಪ್ರಭುತ್ವ ಮತ್ತು ಸಂಸದೀಯ ವ್ಯವಸ್ಥೆ ಬಲಪಡಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬ ಅರ್ಹ ನಾಗರೀಕರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು ಮತ್ತು ಯಾವುದೇ ಅರ್ಹ ವ್ಯಕ್ತಿ ಪಟ್ಟಿಯಿಂದ ಹೊರಗುಳಿಯದಂತೆ ಅಧಿಕಾರಿಗಳು ಎಚ್ಚರ ವಹಿಸಬೇಕು
ಕನ್ನಡಪ್ರಭ ವಾರ್ತೆ ಕೋಲಾರ
ಪ್ರಜಾಪ್ರಭುತ್ವ ಮತ್ತು ಸಂಸದೀಯ ವ್ಯವಸ್ಥೆ ಬಲಪಡಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬ ಅರ್ಹ ನಾಗರೀಕರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು ಮತ್ತು ಯಾವುದೇ ಅರ್ಹ ವ್ಯಕ್ತಿ ಪಟ್ಟಿಯಿಂದ ಹೊರಗುಳಿಯದಂತೆ ಅಧಿಕಾರಿಗಳು ಎಚ್ಚರ ವಹಿಸಬೇಕು ಎಂದು ವಿಧಾನ ಪರಿಷತ್ ಮಾಜಿ ಸಭಾಪತಿ ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಎಸ್‌ಐಆರ್ ಉಸ್ತುವಾರಿ ಸಮಿತಿ ಅಧ್ಯಕ್ಷ ವಿ.ಆರ್. ಸುದರ್ಶನ್ ತಿಳಿಸಿದರು.ತಾಲೂಕಿನ ವೇಮಗಲ್‌ನ ತಮ್ಮ ನಿವಾಸದಿಂದಲೇ ವಿಶೇಷ ಸಮಗ್ರ ಮತಪಟ್ಟಿ ಪರಿಷ್ಕರಣೆ ಎಸ್‌ಐಆರ್ ಪ್ರಕ್ರಿಯೆಗೆ ಚಾಲನೆ ನೀಡಿ ಮಾತನಾಡಿದರು.
ಈ ಕುರಿತು ಕಾಂಗ್ರೆಸ್ ಪಕ್ಷದಿಂದ ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಜನಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು. ಯಾರೆಲ್ಲ ಅರ್ಹ ಮತದಾರರು ಇದ್ದಾರೆ, ಅವರು ಮತದಾರರ ಪಟ್ಟಿಯಿಂದ ಹೊರಗೆ ಉಳಿಯಬಾರದು, ಮತದಾರರ ಪಟ್ಟಿ ಮತ್ತು ಚುನಾವಣಾ ಆಯೋಗದ ವೆಬ್ ಸೈಟ್‌ನಲ್ಲಿಯೂ ಪ್ರಕಟವಾಗುವಂತೆ ಅಧಿಕಾರಿಗಳು ಕ್ರಮ ವಹಿಸಬೇಕು, ಈ ದೇಶದ ಪ್ರಜೆಯಾದ ಯಾರು ಪಟ್ಟಿಯಿಂದ ಹೊರಗುಳಿಯಬಾರದು ಎಂದರು.ಮತದಾರರ ಪಟ್ಟಿಯ ಪರಿಷ್ಕರಣೆ ಕೇವಲ ಆಡಳಿತಾತ್ಮಕ ಪ್ರಕ್ರಿಯೆಯಲ್ಲ; ಅದು ಪ್ರಜಾಪ್ರಭುತ್ವ ಮತ್ತಷ್ಟು ಬಲಪಡಿಸುವ ಕಾರ್ಯವಾಗಿದೆ. ನಿಖರ ಮತ್ತು ದೋಷರಹಿತ ಮತದಾರರ ಪಟ್ಟಿಯಿಂದ ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸಲು ಸಾಧ್ಯವಾಗುತ್ತದೆ. ಪ್ರತಿಯೊಬ್ಬ ಅರ್ಹ ನಾಗರೀಕರು ಗಣತಿ ನಮೂನೆ ತಪ್ಪದೇ ಭರ್ತಿ ಮಾಡಿ ಸಲ್ಲಿಸುವಂತೆ ಹೇಳಿದರು.
ತಹಸೀಲ್ದಾರ್ ಎಚ್. ಶ್ರೀನಿವಾಸ್ ಮಾತನಾಡಿ, ತಾಲೂಕಿನಾದ್ಯಂತ ಸಮಗ್ರ ಮತಪಟ್ಟಿ ಪರಿಷ್ಕರಣೆಗೆ ಅಗತ್ಯ ಸಿಬ್ಬಂದಿ ನೇಮಿಸಲಾಗಿದೆ, ಅವರಿಗೆ ಈಗಾಗಲೇ ಗಣತಿ ಕಾರ್ಯ ನಡೆಸಲು ಅಗತ್ಯವಾದ ತರಬೇತಿ ನೀಡಲಾಗಿದೆ ಎಂದು ತಿಳಿಸಿದರು.ವೇಮಗಲ್ ಹೋಬಳಿ ನೋಡಲ್ ಅಧಿಕಾರಿ ಗೋವಿಂದಪ್ಪ, ಪಪಂ ಮುಖ್ಯಾಧಿಕಾರಿ ವೆಂಕಟೇಶ್, ರಾಜಸ್ವ ನಿರೀರಿಕ್ಷಕ ಅಜಯ್, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ವಿ.ಎಂ.ಮುನಿಯಪ್ಪ, ಯೋಜನಾ ಪ್ರಾಧಿಕಾರ ಸದಸ್ಯ ನಾಗರಾಜ್, ಹೊಟೇಲ್ ರಾಜಣ್ಣ, ಈಡಿಗರ ರವಿಚಂದ್ರ, ಜೆಸಿಬಿ ಶಶಿಕುಮಾರ್, ಶ್ರೀನಿವಾಸ್, ಗ್ರಾಮ ಲೆಕ್ಕಾಧಿಕಾರಿ ಸಲ್ಮಾನ್, ಬಿಎಲ್‌ಓ ನಾಗರಾಜ್, ಇಮ್ರಾನ್, ಪಂಚಾಯತ್ ರಾಜ್ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಗೋವಿಂದಪ್ಪ, ಗ್ಯಾರಂಟಿ ಯೋಜನೆಗಳ ತಾಲೂಕು ಅಧ್ಯಕ್ಷ ವಿ.ಎಂ.ಮುನಿಯಪ್ಪ, ವೇಮಗಲ್ -ನರಸಾಪುರ ಯೋಜನಾ ಪ್ರಾಧಿಕಾರದ ಸದಸ್ಯ ಬಿ.ನಾಗರಾಜ್, ಗ್ರಾ.ಪಂ ಮಾಜಿ ಅಧ್ಯಕ್ಷ ನಾಗರಾಜ್, ಶಂಕರಪ್ಪ, ಬಿ.ಎಲ್.ಓ ನಾಗರಾಜ್, ಮಂಜುನಾಥ್ ಇದ್ದರು.