ಆಗಸ್ಟ್‌ 13ಕ್ಕೆ ಮಾಗಡಿಗೆ ಕನ್ನಡ ತೇರು ಆಗಮನ: ತಹಸೀಲ್ದಾರ್ ಶರತ್ ಕುಮಾರ್

| Published : Aug 10 2024, 01:42 AM IST

ಸಾರಾಂಶ

ಮಾಗಡಿ ತಾಲೂಕಿಗೆ ಕನ್ನಡ ಜ್ಯೋತಿ ರಥಯಾತ್ರೆ ಆ.13ರಂದು ಮಂಗಳವಾರ ಬೆಳಗ್ಗೆ 10.30ಕ್ಕೆ ಆಗಮಿಸುತ್ತಿದ್ದು ಅದ್ಧೂರಿಯಾಗಿ ಸ್ವಾಗತಿಸಲು ಎಲ್ಲರ ಸಹಕಾರ ಅತಿ ಮುಖ್ಯ ಎಂದು ತಹಸೀಲ್ದಾರ್ ಶರತ್ ಕುಮಾರ್ ಮನವಿ ಮಾಡಿದರು. ಮಾಗಡಿಯಲ್ಲಿ ಪೂರ್ವಭಾವಿ ಸಭೆ ನಡೆಸಿ ಮಾತನಾಡಿದರು.

-ತಾಪಂ ಸಭಾಂಗಣದಲ್ಲಿ ಕನ್ನಡ ಜ್ಯೋತಿ ರಥಯಾತ್ರೆ ಆಗಮನದ ಪೂರ್ವಭಾವಿ ಸಭೆ

ಕನ್ನಡಪ್ರಭ ವಾರ್ತೆ ಮಾಗಡಿ

ತಾಲೂಕಿಗೆ ಕನ್ನಡ ಜ್ಯೋತಿ ರಥಯಾತ್ರೆ ಆ.13ರಂದು ಮಂಗಳವಾರ ಬೆಳಗ್ಗೆ 10.30ಕ್ಕೆ ಆಗಮಿಸುತ್ತಿದ್ದು ಅದ್ಧೂರಿಯಾಗಿ ಸ್ವಾಗತಿಸಲು ಎಲ್ಲರ ಸಹಕಾರ ಅತಿ ಮುಖ್ಯ ಎಂದು ತಹಸೀಲ್ದಾರ್ ಶರತ್ ಕುಮಾರ್ ಮನವಿ ಮಾಡಿದರು.

ಪಟ್ಟಣದ ತಾಪಂ ಸಭಾಂಗಣದಲ್ಲಿ ಕನ್ನಡ ಜ್ಯೋತಿ ರಥಯಾತ್ರೆ ಆಗಮನದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ನೆಲಮಂಗಲ ತಾಲೂಕಿನಿಂದ ಕನ್ನಡ ಜ್ಯೋತಿ ರಥ ಯಾತ್ರೆ ಮಾಗಡಿಯ ಗುಡೇಮಾರನಹಳ್ಳಿಯಿಂದ ಎನ್ಇಎಸ್ ವೃತ್ತದ ಬಳಿ ಕಲಾತಂಡಗಳು, ಶಾಲಾ ಮಕ್ಕಳು, ಪೂರ್ಣಕುಂಭದೊಂದಿಗೆ ಅದ್ಧೂರಿಯಾಗಿ ಸ್ವಾಗತಿಸಲಾಗುವುದು.ಮೈಸೂರು ರಾಜ್ಯ ಕರ್ನಾಟಕ ಎಂದು ಮರುನಾಮಕರಣವಾಗಿ ನ.1ಕ್ಕೆ 50 ವರ್ಷ ಪೂರ್ಣಗೊಳ್ಳುತ್ತಿರುವ ಶುಭ ಸಂದರ್ಭದಲ್ಲಿ ಕರ್ನಾಟಕ ಸಂಭ್ರಮ-50ರ "ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ " ಎಂಬ ಶೀರ್ಷಿಕೆಯಡಿ ಕನ್ನಡ ಜ್ಯೋತಿ ಹೊತ್ತ ರಥಯಾತ್ರೆ ಇತಿಹಾಸ, ಕಲೆ, ಸಾಹಿತ್ಯ, ಸಂಸ್ಕೃತಿ, ನಾಡುನುಡಿಯ ಅರಿವು ಮೂಡಿಸಲು ಪಟ್ಟಣ ಹಾಗೂ ಗ್ರಾಮಗಳ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ರಥಯಾತ್ರೆ ಸಂಚರಿಸುವ ವಿವಿಧ ಹೋಬಳಿ ಹಾಗೂ ಗ್ರಾಪಂಗಳ ಹಾಗೂ ತಾಲೂಕಿನ ಗಡಿಭಾಗದವರೆಗಿನ ಮಾರ್ಗದವರೆಗೂ ಸ್ವಾಗತ, ಪೂಜೆ, ಪುಷ್ಪಾರ್ಚನೆ ಮಾಡಲಾಗುತ್ತದೆ.

ಶಿಷ್ಟಾಚಾರದಂತೆ ಗೌರವಯುತವಾಗಿ ಜ್ಯೋತಿ ರಥಯಾತ್ರೆ ಬರಮಾಡಿಕೊಳ್ಳುವ ಮತ್ತು ಬೀಳ್ಕೊಡುವ ವ್ಯವಸ್ಥೆ ಮಾಡಿಕೊಳ್ಳಲು ಸಾರ್ವಜನಿಕರು, ಜನಪ್ರತಿನಿಧಿಗಳು, ಸಾಹಿತಿಗಳು, ಅಧಿಕಾರಿ ಸಿಬ್ಬಂದಿ, ಕಸಾಪ ಪದಾಧಿಕಾರಿಗಳು, ಕಲಾವಿದರು, ಕನ್ನಡಪರ ಸಂಘಟನೆಗಳು, ಸ್ವಾತಂತ್ರ್ಯ ಹೋರಾಟಗಾರರು, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳನ್ನು ಒಳಗೊಂಡಂತೆ ಎಲ್ಲರ ಸಹಕಾರ ಮುಖ್ಯ ಎಂದು ತಿಳಿಸಿದರು.

ತಾಪಂ ಇಒ ಜಯಪಾಲ್ ಮಾತನಾಡಿ, ರಾಜ್ಯ ಸರ್ಕಾರ ಕನ್ನಡ ಭುವನೇಶ್ವರಿ ತಾಯಿಯ ಜ್ಯೋತಿ ರಥಯಾತ್ರೆ ಮೂಲಕ ಕನ್ನಡ ನಾಡಿನ ಹಿರಿಮೆ, ಗರಿಮೆ ಪ್ರತಿ ಗ್ರಾಮಕ್ಕೂ ತಲುಪಿಸುತ್ತಿರುವುದು ಶ್ಲಾಘನೀಯ. ನಾಡು ನುಡಿಯ, ಸಾಂಸ್ಕೃತಿಕ ಪರಂಪರೆ, ಇತಿಹಾಸ ಮತ್ತು ಕನ್ನಡದ ಮಹತ್ವ ಸಾರಿ ಹೇಳುವ ರಥಯಾತ್ರೆ ಯಶಸ್ಸುಗೊಳಿಸಲು ಮನವಿ ಮಾಡಿದರು.

ತಾಲೂಕು ಕಸಾಪ ಅಧ್ಯಕ್ಷ ಪದ್ಮನಾಭ, ಮುಖಂಡರಾದ ಮಾಡಬಾಳ್ ಜಯರಾಂ, ಕಲ್ಕರೆ ಶಿವಣ್ಣ ಮಾತನಾಡಿದರು. ತಾಲೂಕು ಆರೋಗ್ಯಾಧಿಕಾರಿ ಡಾ.ಚಂದ್ರಶೇಖರ್, ಪುರಸಭಾ ಮುಖ್ಯಾಧಿಕಾರಿ ಶಿವರುದ್ರಯ್ಯ, ವಲಯ ಅರಣ್ಯಾಧಿಕಾರಿ ಚೈತ್ರ, ಸಮಾಜ ಕಲ್ಯಾಣ ಅಧಿಕಾರಿ ಪ್ರಕಾಶ್, ರಾಜ್‍ಕುಮಾರ್ ಅಭಿಮಾನಿ ಸಂಘದ ಅಧ್ಯಕ್ಷ ಬಸವಣ್ಣ, ರೈತ ಸಂಘದ ಶಿವಲಿಂಗಯ್ಯ ಇತರರು ಭಾಗವಹಿಸಿದ್ದರು.