ಸಾರಾಂಶ
- ಪದವಿ ಪಡೆದು 180 ದಿನಗಳು ಕಳೆದ ನಂತರವೂ ಉದ್ಯೋಗ ಸಿಗದವರು ಅರ್ಹರು
- ಪ್ರಾಂಶುಪಾಲರು ವಿದ್ಯಾರ್ಥಿಗಳಿಗೆ ಸೇವಾಸಿಂಧು ಪೋರ್ಟಲ್ ಮೂಲಕ ಹೆಸರು ನೋಂದಣಿಗೆ ಮಾಹಿತಿ ನೀಡಬೇಕು- ಪದವೀಧರರಿಗೆ ಮಾಸಿಕ 3000, ಡಿಪ್ಲೊಮಾ ಪಡೆದವರಿಗೆ 1500 ಗರಿಷ್ಠ ವರ್ಷಗಳವರೆಗೆ ನಿರುದ್ಯೋಗ ಭತ್ಯೆ - - - ಕನ್ನಡಪ್ರಭ ವಾರ್ತೆ ಶಿವಮೊಗ್ಗ ಪದವಿ ಪಡೆದ ಯುವಕರು ಪದವಿ ಪಡೆದು 180 ದಿನಗಳು ಕಳೆದ ನಂತರವೂ ಉದ್ಯೋಗ ಪಡೆಯದ ನಿರುದ್ಯೋಗಿಗಳಿಗೆ ಕಾಂಗ್ರೆಸ್ ಸರ್ಕಾರ ಯುವನಿಧಿ ಯೋಜನೆಯಡಿ ನಿರುದ್ಯೋಗ ಭತ್ಯೆ ನೀಡಲು ಉದ್ದೇಶಿಸಿದೆ. ಅರ್ಹ ಅಭ್ಯರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಹರಾದ ಜಿಲ್ಲೆಯ ನಿರುದ್ಯೋಗಿ ಯುವಕರು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಯುವನಿಧಿ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಪದವಿ, ಡಿಪ್ಲೊಮಾ ಕಾಲೇಜುಗಳ ಪ್ರಾಂಶುಪಾಲರಿಗೆ ಏರ್ಪಡಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು.ಜಿಲ್ಲೆಯ ಪದವಿ, ಡಿಪ್ಲೊಮಾ ಕಾಲೇಜುಗಳ ಪ್ರಾಂಶುಪಾಲರು ತಮ್ಮ ಕಾಲೇಜುಗಳಲ್ಲಿ ಹಿಂದಿನ ಸಾಲಿನಲ್ಲಿ ವ್ಯಾಸಂಗ ಪೂರ್ಣಗೊಳಿಸಿ, ಪ್ರಸ್ತುತ ನಿರುದ್ಯೋಗಿಗಳಾಗಿರುವ ವಿದ್ಯಾರ್ಥಿಗಳಿಗೆ ಸೇವಾಸಿಂಧು ಪೋರ್ಟಲ್ ಮೂಲಕ ಹೆಸರು ನೋಂದಾಯಿಸಿಕೊಳ್ಳಲು ಮಾಹಿತಿ ನೀಡುವಂತೆ ಸೂಚಿಸಿದರು.
ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೂ ಸ್ಥಳೀಯ ಸಂಸ್ಥೆಗಳ ಅಧಿಕಾರಿ-ಸಿಬ್ಬಂದಿ ಮಾಹಿತಿ ನೀಡಬೇಕು. ಅದಕ್ಕಾಗಿ ಶಾಲೆ-ಕಾಲೇಜು ಹಂತದಲ್ಲಿ ಈಗಾಗಲೇ ಅನುಷ್ಠಾನದಲ್ಲಿರುವ ಪ್ಲೇಸ್‍ಮೆಂಟ್ ಸೆಲ್ ನಿರ್ವಾಹಕರು ವಿಶೇಷ ಗಮನಹರಿಸಬೇಕು. ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿ, ಸೌಲಭ್ಯ ದುರುಪಯೋಗಪಡಿಸಿಕೊಂಡಲ್ಲಿ ಅಂಥವರನ್ನು ಕಾನೂನು ಕ್ರಮಕ್ಕೆ ಶಿಫಾರಸು ಮಾಡಲಾಗುವುದು. ಜೊತೆಗೆ ಹಣವನ್ನು ಬಡ್ಡಿಸಹಿತ ವಸೂಲಾತಿಗೆ ಕ್ರಮ ವಹಿಸಲಾಗುವುದು ಎಂದರು.ಜಿಲ್ಲೆಯಲ್ಲಿ 2022- 23ನೇ ಸಾಲಿನಲ್ಲಿ ತೇರ್ಗಡೆ ಆಗಿರುವ ವೃತ್ತಿಪರ ಕೋರ್ಸುಗಳು ಸೇರಿದಂತೆ ಪದವೀಧರ ನಿರುದ್ಯೋಗಿಗಳಿಗೆ ಪ್ರತಿ ತಿಂಗಳು ₹3,000 ಹಾಗೂ ಡಿಪ್ಲೊಮಾ ಉತ್ತೀರ್ಣರಾದ ನಿರುದ್ಯೋಗಿಗಳಿಗೆ ಪ್ರತಿ ತಿಂಗಳು ₹1,500 ನಿರುದ್ಯೋಗ ಭತ್ಯೆಯನ್ನು ಗರಿಷ್ಠ 2 ವರ್ಷಗಳ ಕಾಲ ನೀಡಲಾಗುವುದು ಎಂದರು.
ಉನ್ನತ ವ್ಯಾಸಂಗಕ್ಕೆ ದಾಖಲಾತಿ ಹೊಂದಿ ವಿದ್ಯಾಭ್ಯಾಸ ಮುಂದುವರಿಸಿರುವವರು, ಸರ್ಕಾರದ ವಿವಿಧ ಇಲಾಖೆ, ಸಂಸ್ಥೆಗಳಲ್ಲಿ ಅಪ್ರೆಂಟಿಸ್ ವೇತನ ಪಡೆಯುತ್ತಿರುವವರು, ರಾಜ್ಯ ಹಾಗೂ ಕೇಂದ್ರದ ವಿವಿಧ ಯೋಜನೆಯಡಿ ಹಾಗೂ ಬ್ಯಾಂಕುಗಳಲ್ಲಿ ಸಾಲ ಪಡೆದು ಸ್ವಯಂ ಉದ್ಯೋಗ ಹೊಂದಿರುವವರು ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸುವಂತಿಲ್ಲ ಎಂದು ತಿಳಿಸಿದರು.ಸಭೆಯಲ್ಲಿ ಜಿಪಂ ಸಿಇಒ ಸ್ನೇಹಲ್ ಸುಧಾಕರ್ ಲೋಖಂಡೆ, ಅಪರ ಡಿಸಿ ಸಿದ್ಧಲಿಂಗ ರೆಡ್ಡಿ, ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿ ಖಲಂದರ್ ಖಾನ್ ಮತ್ತಿತರರು ಇದ್ದರು.
- - --27ಎಸ್‌ಎಂಜಿಕೆಪಿ08: ಡಾ. ಆರ್.ಸೆಲ್ವಮಣಿ