ಉಗ್ರರನ್ನು ಮಟ್ಟಹಾಕಿ: ಮಹೇಶ್‌ಕುಮಾರ್

| Published : May 04 2025, 01:31 AM IST

ಸಾರಾಂಶ

ಚಾಮರಾಜನಗರದಲ್ಲಿ ರೈತ ಸಂಘದ ಕಾಯಂ ಆಹ್ವಾನಿತ ಸದಸ್ಯ ಎಚ್.ಸಿ.ಮಹೇಶ್ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು, ಎಚ್.ಎಸ್.ಮಹದೇವಸ್ವಾಮಿ ಇದ್ದಾರೆ.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಕಳೆದ ಏ.೨೨ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್‌ಗಾಂನಲ್ಲಿ ನಡೆದ ೨೬ ಪ್ರವಾಸಿಗರನ್ನು ಹತ್ಯೆಗೈದ ಘಟನೆ ಖಂಡನೀಯ. ಈ ಉಗ್ರರನ್ನು ಮಟ್ಟ ಹಾಕಬೇಕು ಇದಕ್ಕೆ ಎಲ್ಲರೂ ಒಂದಾಗಬೇಕು ಎಂದು ರೈತ ಸಂಘದ ಕಾಯಂ ಆಹ್ವಾನಿತ ಸದಸ್ಯ ಎಚ್.ಸಿ.ಮಹೇಶ್ ಕುಮಾರ್ ಹೇಳಿದರು. ನಗರದ ಜಿಲ್ಲಾ ಕಾರ್ಯನಿರತಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಳೆದ ಹಲವು ವರ್ಷಗಳಿಂದ ಜಮ್ಮು ಗಡಿಯಲ್ಲಿ ಉಗ್ರರ ಉಪಟಳ ನಡೆಯುತ್ತಿದೆ. ಇದಕ್ಕೆ ಪೂರಕವೆಂಬಂತೆ ಪ್ರವಾಸಿ ತಾಣ ಪಹಲ್ಗಾಂನಲ್ಲಿ ಪ್ರವಾಸಕ್ಕೆಂದು ವಿವಿಧೆಡೆಯಿಂದ ಬಂದಿದ್ದ ೨೬ ಪ್ರವಾಸಿಗರನ್ನು ಉಗ್ರರು ಗುಂಡು ಹಾರಿಸಿ ಕೊಲೆಗೈದಿದ್ದಾರೆ. ಇಂತಹ ಸಂಘಟನೆಗಳಿಂದ ಜನರು ನೆಮ್ಮದಿಯಾಗಿ ಉಸಿರಾಡಲು ಆಗುತ್ತಿಲ್ಲ. ಉಗ್ರರು ಕೇವಲ ಹಿಂದೂಗಳಿಗೆ ಮಾತ್ರವಲ್ಲ, ಮುಸ್ಲಿಂ ಸಮುದಾಯಕ್ಕೂ ಮಾರಕವಾಗಿದ್ದಾರೆ ಎಂದರು.ಉಗ್ರರಿಂದ ಯಾವುದೇ ದೇಶ ಅಭಿವೃದ್ದಿ ಹೊಂದಲು ಉಗ್ರರ ನೆಲೆಗಳನ್ನು ಧ್ವಂಸಮಾಡುತ್ತಿರುವ ಭಾರತೀಯ ಸೈನಿಕರಿಗೆ ರೈತಸಂಘ ತುಂಬು ಹೃದಯದ ಸಹಕಾರ ನೀಡಲಿದ್ದು ನಮ್ಮ ತನು, ಮನ, ಧನ ಎಲ್ಲವನ್ನು ಅರ್ಪಿಸಲಿದ್ದೇವೆ ಎಂದರು. ಉಗ್ರರ ಉಪಟಳ ಕೇವಲ ಭಾರತದಲ್ಲೇ ಅಲ್ಲ. ಪ್ರಪಂಚಾದ್ಯಂತ ಅದು ನಿರ್ಮೂಲನೆಯಾಗಬೇಕು, ಮುಂದಿನ ದಿನಗಳಲ್ಲಿ ಇಂತಹ ದುಷ್ಕೃತ್ಯ ನಡೆಯದಂತೆ ಭಾರತ ಸೇರಿದಂತೆ ಎಲ್ಲದೇಶಗಳು ಎಚ್ಚರವಹಿಸಬೇಕು ಎಂದು ಮನವಿ ಮಾಡಿದರು.ಉಗ್ರರನ್ನು ಸದೆಬಡಿಯುತ್ತಿರುವ ಸೈನಿಕರಿಗೆ ತಮ್ಮ ಜಮೀನಿನಲ್ಲೇ ಬೆಳೆದ ಸಾವಯವ ಪದ್ದತಿಯಲ್ಲಿ ಬೆಳೆದ ಹುರುಳಿಕಾಳು, ಸಿರಿಧಾನ್ಯ ಕೊಡಬೇಕು ಎಂಬ ಆಶಯ ಹೊಂದಿದ್ದೇನೆ, ಜಿಲ್ಲಾಡಳಿತ ಇವುಗಳನ್ನು ತಲುಪಿಸುವ ವ್ಯವಸ್ಥೆ ಮಾಡಿಕೊಡಬೇಕು ಎಂದು ಮನವಿ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ಎಚ್.ಎಸ್.ಮಹದೇವಸ್ವಾಮಿ ಇದ್ದರು.