ಸಾರಾಂಶ
ಕನ್ನಡಪ್ರಭವಾರ್ತೆ ಚಿತ್ರದುರ್ಗಗರ್ಭಿಣಿಯರು ಕಬ್ಬಿಣಾಂಶದ ಕೊರತೆ ನೀಗಿಸಿಕೊಂಡು ಸುರಕ್ಷಿತ ತಾಯ್ತನ ಪಡೆಯಬೇಕು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಬಿ.ವಿ. ಗಿರೀಶ ಹೇಳಿದರು. ಚಿತ್ರದುರ್ಗ ತಾಲೂಕಿನ ಹಾಯ್ಕಲ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೋಮವಾರ ಜರುಗಿದ ಪ್ರಧಾನಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗರ್ಭಿಣಿಯರಲ್ಲಿ ಕಬ್ಬಿಣಾಂಶ ಕೊರತೆಯಿಂದ ಹಿಮೋಗ್ಲೋಬಿನ್ ಪ್ರಮಾಣ ಕಡಿಮೆಯಾಗಿ ರಕ್ತ ಹೀನತೆ ಉಂಟಾಗುತ್ತದೆ. ಹಿಮೋಗ್ಲೋಬಿನ್ 7 ಗ್ರಾಂ ಗಿಂತ ಕಡಿಮೆ ಇರುವ ಗರ್ಭಿಣಿಯರಿಗೆ ರಕ್ತವನ್ನು ನೀಡಲಾಗುತ್ತದೆ. 7 ಗ್ರಾಂ ಮೇಲೆ 10 ಗ್ರಾಂ ಹಿಮೋಗ್ಲೋಬಿನ್ ಪ್ರಮಾಣವಿರುವ ಗರ್ಭಿಣಿಯರಿಗೆ ಕನಿಷ್ಠ 10 ಡೋಸ್ ಐರನ್ ಸುಕ್ರೋಸ್ ಇಂಜೆಕ್ಷನ್ ಮೂಲಕ ಕಬ್ಬಿಣದ ಕೊರತೆ ನೀಗಿಸಿ ಹಿಮೋಗ್ಲೋಬಿನ್ ಪ್ರಮಾಣ ಹೆಚ್ಚಿಸಲಾಗುತ್ತದೆ ಎಂದು ತಿಳಿಸಿದರು.ಸಾಮಾನ್ಯ ಗರ್ಭಿಣಿಯರಿಗೆ ಕಬ್ಬಿಣಾಂಶ ಮತ್ತು ಫೋಲಿಕ್ ಅಮ್ಲದ ಮಾತ್ರೆಗಳ ಪೂರೈಕೆ ಮಾಡಿ ಕನಿಷ್ಠ 12 ಗ್ರಾಂನಷ್ಟು ಹಿಮೋಗ್ಲೋಬಿನ್ ಇರುವಂತೆ ನಿರ್ವಹಣೆ ಮಾಡಲಾಗುತ್ತದೆ. ಪ್ರಧಾನಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನದಲ್ಲಿ ಪಾಲ್ಗೊಂಡ ಗರ್ಭಿಣಿಯರು ಕಬ್ಬಿಣಾಂಶದ ಕೊರತೆ ನಿಗಿಸಿಕೊಂಡು ಸುರಕ್ಷಿತ ತಾಯ್ತತನ ಪಡೆಯಿರಿ ಎಂದು ಸಲಹೆ ನೀಡಿದರು.ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್. ಮಂಜುನಾಥ ಮಾತನಾಡಿ, ಗರ್ಭಾವಸ್ಥೆಯಲ್ಲಿ ಎಲ್ಲರೂ 8 ಬಾರಿಯಾದರೂ ಪ್ರಧಾನಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನದಲ್ಲಿ ಭಾಗವಹಿಸಿ ತಪಾಸಣೆ ಮಾಡಿಸಿಕೊಳ್ಳಿ. ಹೆರಿಗೆ ಸಮಯದಲ್ಲಿ ಉಂಟಾಗುವ ತೊಂದರೆಗಳನ್ನು ಮುಂಚಿತವಾಗಿ ಪತ್ತೆಹಚ್ಚಲು ಸೂಕ್ತ ಚಿಕಿತ್ಸೆ ಪಡೆಯಲು ಇದು ಸಹಕಾರಿಯಾಗುತ್ತದೆ ಎಂದು ಹೇಳಿದರು.
ಈ ವೇಳೆ ಒಟ್ಟು 44 ಗರ್ಭಿಣಿಯರಿಗೆ ಉಚಿತ ರಕ್ತ ಪರೀಕ್ಷೆ, ಮಧುಮೇಹ, ರಕ್ತದೊತ್ತಡ ಪರೀಕ್ಷೆ ನಡೆಸಿ ಪ್ರೋಟೀನ್ ಪೌಡರ್, ಕಬ್ಬಿಣಾಂಶ , ಕ್ಯಾಲ್ಸಿಯಂ ಮಾತ್ರೆ ನೀಡಲಾಯಿತು.ಅಭಿಯಾನದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ. ಮೂಗಪ್ಪ, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಹರ್ಷ ಫಾರ್ಮಸಿ ಅಧಿಕಾರಿ ಸತೀಶ್, ಪ್ರಯೋಗ ಶಾಲಾ ತಂತ್ರಜ್ಞಾಧಿಕಾರಿ ಉಷಾ, ನರ್ಸಿಂಗ್ ಅಧಿಕಾರಿ ಮಧು, ಸಮುದಾಯ ಆರೋಗ್ಯಾಧಿಕಾರಿ ಪಾಲಯ್ಯ, ಆರೋಗ್ಯ ಸುರಕ್ಷತಾಧಿಕಾರಿಗಳಾದ ರೇಖಾ, ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಅವಿನಾಶ್, ಪ್ರವೀಣ್, ಗರ್ಭಿಣಿಯರು, ಪೋಷಕರು ಇತರರು ಇದ್ದರು.