ಅಸಮಾನತೆ ನಿವಾರಣೆಯೇ ಸಾಮಾಜಿಕ ನ್ಯಾಯ ಗುರಿ

| Published : May 28 2024, 01:03 AM IST

ಸಾರಾಂಶ

ಸಾಮಾಜಿಕ ನ್ಯಾಯದ ಪರಿಕಲ್ಪನೆಯಡಿ ಅನೇಕ ಕಾನೂನು ಜಾರಿಗೊಳಿಸಿದ್ದು, ಸಾಮಾಜಿಕ ಅಸಮಾನತೆ ಹೋಗಲಾಡಿಸುವುದೇ ಸಾಮಾಜಿಕ ನ್ಯಾಯದ ಗುರಿಯಾಗಿದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಮಹಾವೀರ ಮ. ಕರೆಣ್ಣವರ ದಾವಣಗೆರೆಯಲ್ಲಿ ಹೇಳಿದ್ದಾರೆ.

- ನ್ಯಾ.ಮಹಾವೀರ ಮ.ಕರೆಣ್ಣವರ ಹೇಳಿಕೆ । ಯುವಜನರಿಗೆ ಸಾಮಾಜಿಕ ನ್ಯಾಯ ಕುರಿತ ತರಬೇತಿ ಕಾರ್ಯಕ್ರಮ

- - - ಕನ್ನಡಪ್ರಭ ವಾರ್ತೆ, ದಾವಣಗೆರೆ

ಸಾಮಾಜಿಕ ನ್ಯಾಯದ ಪರಿಕಲ್ಪನೆಯಡಿ ಅನೇಕ ಕಾನೂನು ಜಾರಿಗೊಳಿಸಿದ್ದು, ಸಾಮಾಜಿಕ ಅಸಮಾನತೆ ಹೋಗಲಾಡಿಸುವುದೇ ಸಾಮಾಜಿಕ ನ್ಯಾಯದ ಗುರಿಯಾಗಿದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಮಹಾವೀರ ಮ. ಕರೆಣ್ಣವರ ಹೇಳಿದರು.

ನಗರದ ವನಿತಾ ಸಮಾಜದಲ್ಲಿ ಸೋಮವಾರ ಆಕ್ಷನ್ ಇನ್ಷಿಯೇಟಿವ್ ಫಾರ್‌ ಡೆವಲಪ್‌ಮೆಂಟ್ ದಾವಣಗೆರೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಟರ್ರೆ ಡೆಸ್ ಹೋಮ್ಸ್‌ ಸಹಕಾರದಲ್ಲಿ ಯುವಕ- ಯುವತಿಯರಿಗೆ ಸಾಮಾಜಿಕ ನ್ಯಾಯ ಕುರಿತ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಶತಮಾನಗಳಿಂದಲೂ ಶೋಷಣೆ ನಡೆಯುತ್ತಲೇ ಇದೆ. ಮತ್ತೊಬ್ಬರನ್ನು ಅಸಹ್ಯ ಮಾಡುವುದು, ಇನ್ನೊಬ್ಬರ ಅವಕಾಶಗಳನ್ನು ಕಿತ್ತುಕೊಳ್ಳುವುದು ಹಿಂದಿನಿಂದಲೂ ನಡೆದಿದೆ. ಅಂತಹ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸ್ವಾತಂತ್ರ್ಯ ಸಂಗ್ರಾಮ ಶುರುವಾಯಿತು. ಸ್ವಾತಂತ್ರ್ಯ ಹೋರಾಟದಲ್ಲಿ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರ ದೇಶದ ಎಲ್ಲರಿಗೂ ಅನುಕೂಲವಾಗಲೆಂಬ ಸದುದ್ದೇಶದಿಂದ ಸಂವಿಧಾನ ಅಳವಡಿಸಿಕೊಂಡೆವು. ಆಗ ದೇಶದಲ್ಲಿ ಸಾಮಾಜಿಕ ನ್ಯಾಯ ಮುನ್ನೆಲೆಗೆ ಬಂದಿತು ಎಂದು ಹೇಳಿದರು.

ಮೂಲಭೂತ ಹಕ್ಕುಗಳು, ಕರ್ತವ್ಯಗಳೇ ಸಾಮಾಜಿಕ ನ್ಯಾಯದ ಮೂಲ ತತ್ವ, ಆಧಾರಗಳಾಗಿವೆ. ಒಬ್ಬ ವ್ಯಕ್ತಿಗೆ ಸಿಗಬೇಕಾದ ಗೌರವ ಸಿಗಬೇಕು. ಜಾತಿ ತಾರತಮ್ಯ, ಲಿಂಗ ತಾರತಮ್ಯ ಆಗಬಾರದು. ಎಲ್ಲರೂ ಸಮಾನ, ಎಲ್ಲರಿಗೂ ಅವಕಾಶ ಎನ್ನುವ ಮನೋಭಾವ ಪ್ರತಿಯೊಬ್ಬರಲ್ಲೂ ಮೂಡಬೇಕು. ನಾವು ಸಂವಿಧಾನದ ಸಾರವನ್ನು ಬದುಕಿನಲ್ಲಿ ಅಳವಡಿಸಿಕೊಂಡಾಗ ಸಾಮಾಜಿಕ ನ್ಯಾಯ ಎತ್ತಿ ಹಿಡಿದಂತಾಗುತ್ತದೆ ಎಂದು ಹೇಳಿದರು.

ವಕೀಲರ ಸಂಘದ ಅಧ್ಯಕ್ಷ, ಹಿರಿಯ ವಕೀಲ ಎಲ್.ಎಚ್. ಅರುಣಕುಮಾರ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷವಾದರೂ ಇಂದಿಗೂ ದೇಶದ ಸಂಪತ್ತು, ಭೂಮಿ, ಅವಕಾಶಗಳು, ಸೌಲಭ್ಯಗಳು ಸಮಾನವಾಗಿ ಹಂಚಿಕೆ ಆಗದಿರುವುದು ದುರಂತ. ಸಂವಿಧಾನದ ಆಶಯಗಳು ಈಡೇರಬೇಕಾದರೆ, ಶೈಕ್ಷಣಿಕ, ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಸಮಾನತೆ ಸಾಧಿಸಬೇಕು. ಜನರು ಇಂದಿಗೂ ಜಾತಿ, ವರ್ಗ, ಧರ್ಮ, ಲಿಂಗದ ಆಧಾರದ ಮೇಲೆ ಸಾಮಾಜಿಕ ನ್ಯಾಯದಿಂದ ವಂಚಿತರಾಗುತ್ತಿದ್ದಾರೆ. ಇದಕ್ಕಾಗಿ ಅನೇಕ ಹೋರಾಟ, ಚಳವಳಿ ನಡೆದಿರುವುದನ್ನು ಯುವಜನರು ಅರ್ಥೈಸಿಕೊಳ್ಳಬೇಕು ಎಂದರು.

ಎಐಡಿ ಸಂಸ್ಥೆ ಕಾರ್ಯದರ್ಶಿ ಡಿ.ಎಸ್‌. ಬಾಬಣ್ಣ ಅಧ್ಯಕ್ಷತೆ ವಹಿಸಿದ್ದರು. ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕೆ.ನಾಗರಾಜ, ಡಿಎಸ್‌ಎಸ್‌ ರಾಜ್ಯ ಸಂಚಾಲಕ ಎಚ್.ಮಲ್ಲೇಶ್‌, ಸಾಮಾಜಿಕ ಕಾರ್ಯಕರ್ತೆ ನಸ್ರೀನ್ ಮಿಠಾಯಿ ಇತರರು ಇದ್ದರು.

- - -

ಬಾಕ್ಸ್ ಅಧಿಕಾರಿಗಾಗಿ ವೇದಿಕೆಯಲ್ಲೇ 30 ನಿಮಿಷ ಕಾದ ಜಡ್ಜ್‌! ಕನ್ನಡಪ್ರಭ ವಾರ್ತೆ ದಾವಣಗೆರೆ

ಯಾವುದೇ ಸಮಾರಂಭಕ್ಕೆ ನ್ಯಾಯಾಧೀಶರು ಮುಖ್ಯ ಅತಿಥಿಯಾಗಿ ಬರುತ್ತಾರೆಂದರೆ ಜನ ಪ್ರತಿನಿಧಿಗಳಾಗಲೀ, ಅಧಿಕಾರಿಗಳಾಗಲೀ, ಸಂಘ- ಸಂಸ್ಥೆಗಳವರಾಗಲೀ ಸರಿಯಾದ ಸಮಯಕ್ಕೆ ಹಾಜರಿರುತ್ತಾರೆ. ಆದರೆ, ಅದಕ್ಕೆ ತದ್ವಿರುದ್ಧ ಘಟನೆ ನಗರದಲ್ಲಿ ಸೋಮವಾರ ವನಿತಾ ಸಮಾಜದಲ್ಲಿ ವರದಿಯಾಗಿದೆ.

ಆಕ್ಷನ್ ಇನ್ಷಿಯೇಟಿವ್ ಫಾರ್‌ ಡೆವಲಪ್ ಮೆಂಟ್ ದಾವಣಗೆರೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಟರ್ರೆ ಡೆಸ್ ಹೋಮ್ಸ್‌ ಸಹಕಾರದಲ್ಲಿ ಯುವಜನರಿಗೆ ಸಾಮಾಜಿಕ ನ್ಯಾಯ ಕುರಿತ ತರಬೇತಿ ಕಾರ್ಯಕ್ರಮಕ್ಕೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಮಹಾವೀರ ಮ. ಕರೆಣ್ಣವರ ಸರಿಯಾದ ಸಮಯಕ್ಕೆ ಹಾಜರಾದರು. ಆದರೆ, ಜಿಲ್ಲಾ ಮಟ್ಟದ ಅಧಿಕಾರಿ ಆಗಮನಕ್ಕಾಗಿ ಅವರು 30 ನಿಮಿಷ ಸೈರಣೆಯಿಂದ ಕಾದಿದ್ದರು.

ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕೆ.ನಾಗರಾಜ ಈಗ ಬರುತ್ತಾರೆ, ಆಗ ಬರುತ್ತಾರೆಂದು 30 ನಿಮಿಷಗಳ ಕಾಲ ನ್ಯಾಯಾಧೀಶ ಮಹಾವೀರ ಮ. ಕರೆಣ್ಣವರ ಅವರನ್ನು ಕಾಯಿಸಿದ್ದು ಮಾತ್ರ ಚರ್ಚೆಗೆ ಕಾರಣವಾಯಿತು. ನಾಗರಾಜ ಅವರ ವಿಳಂಬ ನಡತೆ ಸಭಾಂಗಣದಲ್ಲಿದ್ದವರ ಬೇಸರಕ್ಕೂ ಕಾರಣವಾಯಿತು. ಅಧಿಕಾರಿ 30 ನಿಮಿಷ ತಡವಾಗಿ ಬಂದಾಗಲೂ ನ್ಯಾಯಾಧೀಶರು ಸಮಾಧಾನದಿಂದ ಕಾದಿದ್ದು ಎಲ್ಲರ ಮನ ಗೆದ್ದ ಸಂಗತಿಯಾಯಿತು.

- - - -27ಕೆಡಿವಿಜಿ4, 5:

ಸಾಮಾಜಿಕ ನ್ಯಾಯ ಕುರಿತ ತರಬೇತಿ ಕಾರ್ಯಕ್ರಮವನ್ನು ನ್ಯಾಯಾಧೀಶ ಮಹಾವೀರ ಮ. ಕರೆಣ್ಣವರ ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿದರು.