ಸಾರಾಂಶ
ಮಂಡ್ಯ : ಜೈವಿಕ ಇಂಧನ ಬಳಕೆಯಿಂದ ಪ್ರಕೃತಿ ಅಸಮತೋಲನವನ್ನು ನಿವಾರಿಸಲು ಸಾಧ್ಯ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಎಚ್.ಎಲ್.ನಾಗರಾಜು ತಿಳಿಸಿದರು.
ತಾಲೂಕಿನ ವಿ.ಸಿ.ಫಾರ್ಮ್ ಕೃಷಿ ಮಹಾವಿದ್ಯಾಲಯದಲ್ಲಿ ಜಿಲ್ಲಾಡಳಿತ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಪರಿಸರ ರೂರಲ್ ಡೆವಲಪ್‌ಮೆಂಟ್ ಸೊಸೈಟಿ, ಕೃಷಿ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ನಡೆದ ಅಂತಾರಾಷ್ಟ್ರೀಯ ಜೈವಿಕ ಇಂಧನ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಪ್ರದೇಶದಲ್ಲಿ ಹಿಪ್ಪೇ, ಹೊಂಗೆ, ಬೇವಿನ ಎಣ್ಣೆಯನ್ನು ದಿನನಿತ್ಯದ ಬಳಕೆಗೆ ಉಪಯೋಗಿಸುತ್ತಿದ್ದರು. ಅದರ ಮೂಲಕ ಆದಾಯೋತ್ಪನ್ನ ಚಟುವಟಿಕೆಗಳನ್ನು ನಡೆಸುತ್ತಿದ್ದರು. ಇಂದು ಪ್ರಕೃತಿ ಅಸಮತೋಲನ ಕಾಣುತ್ತಿದೆ. ಇದಕ್ಕೆ ರೈತರು ಜಮೀನುಗಳಲ್ಲಿ ಜೀವ ಸಂಕುಲವಾಗಿರುವ ಸಸ್ಯಗಳನ್ನು ಬೆಳೆಸದೆ ಇರುವುದು ಕಾರಣ ಎಂದರು.
ಜೈವಿಕ ಇಂಧನ ಬಳಕೆಯಿಂದ ಪೆಟ್ರೋಲಿಯಂ ಉತ್ಪನ್ನಗಳನ್ನು ತಡೆಗಟ್ಟಿ ಉತ್ತಮ ಪರಿಸರವನ್ನು ನಿರ್ಮಿಸಲು ಸಾಧ್ಯವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಪ್ರಕೃತಿಯಲ್ಲಿನ ಅಸಮತೋಲನದ ಕಾರಣಕ್ಕೆ ಯಥೇಚ್ಚ ವಾಹನಗಳ ದಟ್ಟಣೆಯಿಂದ ಅಸಮತೋಲನವನ್ನು ಕಾಣುತ್ತಿದ್ದೇವೆ. ಇದರಿಂದಾಗಿ ಗುಡ್ಡ ಕುಸಿತದಂತಹ ಘಟನೆಗಳು ಜರುಗತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಪಶ್ಚಿಮಘಟ್ಟ ಶ್ರೇಣಿಗಳಲ್ಲಿ ಯಥೇಚ್ಚ ಔಷಧೀಯ ಗಿಡಮೂಲಿಕೆಗಳನ್ನು ಕಾಣಬಹುದಾಗಿತ್ತು. ಅಪರೂಪದ ಸಸ್ಯ ಪ್ರಬೇಧಗಳು ಮನುಷ್ಯನ ರೋಗ ರುಜಿನಗಳ ನಿವಾರಣೆಗೆ ಸಾಧ್ಯವಾಗುತ್ತಿದ್ದವು. ಆದರೆ, ಈಗ ಎಲ್ಲರೂ ವಿಜ್ಞಾನದ ವೈದ್ಯಕೀಯ ಕ್ಷೇತ್ರಕ್ಕೆ ಹೋಗುತ್ತಿದ್ದೇವೆ. ವಿದ್ಯಾರ್ಥಿನಿಯರಲ್ಲಿ ಅತಿ ಹೆಚ್ಚು ನೆರೆ ಕೂದಲು ಬರುತ್ತಿದ್ದು, ಇದನ್ನು ತಪ್ಪಿಸಲು, ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಜೈವಿಕ ಇಂಧನದ ಬಳಕೆ ಹೆಚ್ಚಾಗಬೇಕು ಎಂದು ಸಲಹೆ ನೀಡಿದರು.
ವಲಯ ಕೃಷಿ ಸಂಶೋಧನಾ ಕೇಂದ್ರದ ಸಹ ಸಂಶೋಧನಾಧಿಕಾರಿ ಡಾ.ಶಿವಕುಮಾರ್ ಉಪನ್ಯಾಸ ನೀಡಿ, ಹೊಂಗೆ, ಬೇವು, ಜಟ್ರೋಪ ಈ ರೀತಿಯ ಜೈವಿಕ ಇಂಧನ ಗಿಡಗಳ ಬೆಳವಣಿಗೆಗಳಿಂದ ಮಣ್ಣಿನಲ್ಲಿ ಇನ್ನಿತರೆ ಗಿಡಗಳಿಗೆ ಪೂರಕ ಬೆಳವಣಿಗೆ ಸಾಧ್ಯವಾಗುತ್ತದೆ. ಇವುಗಳಲ್ಲಿ ಯಥೇಚ್ಚವಾದ ಅಮ್ಲಜನಕವನ್ನು ಹೊರಸೂಸುತ್ತವೆ. ಪರಿಸರಸ್ನೇಹಿ ಸಸ್ಯ ಪ್ರಬೇಧಗಳು ಇವಾಗಿದ್ದು, ಇವುಗಳ ಬಗ್ಗೆ ವಿಶೇಷ ತಜ್ಞತೆಯನ್ನು ಕೃಷಿ ವಿಜ್ಞಾನದ ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕಾಗಿದೆ ಎಂದು ಕಿವಿಮಾತು ಹೇಳಿದರು.
ಪರಿಸರ ರೂರಲ್ ಡೆವಲಪ್‌ಮೆಂಟ್ ಸೊಸೈಟಿ ಅಧ್ಯಕ್ಷ ಮಂಗಲ ಎಂ.ಯೋಗೀಶ್ ಮಾತನಾಡಿ, 1893, ಆ. 9ರಂದು ಸರ್ ರುಡಾಲ್ಪೋ ಎಂಬ ವಿಜ್ಞಾನಿ ಡೀಸೆಲ್‌ನ್ನು ಪ್ರಥಮ ಬಾರಿಗೆ ಕಡ್ಲೆಕಾಯಿಯಿಂದ ತೆಗೆದು ಯಾಂತ್ರಿಕ ಯಂತ್ರಗಳಿಗೆ ಅಳವಡಿಸಿ, ಈ ಮೂಲಕ ಯಂತ್ರಗಳೂ ಕಾರ್ಯನಿರ್ವಹಿಸಬಹುದು ಎಂಬುದನ್ನು ತೋರಿಸಿಕೊಟ್ಟವರು ಎಂದರು.
ಈ ದಿನದ ನಿಮಿತ್ತ ಅಂತಾರಾಷ್ಟ್ರೀಯ ಜೈವಿಕ ಇಂಧನ ದಿನವನ್ನು ವಿಶ್ವಸಂಸ್ಥೆ ಆಚರಿಸಿಕೊಂಡು ಬರುತ್ತಿದೆ. 2024ರ ಧ್ಯೇಯವಾಕ್ಯ, ಸುಸ್ಥಿರ ಜೈವಿಕ ಇಂಧನಗಳು, ತ್ಯಾಜ್ಯವನ್ನು ಕಡಿಮೆ ಮಾಡುವುದು, ಶಕ್ತಿಯನ್ನು ಪೋಷಿಸುವುದಾಗಿದೆ. ಇದರ ಅರ್ಥವನ್ನು ಅರ್ಥೈಸಿಕೊಂಡು ವಿದ್ಯಾರ್ಥಿಗಳು ಕಾರ್ಯೋನ್ಮುಖರಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕೃಷಿ ಮಹಾವಿದ್ಯಾಲಯದ ಡೀನ್ ಚಂದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಕೃಷಿ ಮಹಾವಿದ್ಯಾಲಯದ ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿಗಳಾದ ಡಾ. ಸುಗಿತಾ, ಡಾ. ಪ್ರವೀಣ್, ಉಪ ಪರಿಸರ ಅಧಿಕಾರಿಗಳಾದ ಭವ್ಯ, ಅಶ್ವಿನಿ ಹಾಜರಿದ್ದರು. ಕಲಾವಿದ ಬಸವರಾಜು ಸಂತೆಕಸಲಗೆರೆ ಪರಿಸರ ಗೀತೆಗಳನ್ನು ಸಾದರಪಡಿಸಿದರು. ಮಳವಳ್ಳಿ ತಾಲೂಕು ದಾಸನದೊಡ್ಡಿಯ ಕುಂದೂರು ಬೆಟ್ಟದಲ್ಲಿ ನಿರ್ಮಿಸಿರುವ ಕೆರೆ- ಕಟ್ಟೆಗಳನ್ನು ಸಂರಕ್ಷಣೆಗೆ ಜೈವಿಕ ಇಂಧನ ಗಿಡಗಳನ್ನು ಬೆಳೆಸಲು ಸಾಂಕೇತಿಕವಾಗಿ ಗಿಡಗಳನ್ನು ವಿತರಿಸಲಾಯಿತು.